ರಿಪ್ಪನ್ಪೇಟೆ: ಅಪರಿಚಿತನೊಬ್ಬ ಸಾಲ ಕೇಳುವ ನೆಪದಲ್ಲಿ ಮನೆಗೆ ಬಂದು ನಗದು ಹಾಗೂ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾದ ಘಟನೆ ರಿಪ್ಪನ್ಪೇಟೆ ಠಾಣಾ ವ್ಯಾಪ್ತಿಯ ಬಾಳೂರು ಗ್ರಾಮದ ಗುರುವಾರ ಸಂಜೆ ನಡೆದಿದೆ.
ಬಾಳೂರು ಗ್ರಾಮದ ಗಣಪತಿ ದೇವಸ್ಥಾನದಲ್ಲಿ ಅರ್ಚಕರಾಗಿರುವ ಕೃಷ್ಣಮೂರ್ತಿ ಭಟ್ ಎಂಬುವರು ಎಂದಿನಂತೆ ದೇವಸ್ಥಾನದ ಪೂಜೆ ಮುಗಿಸಿ ಮನೆ ಸಮೀಪ ಬಂದಿದ್ದರು ಆಗ ಅಪರಿಚಿತ ವ್ಯಕ್ತಿಯೋರ್ವ ಬೈಕ್ನಲ್ಲಿ ಬಂದಿದ್ದು ಪರಿಚಿತನಂತೆ ಅರ್ಚಕ ಕೃಷ್ಣಮೂರ್ತಿ ಭಟ್ರನ್ನು ಮಾತನಾಡಿಸುತ್ತಾ ಮನೆಯ ಬಳಿ ಬಂದಿದ್ದಾನೆ. ನನಗೆ ತುರ್ತಗಿ 20 ಸಾವಿರ ರೂ. ಹಣದ ಅಗತ್ಯ ಬಿದ್ದಿದೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾನೆ.

ಕೃಷ್ಣಮೂರ್ತಿ ಭಟ್ಟರು ಮನೆಯ ಒಳಗೆ ಹೋಗಿ ತಮ್ಮ ಬಳಿಯಲ್ಲಿದ್ದ ಕೇವಲ 13 ಸಹಸ್ರ ರೂ. ಮಾತ್ರ ಇದೆ ಎಂದು ಹೇಳಿ ಆ ಹಣವನ್ನು ಅವನಿಗೆ ಕೊಡಲು ಮುಂದಾಗುತ್ತಿದ್ದಂತೆಯೇ ಆ ವ್ಯಕ್ತಿ ನಗದು ಹಾಗೂ ಭಟ್ಟರ ಕೊರಳಿನಲ್ಲಿದ್ದ 15 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಎರಡು ನಕಲಿ ಮೊಬೈಲ್ ನಂಬರ್ ನೀಡಿ ತಮಗೆ ಊರಿಗೆ ಹೋಗಿ ಹಣ ಮತ್ತು ಬಂಗಾರವನ್ನು ಮರಳಿಸುತ್ತೆನೆಂದು ನಂಬಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಭಟ್ಟರು ಕೆಲ ಸಮಯದ ಬಳಿಕ ವಂಚಿಸಿ ಪರಾರಿಯಾಗುವ ಮುನ್ನ ನೀಡಲಾದ ಮೊಬೈಲ್ ನಂಬರಿಗೆ ಸಂಪರ್ಕಿಸಲು ಪ್ರಯತ್ನಿಸಿದಾಗ ವಂಚನೆ ಮಾಡಿದ್ದಾನೆಂಬುದು ತಿಳಿದು ತಕ್ಷಣ ರಿಪ್ಪನ್ಪೇಟೆ ಠಾಣೆಗೆ ಬಂದು ದೂರು ನೀಡಿದ್ದಾರೆ.
