ರಿಪ್ಪನ್‌ಪೇಟೆ: ಮೆಸ್ಕಾಂ ಇಲಾಖೆ ದಿವ್ಯ ನಿರ್ಲಕ್ಷ್ಯ, ವಿದ್ಯುತ್ ಟ್ರಾನ್ಸ್‌ಫಾರ್ಮರ್ ಆವರಿಸಿರುವ ಗಿಡ ಗಂಟಿಗಳು..! ಜೀವ ಭಯದಲ್ಲಿ ಗ್ರಾಮಸ್ಥರು

0
719

ರಿಪ್ಪನ್‌ಪೇಟೆ: ವಿದ್ಯುತ್ ಕಂಬದ ಸುತ್ತ ಗಿಡಗಂಟಿ ಬೆಳೆಯದಂತೆ ಕಡಿದು ಸ್ವಚ್ಚಗೊಳಿಸುವ ಮೂಲಕ ಲೈನ್‌ನ ತಂತಿಗಳು ಒಂದಕ್ಕೊಂದು ತಾಗಿ ಬೆಂಕಿ ಹತ್ತಿಕೊಂಡರೆ ಭಾರಿ ಅವಘಡ ಸಂಭವಿಸುವುದೆಂಬ ಉದ್ದೇಶದಿಂದಾಗಿ ಇಲಾಖೆಯ ಸಿಬ್ಬಂದಿಗಳು ಮುಂಜಾಗ್ರತಾ ಕ್ರಮವಾಗಿ ಕಡಿದು ಹಾಕುತ್ತಾರೆ. ಆದರೆ ರಿಪ್ಪನ್‌ಪೇಟೆ ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಸಮೀಪದ ತಳಲೆ ಗ್ರಾಮದ ಮಜರೆ ಕಗ್ಗಲಿ ಎಂಬಲ್ಲಿ ಅಳವಡಿಸಲಾದ ಟ್ರಾನ್ಸ್‌ಫಾರ್ಮರ್ ಬಳಿಯಲ್ಲಿ ಲೈನ್ ಕೈಗೆ ಎಟಕುವಂತಾಗಿ ಜೋತು ಬಿದ್ದಿರುವುದು ಮತ್ತು ಗಿಂಡ-ಗಂಟಿಗಳು ಬೆಳೆದು ಕಂಬ, ಲೈನ್ ಎಲ್ಲಿದೆ ಎಂಬುವುದೆ ತಿಳಿಯದಾಗಿದೆ….!

ಮಲೆನಾಡಿನಲ್ಲಿ ಕಳೆದ ಒಂದು ವಾರದಿಂದ ಬಿಸಿಲ ಝಳ ಹೆಚ್ಚಾಗುತ್ತಿದ್ದು ಬೇಸಿಗೆ ಕಾಲವಾಗಿರುವ ಕಾರಣ ಗಿಡ,ಮರಗಳ ಒಣಗಿದ ಎಲೆಗಳು ಉದುರಿಹೋಗುತ್ತಿದ್ದು ಆಕಸ್ಮಿಕವಾಗಿ ಲೈನ್ ತಂತಿಗಳು ತಾಗಿ ಬೆಂಕಿ ಹೊತ್ತಿಕೊಂಡರೆ ಇಡೀ ಊರೇ ಸರ್ವನಾಶವಾಗುವುದು ಎಂಬ ಭಯದಲ್ಲಿ ಗ್ರಾಮಸ್ಥರು ಮತ್ತು ರೈತ ಸಮೂಹ ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.

ಇತ್ತೀಚೆಗೆ ಮಾಧ್ಯಮ ಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹಿರಿಯರಾದ ಪುಟ್ಟಸ್ವಾಮಿಗೌಡ, ಷಣ್ಮುಖಪ್ಪ, ಚನ್ನವೀರಪ್ಪಗೌಡ ಇನ್ನಿತರರು ಮಾತನಾಡಿ, ಇಷ್ಟು ಅಪಾಯದ ಸ್ಥಿತಿಯಲ್ಲಿರುವ ವಿದ್ಯುತ್ ಲೈನ್ ಮತ್ತು ಟ್ರಾನ್ಸ್‌ಫಾರ್ಮರ್, ವಿದ್ಯುತ್ ಕಂಬಗಳು ಕಾಣದೇ ಯಾವುದೇ ಸಂದರ್ಭದಲ್ಲಿ ಅಪಾಯ ಸಂಭವಿಸುವುದೋ ಎಂಬ ಜೀವಭಯ ಕಾಡಲಾರಂಭಿಸಿದೆ.

ಇಷ್ಟಾದರೂ ಮೆಸ್ಕಾಂ ಇಲಾಖೆ ದಿವ್ಯ ನಿರ್ಲಕ್ಷ್ಯ ತಾಳಿದ್ದು, ಟ್ರಾನ್ಸ್‌ಫಾರ್ಮರ್ ಸುತ್ತುವರಿದಿರುವ ಬಳ್ಳಿಗಳು ಮತ್ತು ಪೊದೆಯನ್ನು ಕತ್ತರಿಸುವ ಗೋಜಿಗೆ ಹೋಗಿಲ್ಲ. ಇದು ಮುಂದಿನ ದಿನಗಳಲ್ಲಿ ಅನಾಹುತಗಳಿಗೆ ಎಡೆಮಾಡಿಕೊಡುವ ಸಾಧ್ಯತೆಗಳಿದ್ದು, ಮೆಸ್ಕಾಂ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here