ರಾಷ್ಟ್ರಪತಿಯವರ ಅಂಕಿತ ಹಾಕಿಸುವವರೆಗೂ ನಮ್ಮ ರೈತ ಸಂಘದ ಪ್ರತಿಭಟನೆ ನಡೆಯುತ್ತಿರುತ್ತದೆ

0
212

ಶಿಕಾರಿಪುರ: ದೇಶದಲ್ಲಿ ರೈತ ವಿರೋಧಿ ಕಾಯಿದೆ ಜಾರಿಗೆ ತಂದು ಸಂಸತ್ತಿನಲ್ಲಿ ಅಂಗಿಕಾರ ಮಾಡುವುದಲ್ಲದೇ, ಆ ಕಾಯಿದೆಗೆ ರಾಷ್ಟ್ರಪತಿಯವರ ಸಹಿ ಹಾಕಿಸುವುದರ ಮೂಲಕ ಜಾರಿಗೆ ತಂದ ಮೂರು ಮಸೂದೆಯನ್ನು ಏಕಾಏಕಿ ಹಿಂಪಡೆಯುವುದಾಗಿ ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಯಾವ ರೀತಿಯಲ್ಲಿ ಅದನ್ನು ಜಾರಿಗೆ ತಂದರೋ ಅದೇರೀತಿ ಸದನದಲ್ಲಿ ವಿಷಯ ಮಂಡಿಸಿ ವಾಪಾಸು ಪಡೆದ ಬಿಲ್ ಗೆ ಪುನಃ ರಾಷ್ಟ್ರಪತಿಯವರ ಅಂಕಿತ ಹಾಕಿಸುವವರೆಗೂ ನಮ್ಮ ರೈತ ಸಂಘದ ಪ್ರತಿಭಟನೆ ನಡೆಯುತ್ತಿರುತ್ತದೆ ಎಂದು ರೈತ ಮುಖಂಡ ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಈಶ್ವರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದು ಪಟ್ಟಣದ ಶಿರಾಳಕೊಪ್ಪ ರಸ್ತೆಯ ಪ್ರವಾಸಿ ಮಂದಿರದ ವೃತ್ತದಲ್ಲಿ (ಶಿರಾಳಕೊಪ್ಪ ವೃತ್ತ) ರೈತ ಸಂಘದ ತಾ.ಘಟಕದ ವತಿಯಿಂದ ಎಪಿಎಂಸಿ ಕಾಯ್ದೆ ವಿರೋಧಿಸಿ, ವಿದ್ಯುತ್, ಬೆಲೆ ಏರಿಕೆ ಸಹಿತ ರೈತ ವಿರೋಧಿ ನೀತಿ ಖಂಡಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ವಿವಿಧ ರಾಜ್ಯಗಳ ರೈತರು, ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ಹೊರಾಟದ ಹಾದಿ ಹಿಡಿದಿದ್ದರು. ಈ ರೈತರಲ್ಲಿ ಏಳು ನೂರಕ್ಕೂ ಹೆಚ್ಚಿನ ರೈತರು ಮರಣ ಹೊಂದಿದರು ಅಷ್ಟು ಜನ ರೈತರು ಮರಣ ಹೊಂದಿದ ನಂತರ ದೇಶದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಕೃಷಿ ಕಾಯ್ದೆಯನ್ನು ವಾಪಾಸು ಪಡೆಯುವುದಾಗಿ ತಿಳಿಸಿದ್ದಾರೆ ಇದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ನೀವು ಯಾವ ರೀತಿ ಪಾರ್ಲಿಮೆಂಟ್ ನಲ್ಲಿ ಕರಾಳ ಮಸೂದೆಯನ್ನು ಜಾರಿಗೆ ತಂದು ರಾಷ್ಟ್ರಪತಿಯವರ ಅಂಕಿತ ಹಾಕಿಸಿ ಜಾರಿಗೆ ತಂದರೋ, ಅದೇರೀತಿ ಪಾರ್ಲಿಮೆಂಟ್ ನಲ್ಲಿ ಮಸೂದೆಯನ್ನು ವಾಪಸ್ ಪಡೆದಿರುವ ಬಿಲ್ ಗೆ ರಾಷ್ಟ್ರಪತಿಯವರ ಅಂಕಿತ ಹಾಕಿಸುವವರೆಗೂ ನಮ್ಮ ಹೋರಾಟ ನಡೆಸಲಾಗುವುದು ಎಂದರು.

