ಭೂಮಿ ಖರೀದಿ ಎಸ್.ಆರ್. ದರಪಟ್ಟಿ ಪರಿಷ್ಕರಿಸುವಂತೆ ರೈತಸಂಘ ಹಾಗೂ ಹಸಿರು ಸೇನೆ ಒತ್ತಾಯ

0 46

ಶಿಕಾರಿಪುರ : ರಾಜ್ಯದ  ಉಪ ನೋಂದಾವಣೆ ಕಛೇರಿಯಲ್ಲಿ ಭೂಮಿ ಖರೀದಿಯ ಎಸ್ ಆರ್ ದರಪಟ್ಟಿಯು ಹಳೇಯ ಓಬಿರಾಯನ ದರಪಟ್ಟಿಯಾಗಿದ್ದು, ಇದನ್ನು ಕೂಡಲೆ ಪರಿಷ್ಕರಿಸಿ ನೂತನವಾದ ದರಪಟ್ಟಿಯನ್ನು ಮಾಡಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಂಚಾಲಕರಾದ ವಸಂತ ಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದರು.

ಪಟ್ಟಣದ ಸುದ್ದಿಮನೆಯಲ್ಲಿ ಬುಧವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದ ಸಬ್ ರಿಜಿಸ್ಟ್ರಾರ್ (ಉಪನೋಂದಾವಣಿ) ನಲ್ಲಿ ಪ್ರತೀ ನಾಲ್ಕು ವರ್ಷಗಳಿಗೊಮ್ಮೆಯಂತೆ ಭೂಮಿ ಖರೀದಿ ಬೆಲೆ ಪರಿಷ್ಕರಿಸಿ ದರ ಪಟ್ಟಿಯನ್ನು ಎಲ್ಲಾ ಉಪನೋಂದಾವಣಿ ಕಛೇರಿಯಲ್ಲಿ ಅಳವಡಿಸುವ ಕೆಲಸವಾಗಿಬೇಕೀದೆ. ಆದರೆ ಸಬ್ ರಿಜಿಸ್ಟ್ರಾರ್ ಕಛೇರಿಗಳಲ್ಲಿ  ಈಗಿನ ದರ ಪಟ್ಟಿಯು ಓಬಿರಾಯನ ಕಾಲದ ದರವಾಗಿದ್ದು ಇದನ್ನು ಕೂಡಲೇ ಪರಿಷ್ಕರಿಸಿ ನೂತನವಾದ ದರಪಟ್ಟಿಯಂತೆ ನೋಂದಾವಣಿ ಮಾಡಬೇಕು ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಭೂಮಿಯ ಬೆಲೆ 70 ರಿಂದ 80 ಲಕ್ಷದವರೆಗಿದ್ದು,ಎಸ್ ಆರ್ ಬೆಲೆ 9 ರಿಂದ14 ಲಕ್ಷದವರಿಗಿದೆ. ಆದರೆ ಅನೇಕ ರೈತರ ಭೂಮಿಯನ್ನು ಅತಿಹೆಚ್ಚು ಭೂಮಿಗಳನ್ನು ಸರ್ಕಾರಿ ನೌಕರರು ಖರೀದಿಸುತ್ತಿದ್ದು, ಅವರು ಭೂಮಿಯ ಮೇಲೆ ಬಂಡವಾಳ ಹಾಕುತ್ತಿದ್ದಾರೆ. ಶಿಕಾರಿಪುರ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಮಾರುಕಟ್ಟೆ ದರದಂತೆ ಭೂಮಿಯ ಬೆಲೆ ಒಂದು ಎಕರೆಗೆ 9 ಲಕ್ಷದಿಂದ ಒಂದು ಕೋಟಿ ರೂಪಾಯಿಗಳ ಸಮೀಪವಿದ್ದರೂ, ಸರ್ಕಾರಿ ನೌಕರರು ರೈತರಿಂದ ಕೊಂಡುಕೊಂಡು ನೋಂದಾವಣಿ‌ ಮಾಡಿಕೊಂಡು ಸರ್ಕಾರಕ್ಕೆ 9 ರಿಂದ 14 ಲಕ್ಷ ಮಾತ್ರ ರಾಜ ಹಣ ಕಟ್ಟುತ್ತಿದ್ದಾರೆ. ಇನ್ನುಳಿದ ಬ್ಲಾಕ್ ಹನಿಯನ್ನು (ಕಪ್ಪು ಹಣವನ್ನು) ವೈಟ್ ಮನಿಯನ್ನಾಗಿಸಿಕೊಳ್ಳುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು. 

ಸರ್ಕಾರಿ ನೌಕರರು ತಮ್ಮ ವೇತನ ಶ್ರೇಣಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಆದರೆ ರೈತರ ಭೂಮಿ ಬೆಲೆ ಕಡಿಮೆಯಾಗಿಯೇ ಇದೆ. ಇದರಿಂದಾಗಿ ರೈತರ ಭೂಮಿ ಉಳಿಸಿಕೊಳ್ಳಲು ಹೈರಾಣಾಗುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಕನಿಷ್ಟ ಒಂದರಿಂದ ಎರಡು ಕೋಟಿವರೆಗೆ ಭೂಮಿ ಬೆಲೆಯಿದ್ದು, ಇಲ್ಲಿಯೂ ಕೂಡ ಒಂದು ಕೋಟಿಗೂ ಅಧಿಕ ಎಸ್ ಆರ್ ದರಪಟ್ಟಿಯನ್ನು ನಿಗದಿಪಡಿಸಬೇಕು ಎಂದ ಅವರು, ಸರ್ಕಾರವು ಅಭಿವೃದ್ಧಿಯ ಹೆಸರಿನಲ್ಲಿ ರೈತರಿಂದ ಭೂಮಿಯನ್ನು ಖರೀದಿಸುವಾಗ ಹಳೇಯ ದರಪಟ್ಟಿಯಂತೆಯೇ ಖರೀದಿಸುತ್ತಿದ್ದು ಇದನ್ನು ಕೂಡಲೆ ಪರಿಷ್ಕರಿಸಿ ನೂತನವಾದ ದರಪಟ್ಟಿಯಂತೆ ಖರೀದಿಸಬೇಕು.

