ರಿಪ್ಪನ್ಪೇಟೆ: ಇಲ್ಲಿನ ತೀರ್ಥಹಳ್ಳಿ ರಸ್ತೆಯ ವ್ಯಾಪ್ತಿಯ ಬಡಾವಣೆಯಲ್ಲಿನ ನಿವಾಸಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಈಗಾಗಲೇ ಅಸ್ಪತ್ರೆಯಲ್ಲಿ ವಿಶೇಷ ಘಟಕದಲ್ಲಿ ಚಿಕಿತ್ಸೆ ಪಡೆಯಲಾಗುತ್ತಿರುವ ವಿಷಯ ಕಾಡ್ಗಿಚ್ಚಿನಂತೆ ಹರಡಿ ಗ್ರಾಮದಲ್ಲಿನ ಜನರಲ್ಲಿ ಭಯಭೀತಿ ಹುಟ್ಟಿಸಿದೆ.
ಸರ್ಕಾರ ಕೊರೊನಾ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದ್ದರೂ ಕೂಡಾ ಜನರು ಎಚ್ಚೆತ್ತುಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಪಾಲನೆ ಮಾಡದೆ ಓಡಾಡುತ್ತಿದ್ದಾರೆ. ಶಾಲೆ-ಕಾಲೇಜ್ ವಿದ್ಯಾರ್ಥಿಗಳು ಮಾಸ್ಕ್ ಅನ್ನು ಧರಿಸದೆ ಕಾಲೇಜ್ ಮತ್ತು ಪ್ರೌಢಶಾಲೆಗಳಿಗೆ ಬರುತ್ತಾರೆ. ಇವರಿಗೆ ಕಡಿವಾಣ ಹಾಕುವ ಇಲಾಖೆಯವರು ಸಹ ಹಿಂದೇಟು ಹಾಕುತ್ತಿರುವುದರ ಹಿಂದಿನ ಮರ್ಮ ಏನು ಎಂಬ ಯಕ್ಷಪ್ರಶ್ನೆ ಸಾರ್ವಜನಿಕರದ್ದಾಗಿದೆ.
ಜಿಲ್ಲೆಯಲ್ಲಿ ಗುರುವಾರ 54 ಜನರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು ಶಿವಮೊಗ್ಗ 32, ಭದ್ರಾವತಿ 7, ಶಿಕಾರಿಪುರ 1, ತೀರ್ಥಹಳ್ಳಿ 1, ಸೊರಬ 1, ಸಾಗರ 7 ಹಾಗೂ ಹೊಸನಗರ ತಾಲ್ಲೂಕಿನಲ್ಲಿ 5 ಜನರಲ್ಲಿ ಕಾಣಿಸಿಕೊಂಡ ಬಗ್ಗೆ ದೃಢಪಡಿಸಲಾಗಿದ್ದರೂ ಕೂಡಾ ಸ್ಥಳೀಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ದಂಡ ಹಾಕುವುದಾಗಲಿ ಅಥವಾ ಇನ್ನಾವುದೇ ಕ್ರಮ ಕೈಗೊಳ್ಳದೆ ಇರುವುದರ ಹಿಂದಿನ ಮರ್ಮ ಏನು ಎಂಬುದು ಇನ್ನೂ ನಿಗೂಢವಾಗಿದೆ.
ಇನ್ನಾದರೂ ಗ್ರಾಮ ಪಂಚಾಯ್ತಿ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಹೀಗೆ ಕೊರೊನಾ ವಾರಿಯರ್ಸ್ ಮುಂಜಾಗ್ರತಾ ವಹಿಸುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದರೊಂದಿಗೆ ಮಾಸ್ಕ್, ಸಾಮಾಜಿಕ ಅಂತರ ಸಭೆ-ಸಮಾರಂಭಗಳಲ್ಲಿ ಗುಂಪು ಕೂಡುವುದು, ಜನಸಂದಣಿಗೆ ಕಡಿವಾಣ ಹಾಕಲು ಮುಂದಾಗಬೇಕು ಎಂದು ಇಲ್ಲಿನ ಸಾರ್ವಜನಿಕರು ಅಭಿಪ್ರಾಯದೊಂದಿಗೆ ಸಲಹೆ ಸಹ ನೀಡಿದ್ದಾರೆ.
Related