ರಿಪ್ಪನ್ಪೇಟೆ: ಇಲ್ಲಿನ ಮೆಸ್ಕಾಂ ವ್ಯಾಪ್ತಿಯ ಕೆದ್ದಲುಗುಡ್ಡೆಯಲ್ಲಿ ನಿರ್ಮಿಸಲಾದ 110 ಕೆವಿ ಉಪವಿದ್ಯುತ್ ಸ್ಥಾವರದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದ ಹೆಚ್ಚುವರಿ 10 ಎಂವಿಎ ಟ್ರಾನ್ಸ್ಫಾರ್ಮರ್ಗೆ ಶಾಸಕ ಹರತಾಳು ಹಾಲಪ್ಪನವರು ಇಂದು ವಿದ್ಯುಕ್ತವಾಗಿ ಚಾಲನೆ ನೀಡುವ ಮೂಲಕ ಲೋಕಾರ್ಪಣೆಗೊಳಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಲ್ಲಿನ ಸುತ್ತಮುತ್ತಲಿನ ಗ್ರಾಮಗಳಿಗೆ ವೋಲ್ಟೇಜ್ ಸಮಸ್ಯೆಯಿಂದಾಗಿ ರೈತರು ಪರದಾಡುವ ಸ್ಥಿತಿ ಎದುರಾಗಿದ್ದು ರೈತರ ಮನವಿಯನ್ನಾದರಿಸಿ ತಕ್ಷಣ ಸಂಬಂಧಪಟ್ಟ ಕೆಪಿಟಿಸಿಎಲ್ ಮತ್ತು ಮೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರದಿಂದ 2 ಕೋಟಿ ರೂ. ವೆಚ್ಚದ ಟ್ರಾನ್ಸ್ಫಾರ್ಮರ್ ಅಳವಡಿಸುವುದರೊಂದಿಗೆ ಹರತಾಳು, ಅರಸಾಳು, ಕೆಂಚನಾಲ, ಕೋಡೂರು, ಬೆಳ್ಳೂರು, ಹೆದ್ದಾರಿಪುರ, ಅಮೃತ, ಹುಂಚ ಗ್ರಾಮಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಗೆ ವಿದ್ಯುತ್ ಸಮಸ್ಯೆ ಎದುರಾಗದಂತೆ ಪರಿಹಾರ ಕಲ್ಪಿಸಲಾಗಿದೆ.
ಇನ್ನೂ ಬೇಸಿಗೆ ಕಾರಣ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು ತೆರೆದ ಬಾವಿ ಸೇರಿದಂತೆ ಕೊಳವೆಬಾಯಿಯಲ್ಲಿ ಅಂತರ್ಜಲ ಬತ್ತಿಹೋಗುತ್ತಿದ್ದು ವಿದ್ಯುತ್ ಸಮಸ್ಯೆಯನ್ನು ರೈತರು ಎದುರಿಸುವಂತಾಗಿದ್ದು ಕುಡಿಯುವ ನೀರಿಗೆ ಮತ್ತು ಅಡಿಕೆ ತೋಟ ಮತ್ತು ಶುಂಠಿ ಬೆಳೆಗಳಿಗೆ ನೀರು ಹರಿಸಲು ರೈತಾಪಿವರ್ಗ ಸಾಕಷ್ಟು ತೊಂದರೆ ಅನುಭವಿಸಬೇಕಾಗಿತ್ತು. ಅಲ್ಲದೆ ಗ್ರಾಮ ಪಂಚಾಯ್ತಿಗಳಲ್ಲಿನ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಯಿಂದ ನೀರು ಹರಿಸಲು ವಿದ್ಯುತ್ ಸಮಸ್ಯೆಗೆ ಪರಿಹಾರ ದೊರಕಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ರೈತರು ನೀರಿನ ಮಿತ ಬಳಕೆ ಮಾಡುವ ಮೂಲಕ ಬೆಳೆಗಳಿಗೆ ಅಗತ್ಯಕ್ಕೆ ತಕ್ಕಂತೆ ನೀರು ಹರಿಸುವುದು, ಹೆಚ್ಚು ನೀರು ಹರಿದು ಹೋಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿ, ವಿದ್ಯುತ್ ಟ್ರಾನ್ಸ್ಫಾರ್ಮರ್ ಹತ್ತಿರ ಅಕ್ರಮವಾಗಿ (ಬಾಂಬ್) ಅಳವಡಿಸಿ ಮುಂದಿನ ರೈತರಿಗೆ ಪವರ್ ಬರದಂತೆ ತಡೆಯುವ ಉಪಕರಣವನ್ನು ಬಳಸದಂತೆ ಇಲಾಖೆಯವರು ಎಚ್ಚರ ವಹಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಖಡಕ್ ಎಚ್ಚರಿಕೆ ನೀಡಿದರು.
