ರಿಪ್ಪನ್ಪೇಟೆ: 45 ವರ್ಷದ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಅಭಿಯಾನ ದೇಶವ್ಯಾಪಿ ಅರಂಭಗೊಳಿಸಲಾಗಿ ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊವೀಡ್ ಲಸಿಕೆ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಲಸಿಕೆ ಹಾಕಿಸಿಕೊಳ್ಳಲು ಬಂದ ಹಲವರು ಬಂದ ದಾರಿಗೆ ಸುಂಕವಿಲ್ಲ ಎಂದು ಗೊಣಗುತ್ತ ಹೊರಟು ಹೋದರು.
ಈಗಾಗಲೇ ರಿಪ್ಪನ್ಪೇಟೆಯ ಗವಟೂರು ಗ್ರಾಮದಲ್ಲಿ ಕೊರೊನಾದಿಂದಾಗಿ ವ್ಯಕ್ತಿಯೊಬ್ಬರು ಮರಣಹೊಂದಿದ್ದು ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ನೂರಾರು ಹಳ್ಳಿಗಳ 45 ವರ್ಷ ಮೇಲ್ಪಟ್ಟ ಜನರು ಲಸಿಕೆ ಹಾಕಿಸಿಕೊಳ್ಳಲು ಅಸ್ಪತ್ರೆಗೆ ಭೇಟಿ ನೀಡಿದರೆ ಅಲ್ಲಿ ಲಸಿಕೆ ಇಲ್ಲವೆಂದು ನಿರುತ್ಸಾಹದಿಂದ ವಾಪಾಸ್ ಆಗುವಂತಾಯಿತು.
ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ ಅಸ್ಪತ್ರೆಗೆ ಭೇಟಿ ನೀಡಿ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದು ನಾಳೆ ಮಧ್ಯಾಹ್ನದ ವೇಳೆಗೆ ಲಸಿಕೆ ತರಿಸಲಾಗುವುದು, ಯಾರು ಭಯಪಡುವ ಅಗತ್ಯವಿಲ್ಲ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಧ್ಯಮದವರಿಗೆ ವಿವರಿಸಿ, ಕೊರೊನಾ ಮಹಾಮಾರಿ ರಿಪ್ಪನ್ಪೇಟೆಯಲ್ಲಿನ ಹಲವರಿಗೆ ಕಾಣಿಸಿಕೊಂಡಿದ್ದು ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳನ್ನು ಮತ್ತು ಪೊಲೀಸ್ ಠಾಣಾಧಿಕಾರಿಗಳಿಂದ ಮಾಹಿತಿ ಪಡೆದು ಶಾಸಕ ಹರತಾಳು ಹಾಲಪ್ಪನವರಿಗೆ ದೂರವಾಣಿಯ ಮೂಲಕ ವಿವರಣೆ ನೀಡಿದರು.