ರೈತರು ಮತ್ತು ಸಾರ್ವಜನಿಕರು ದಿನನಿತ್ಯ ಬಳಸುವ ಪೆಟ್ರೋಲ್ ಡೀಸೆಲ್ ಬೆಲೆಯನ್ನು 60 – 70 ರೂಪಾಯಿಯಿಂದ100 – 110 ರವರೆಗೆ ಏರಿಕೆ ಮಾಡಿ ಈಗ ಕೇವಲ 7 ರೂಪಾಯಿ ಇಳಿಕೆ ಮಾಡುವ ಮೂಲಕ ತಮ್ಮ ಕೃಪಾಶೀರ್ವಾದವಿರುವ ದೃಶ್ಯ ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರಲ್ಲದೇ, ದೇಶದ ಜನತೆಗೆ ಕಣ್ಣೊರೆಸುವ ತಂತ್ರ ಮಾಡುವ ಮೂಲಕ ದ್ರೋಹ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಟ್ರಸ್ಟ್ ಉದ್ಘಾಟನೆ ಮಾಡಿಕೊಂಡಿದ್ದು ದೃಶ್ಯ ಮಾಧ್ಯಮವೊಂದು ಕಳೆದ ಒಂದು ವರ್ಷದಿಂದ ಆ ಟ್ರಸ್ಟ್ ಬಗ್ಗೆ ಅಭಿಯಾನ ನಡೆಸುತ್ತಿದ್ದು ಟ್ರಸ್ಟ್ ಬಗ್ಗೆ ಪ್ರಶ್ನಿಸಿದರೆ, ಯಾವುದೇ ರೀತಿಯ ಉತ್ತರ ನೀಡುತ್ತಿಲ್ಲ. ಇದರಿಂದ ಅರ್ಥವಾಗುತ್ತದೆ ದೇಶದ ಪ್ರಧಾನಿ ಜನತೆಗೆ ವಂಚನೆ ಮಾಡಲು ಮುಂದಾಗಿದ್ದಾರೆ ಎಂದು ಅವರು ತಿಳಿಸಿದರು.

ರೈತ ಮುಖಂಡ ಬಸವರಾಜ್ ಪಾಟೀಲ್ ಮಾತನಾಡಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದ ಕೃಷಿ ಕಾಯ್ದೆಯಿಂದ 700 ಜನ ರೈತರು ಮೃತ ಪಟ್ಟಿದ್ದಾರೆ. ಇದಕ್ಕೆ ನೇರ ಹೊಣೆ ನರೇಂದ್ರ ಮೋದಿಯವರಾಗಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಿ ಮರಣ ಹೊಂದಿದ ರೈತರ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡಬೇಕು. ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದ ಕೃಷಿ ಕಾಯ್ದೆಯನ್ನು ವಾಪಾಸು ಪಡೆಯುವುದಾಗಿ ತಿಳಿಸಿದ್ದಾರೆ, ಇದಕ್ಕೆ ಕಾರಣ ಮುಂದಿನ ದಿನಗಳಲ್ಲಿ ವಿವಿಧ ರಾಜ್ಯಗಳ ಚುನಾವಣಾ ಗಿಮಿಕ್ ಆಗಿದೆ. ಈಗಾಗಲೇ ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಒಂದು ಕ್ಷೇತ್ರದಲ್ಲಿ ಗೆದ್ದು ಇನ್ನೋಂದು ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ. ಇದರಿಂದ ಭಯಗೊಂಡ ಪ್ರಧಾನಿ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಪೆಟ್ರೋಲ್ ಡೀಸೆಲ್ ಬೆಲೆಯನ್ನು ಅಲ್ಪ ಮಟ್ಟಿಗೆ ಕಡಿಮೆ ಮಾಡುವುದಲ್ಲದೆ, ಕೃಷಿ ಕಾಯ್ದೆಯನ್ನು ವಾಪಾಸು ಪಡೆಯುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಿ ವೈ ರವಿ ಮಾಜಿ ಸೈನಿಕರು, ಹೊನ್ನಪ್ಪ, ಶಿವಮೂರ್ತ್ಯಪ್ಪ, ದಾನಪ್ಪ, ಪರಮೇಶ್ವರಪ್ಪ, ಬಲಿಂದ್ರಪ್ಪ, ಗಿಡ್ಡೇಶ್, ಅಬ್ದುಲ್ ಮುನಾಫ್, ಬಸವರಾಜ್ ಸೇರಿದಂತೆ ಅನೇಕರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here