ಸರ್ಕಾರಿ ನೌಕರರು ಒಕ್ಕೂಟ ಮಾಡಿಕೊಂಡು ಸರ್ಕಾರದ ರಾಯಲ್ಟಿಯನ್ನು ಜಾಸ್ತಿಯಾಗದಂತೆ ತಡೆಯುವುದಲ್ಲದೇ, ಅವರೇ ಇದನ್ನು ಕದಿಯುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಭೂಮಿಯನ್ನು  ತಾಲ್ಲೂಕಿನಲ್ಲಿ ಎಸ್ ಆರ್ ದರಪಟ್ಟಿಯನ್ನು ಪರಿಷ್ಕರಿಸಿ ಐವತ್ತರಿಂದ 80 ಲಕ್ಷದವರೆಗೆ ಏರಿಸಬೇಕು ಎಂದು ರೈತ ಸಂಘವು ಒತ್ತಾಯಿಸುತ್ತದೆ ಎಂದು ಹೇಳಿದರು.

ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಈಶ್ವರಪ್ಪ ಮಾತನಾಡಿ, ಸರ್ಕಾರಿ ನೌಕರರು ಚಿನ್ನ ಬೆಳ್ಳಿಗಳ‌ ಮೇಲೆ ಬಂಡವಾಳ ಹೂಡುವುದಿಲ್ಲ. ಏಕೆಂದರೆ ಒಂದು ಗ್ರಾಂ ಚಿನ್ನಕ್ಕೆ 60 ಸಾವಿರ ಒಂದು ಗ್ರಾಂ ಬೆಳ್ಳಿಗೆ ಒಂದು ಲಕ್ಷದವರೆಗಿದ್ದು, ಆದಾಯ ತೆರಿಗೆ ಅಧಿಕಾರಿಗಳಿಗೆ ಇದರ ಖರೀದಿಯ ಬಿಲ್ ಅಥವಾ ರಶೀದಿಯನ್ನು ಕೊಡಬೇಕಾಗುತ್ತದೆ. ಹಾಗಾಗಿ ಅವರು ಅಲ್ಲಿ ಬಂಡವಾಳ ಹೂಡದೇ ಕೇವಲ ಅತ್ಯಲ್ಪ ಹಣದಲ್ಲಿ ರೈತರ ಭೂಮಿ ಮೇಲೆ ಬಂಡವಾಳ ಹಾಕ್ಕುತ್ತಿದ್ದಾರಲ್ಲದೇ, ರೈತರಿಂದ ಖರೀದಿಸಿದ ಅನೇಕ ಭೂಮಿಗಳನ್ನು ಉಳುಮೆ ಮಾಡದೇ ಬೀಳು ಬೀಡುತ್ತಿದ್ದಾರೆ. ತಾಲ್ಲೂಕಿನ ಉಪನೋಂದಾವಣಿ ಕಛೇರಿಯಲ್ಲಿ 14-08-2023 ರ ರಂದು ಪ್ರಕಟಿಸಲಾಗಿರುವ ಸದರಿ ಪರಿಷ್ಕೃತ ಮಾರ್ಗಸೂಚಿ ದರ ಪಟ್ಟಿಯಲ್ಲಿ ಬಿಟ್ಟು ಹೋಗೀರುವ ಪ್ರದೇಶ, ರಸ್ತೆ ಹಾಗೂ ಬಡಾವಣೆಗಳ ಬಗ್ಗೆ ಮಾಹಿತಿಯನ್ನು ಮತ್ತು ಪರಿಷ್ಕೃತ ಮಾರ್ಗಸೂಚಿ ದರ ಪಟ್ಟಿಯ ಅಹವಾಲುಗಳನ್ನು ಸಲ್ಲಿಸಲು ಇದೇ ತಿಂಗಳ 28 ರವರೆಗೆ 15 ದಿನಗಳ ಕಾಲಾವಕಾಶ ನೀಡಲಾಗಿದ್ದು, ಇದನ್ನು ಉಪನೋಂದಾವಣಿ ಕಛೇರಿಯಲ್ಲಿ ಅಥವಾ ಬೇರೆ ಯಾವ ಇಲಾಖೆಯಲ್ಲಿಯೂ, ಮತ್ತು ಯಾವುದೇ ಪತ್ರಿಕೆಗಳಲ್ಲಿಯೂ ಪ್ರಕಟಣೆ ಹೊರಡಿಸದೇ ಸರ್ಕಾರಿ ನೌಕರರ ಹಿತ ಕಾಪಾಡುವಲ್ಲಿ ಇಲಾಖೆ ಮುಂದಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಮಾಜಿ ಪುರಸಭಾ ಸದಸ್ಯ ಎಸ್ ರೇವಣಸಿದ್ದಪ್ಪ, ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿಯ ಸದಸ್ಯ ಹೆಚ್ ಬಿ ರಮೇಶ್, ಮಂಜುನಾಥ್, ರಸೂಲ್ ಸಾಬ್ ಇದ್ದರು.

Leave A Reply

Your email address will not be published.

error: Content is protected !!