ರಾಜ್ಯಾದ್ಯಂತ 174 ಕ್ಷೇತ್ರಗಳಲ್ಲಿ ‘ಜನತಾ ಜಲಧಾರೆ’ ರಥಯಾತ್ರೆ ಪ್ರಾರಂಭ ; ಬಿ.ಬಿ. ನಿಂಗಯ್ಯ

0
207

ಚಿಕ್ಕಮಗಳೂರು: ರಾಜ್ಯಾದ್ಯಂತ ಜನತಾ ಜಲಧಾರೆ ರಥಯಾತ್ರೆಯು ಸುಮಾರು 174 ಕ್ಷೇತ್ರಗಳಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಪ್ರಾರಂಭಗೊಳ್ಳಲಿದೆ ಎಂದು ಮಾಜಿ ಸಚಿವ ಬಿ. ಬಿ. ನಿಂಗಯ್ಯ ಹೇಳಿದರು.

ನಗರದ ಜೆಡಿಎಸ್ ಕಛೇರಿಯಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ‘ಜನತಾ ಜಲಧಾರೆ’ ಪತ್ರವನ್ನು ಬಿಡುಗಡೆ ಮಾಡಿ ಅವರು ಮಾತನಾಡಿ, ರಾಜ್ಯದಲ್ಲಿ ಉಗಮಿಸುವ ಜೀವನದಿಗಳ ಸಮಗ್ರ ಜಲನೀತಿಯನ್ನು ರೂಪಿಸಲು ಹಾಗೂ ಕೃಷಿಯೇತರ ಚಟುವಟಿಕೆಗೆ ನೀರು ಸಂಪೂರ್ಣ ಬಳಕೆ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಮಾಜಿ ಪ್ರಧಾನಿಗಳ ಮಾರ್ಗದರ್ಶನದಲ್ಲಿ ಜನತಾ ಜಲಧಾರೆ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸುವ ಜೊತೆಗೆ ಜಿಲ್ಲೆಗೂ ಆಗಮಿಸಲಿದೆ, ಜಿಲ್ಲೆಯ ಜೀವನದಿಗಳ ಉಗಮ ತವರುರಾದ ಮೂಡಿಗೆರೆ, ಕೊಟ್ಟಿಗೆಹಾರ, ಬಾಳೆಹೊನ್ನೂರು, ಎನ್. ಆರ್. ಪುರ, ಲಕ್ಕವಳ್ಳಿ ಹಾಗೂ ಕಡೂರು ತಾಲ್ಲೂಕು ಮಾರ್ಗದ ಮೂಲಕ ಸಂಚರಿಸಿ ಬೆಂಗಳೂರಿಗೆ ತೆರಳಲಿದೆ ಎಂದರು.

ರಥಯಾತ್ರೆಯು ಸಂಚರಿಸುವ ಎಲ್ಲಾ ಕ್ಷೇತ್ರಗಳ ನದಿಗಳ ಉಗಮ ಸ್ಥಾನದ ನೀರನ್ನು ಸಂಗ್ರಹಿಸುವ ಮೂಲಕ ಒಟ್ಟು 596 ಕಿ. ಮೀ. ವ್ಯಾಪ್ತಿಯಲ್ಲಿ ಸಾಗಲಿದೆ ಎಂದ ಅವರು ಈ ಕಾರ್ಯಕ್ರಮವನ್ನು ಆಯಾ ಭಾಗದ ಮಾಜಿ ಶಾಸಕರು, ಪಕ್ಷದ ಮುಖಂಡರು ಭಾಗವಹಿಸಿ ಜಿಲ್ಲೆಯಲ್ಲಿ ರಥಯಾತ್ರೆಯನ್ನು ಯಶಸ್ವಿಗೊಳಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಕುಡಿಯುವ ನೀರು ಪ್ರತಿಯೊಬ್ಬ ಜೀವಿಗೂ ಅವಶ್ಯ, ನೀರಿಲ್ಲದೇ ಯಾರೂ ಬದುಕಲು ಸಾಧ್ಯವಿಲ್ಲ. ಇದನ್ನು ಬಳಕೆ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲಗೊಂಡಿದೆ. ಆ ಉದ್ದೇಶದಿಂದ ಸಮಗ್ರ ಜಲನೀತಿಯನ್ನು ರೂಪಿಸುವ ಮೂಲಕ ನಾಗರೀಕರಿಗೆ ನೀರಿನ ಬಳಕೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜನತಾ ಜಲಧಾರೆ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ನಾಡಿನ ರೈತರಿಗಾಗಿ ಜೆಡಿಎಸ್ ಬಹಳಷ್ಟು ಕೆಲಸಗಳನ್ನು ಮಾಡಿವೆ. ಐದು ಮುಖ್ಯಮಂತ್ರಿಗಳನ್ನು ಪಡೆದಂತಹ ಪಕ್ಷ ಜೆಡಿಎಸ್. ರಾಜ್ಯದಲ್ಲಿ ವಿಶೇಷವಾಗಿ ಕೃಷಿ ಕ್ಷೇತ್ರಕ್ಕೆ, ರೈತರಿಗೆ, ಕಾರ್ಮಿಕರಿಗೆ ಸೇರಿದಂತೆ ಎಲ್ಲಾ ವ್ಯಾಪಾರಿಗಳಿಗೂ ಸ್ಪಂದಿಸುವ ಮೂಲಕ ಸದೃಢ ಪಕ್ಷವಾಗಿ ಗುರುತಿಸಿಕೊಂಡಿದೆ ಎಂದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಸ್. ಸುಧಾಕರ್ ಶೆಟ್ಟಿ ಮಾತನಾಡಿ ನೀರಾವರಿ ಕ್ಷೇತ್ರದಲ್ಲಿ ಹೆಚ್ಚಿನ ಒತ್ತು ಕೊಟ್ಟಿರುವ ಪಕ್ಷವೆಂದರೆ ಜನತಾದಳ. ಈ ಲಾಭವನ್ನು ಇತರೆ ಪಕ್ಷಗಳು ಪಡೆದುಕೊಳ್ಳುತ್ತಿವೆ ಎಂದು ವಿಷಾಧ ವ್ಯಕ್ತಪಡಿಸಿದ ಅವರು ಹೆಚ್. ಡಿ. ದೇವೇಗೌಡ ಅವರು ಎಂದಿಗೂ ಕೂಡಾ ಕುಡಿಯುವ ನೀರಿನ ವಿಚಾರದಲ್ಲೂ ಯಾರೊಂದಿಗೂ ರಾಜೀ ಮಾಡಿಕೊಳ್ಳದೇ ರೈತರ ಪರವಾಗಿ ನಿಂತಿದ್ದರು ಎಂದರು.

ರಾಜ್ಯದ ಅಭಿವೃದ್ದಿ ಪೂರಕವಾಗಿ ಜನತಾದಳ ಪಕ್ಷ ಕೆಲಸ ಮಾಡುತ್ತಿದೆ. ರೈತರ ಹಿತದೃಷ್ಟಿಯಿಂದ ಜನತಾ ಜಲಧಾರೆ ರಥಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದಕ್ಕೆ ರೈತರು ಹಾಗೂ ಮಹಿಳೆಯರು ಭಾಗವಹಿಸುವ ಮೂಲಕ ಸಹಕಾರ ನೀಡಬೇಕು ಎಂದು ಆಗ್ರಹಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here