ಸಾಗರ ತಾಲ್ಲೂಕಿಗೆ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿ ಬಳಿಯಲ್ಲಿನ ವಿದ್ಯುತ್ ಸ್ಥಾವರದಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಹಾಗೆಯೇ ರಿಪ್ಪನ್ಪೇಟೆಗೆ ಶಿವಮೊಗ್ಗದಿಂದ ಸರಬರಾಜು ಮಾಡಲಾಗುತ್ತಿದೆ ಇನ್ನೂ ಮುಂದೆ ಸಾಗರದ ಬಳಿಯಲ್ಲಿ 8 ಎಕರೆ ಜಾಗವನ್ನು ಮಂಜೂರು ಮಾಡುವ ಮೂಲಕ ವಿದ್ಯುತ್ ಸ್ಥಾವರ ಸ್ಥಾಪನೆಗೆ ಎಲ್ಲ ಪ್ರಯತ್ನ ಮಾಡಲಾಗಿದ್ದು ಶೀಘ್ರದಲ್ಲಿ ಕಾಮಗಾರಿ ಆರಂಭಿಸುವುದರ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ ಸಾಗರ-ಹೊಸನಗರ ತಾಲ್ಲೂಕಿನ ಮಾರುತಿಪುರ, ಹರಿದ್ರಾವತಿ ಇನ್ನಿತರ ಕಡೆಗಳಲ್ಲಿನ ಗ್ರಾಮಗಳಲ್ಲಿನ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಂತಾಗುವುದೆಂದರು.
ತಾಂತ್ರಿಕ ದೋಷದಿಂದಾಗಿ ಕಾಮಗಾರಿ ಹಂತದಲ್ಲಿ ವಿಳಂಬಕ್ಕೆ ಕಾರಣವಾಗಿತ್ತು. ಇನ್ನೂ ಮೂರು ನಾಲ್ಕು ದಿನಗಳಲ್ಲಿ ಇಲ್ಲಿನ ಉಪ ವಿದ್ಯುತ್ ಸ್ಥಾವರದಲ್ಲಿ ಅಳವಡಿಸಲಾದ ಟ್ರಾನ್ಸ್ಫಾರ್ಮರ್ ಕಾರ್ಯಾರಂಭಗೊಂಡಿದ್ದು ಸಮಸ್ಯೆ ಪರಿಹಾರವಾಗುವುದೆಂಬ ಭಾವನೆ ನನ್ನದಾಗಿದೆ ಎಂದರು.
ಗರಂ ಆದ ಶಾಸಕರು:
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್ ಸ್ಥಳೀಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬೋರ್ವೆಲ್ಗೆ ಅಳವಡಿಸಲಾದ ಮೋಟಾರ್ಗೆ ವಿದ್ಯುತ್ ಸರಬರಾಜು ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಶಾಸಕರ ಬಳಿ ಮೆಸ್ಕಾಂ ಅಧಿಕಾರಿಗಳ ವಿರುದ್ದ ದೂರು ನೀಡುತ್ತಿದ್ದಂತೆ ಗರಂ ಆದ ಹರತಾಳು ಹಾಲಪ್ಪ ಎಇಇ ಮತ್ತು ಜೆಇ ಇವರನ್ನು ತರಾಟೆಗೆ ತೆಗೆದುಕೊಂಡು ಇದಕ್ಕೆ ಉತ್ತರಿಸಿ ಎಂದು ಹೇಳುವ ಮೂಲಕ ನೀವು ಪ್ರತಿ ಮನೆಗೆ 5 ಲೀಟರ್ನಂತೆ ಕುಡಿಯುವ ನೀರು ಕೊಟ್ಟು ಬನ್ನಿ ಎಂದು ಗುಡುಗಿದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಜಿ.ಪಂ.ಸದಸ್ಯ ಸುರೇಶ್ ಸ್ವಾಮಿರಾವ್, ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಬಾಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲೀಲಾವತಿ ದೊಡ್ಡಯ್ಯ, ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಬಿಜೆಪಿ ಮುಖಂಡರಾದ ಆರ್.ಟಿ.ಗೋಪಾಲ, ಆರ್.ರಾಘವೇಂದ್ರ, ಎನ್.ಸತೀಶ್, ಹರತಾಳು ರಾಮಚಂದ್ರ, ತುಳೋಜಿರಾವ್, ತಾ.ಪಂ.ಸದಸ್ಯೆ ಸರಸ್ವತಿ, ಜಿ.ಪಂ. ಮಾಜಿ ಸದಸ್ಯೆ ಎ.ಟಿ.ನಾಗರತ್ನ, ಗ್ರಾ.ಪಂ.ಸದಸ್ಯ ಸುಂದರೇಶ್, ಸುಧೀಂದ್ರ ಪೂಜಾರಿ, ವಿನೋಧ, ಸಾಗರ ಮೆಸ್ಕಾಂನ ಎಇ ವೆಂಕಟೇಶ್, ಹೊಸನಗರ ಎಇಇ ಚಂದ್ರಶೇಖರ್, ಪಿಡಿಓ ಜಿ.ಚಂದ್ರಶೇಖರ್, ಕೆ.ಬಿ.ಹೂವಪ್ಪ, ಬುಕ್ಕಿವರೆ ರಾಜೇಶ್ ಇನ್ನಿತರ ಮುಖಂಡರು ಹಾಜರಿದ್ದರು.