ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಕೈಬಿಡುವಂತೆ ಒತ್ತಾಯಿಸಿ ಸೆ.13 ರಂದು ವಿಧಾನಸೌಧ ಮುತ್ತಿಗೆ ಚಳುವಳಿ: ಹೆಚ್.ಆರ್. ಬಸವರಾಜಪ್ಪ

0
96

ಶಿವಮೊಗ್ಗ: ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಕೈಬಿಡುವಂತೆ ಒತ್ತಾಯಿಸಿ, ವಿದ್ಯುಚ್ಛಕ್ತಿ ಖಾಸಗೀಕರಣವನ್ನು ವಿರೋಧಿಸಿ, ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೆ. 13 ರಂದು ವಿಧಾನಸೌಧ ಮುತ್ತಿಗೆ ಚಳವಳಿ ಹಮ್ಮಿಕೊಂಡಿದೆ ಎಂದು ಸಂಘದ ರಾಜ್ಯ ಗೌರವಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದೆಹಲಿಯಲ್ಲಿ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಕೈಬಿಡುವಂತೆ ಒತ್ತಾಯಿಸಿ ರೈತರು ಹೋರಾಟ ಮಾಡುತ್ತಿದ್ದರೂ ಕೂಡ ಕೇಂದ್ರ ಸರ್ಕಾರ ಈ ಬಗ್ಗೆ ಯಾವ ಕ್ರಮವನ್ನು ತೆಗೆದುಕೊಂಡಿಲ್ಲ. ಸರ್ವೋಚ್ಛ ನ್ಯಾಯಾಲಯ ನಿರ್ದೇಶನ ನೀಡಿದ್ದರೂ ಕೂಡ ಸರ್ಕಾರ ಅದನ್ನು ಪಾಲನೆ ಮಾಡಿಲ್ಲ. ಜೊತೆಗೆ ವಿದ್ಯುತ್ ಇಲಾಖೆಯನ್ನು ಕೂಡ ಖಾಸಗೀಕರಣ ಮಾಡುವ ದುಷ್ಟತನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯುತ್ ವಿಭಾಗವನ್ನು ಖಾಸಗೀಕರಣಗೊಳಿಸುವುದರಿಂದ ಬಡ ರೈತರಿಗೆ ತುಂಬಾ ತೊಂದರೆಯಾಗುತ್ತದೆ. ಭಾಗ್ಯಜ್ಯೋತಿ ಸೇರಿದಂತೆ ರೈತರು ಮತ್ತು ಬಡವರಿಗಾಗಿ ಇರುವ ಯೋಜನೆಗಳೆಲ್ಲ ಸ್ಥಗಿತಗೊಳ್ಳುತ್ತವೆ. ಮೊಬೈಲ್‌ಗೆ ಮೊದಲೇ ಕರೆನ್ಸಿ ಹಾಕಿಸುವಂತೆ ವಿದ್ಯುತ್ ಬಳಕೆಗೆ ಕೂಡ ಮೊದಲೇ ಹಣ ಪಾವತಿಸು ವಂತಹ ವ್ಯವಸ್ಥೆ ಜಾರಿಗೆ ಬರುತ್ತದೆ ಎಂದ ಅವರು, ನಾವು ವಿದ್ಯುತ್ ಬಿಲ್ ಕಟ್ಟುತ್ತೇವೆ. ಆದರೆ, ನಮ್ಮ ಬೆಳೆಗೆ ವೈಜ್ಞಾನಿಕ ಬೆಲೆ ಕೊಡಲಿ ಎಂದು ಆಗ್ರಹಿಸಿದರು.

ಡಾ. ಸ್ವಾಮಿನಾಥನ್ ಆಯೋಗದ ಸೂತ್ರದಂತೆ ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ.) ನಿಗದಿ ಮಾಡಬೇಕು. ಉತ್ಪಾದನೆಯ ವೆಚ್ಚದ ಆಧಾರದಲ್ಲಿ ಉತ್ಪಾದನೆ ವೆಚ್ಚ ಮತ್ತು ಅದಕ್ಕೆ ಶೇಕಡ 50 ರಷ್ಟು ಸೇರಿಸಿ ಬೆಲೆ ನಿಗದಿ ಮಾಡಬೇಕು. ಇದನ್ನು ಕಾನೂನಿನ ಚೌಕಟ್ಟಿನಲ್ಲಿ ಖಾತರಿಪಡಿಸಬೇಕು. ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದ ರೈತರು ಸಂಕಷ್ಟ ಎದುರಿಸಿದ್ದಾರೆ. ಅವರುಗಳಿಗೆ ಇನ್ನೂ ಪರಿಹಾರ ನೀಡಿಲ್ಲ. ಕೂಡಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಜಾರಿಗೊಳಿಸಿರುವ ಭೂ ಸುಧಾರಣಾ ಕಾಯ್ದೆ, ಕೃಷಿ
ಮಾರುಕಟ್ಟೆ ಕಾಯ್ದೆ, ಭೂಸ್ವಾಧೀನ ಕಾಯ್ದೆ ಇವೆಲ್ಲವನ್ನು
ತಡೆಹಿಡಿಯಬೇಕು. ಈ ಅಧಿವೇಶನದಲ್ಲಿಯೇ ಈ ಬಗ್ಗೆ ಚರ್ಚಿಸಿ
ಕ್ರಮತೆಗೆದುಕೊಳ್ಳಬೇಕು. ಸರ್ಕಾರ ವಿಧಾನಸಭೆ ಅಧಿವೇಶನಕ್ಕೆ
ಮೊದಲೇ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಸೆ.
13 ರಂದು ರಾಜ್ಯದ ಮೂಲೆ ಮೂಲೆಗಳಿಂದ ರೈತರು ವಿಧಾನಸೌಧ
ಮುತ್ತಿಗೆ ಚಳವಳಿಯಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲೆಯಿಂದಲೂ
ಒಂದು ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ. ಅಂದು
ಬೆಳಗ್ಗೆ 10 ಗಂಟೆಗೆ ಬೆಂಗಳೂರು ಸಿಟಿ ರೈಲ್ವೇ ನಿಲ್ದಾಣದಿಂದ
ವಿಧಾನಸೌಧದವರೆಗೆ ರೈತರು ಮೆರವಣಿಗೆ ನಡೆಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ
ಹಿಟ್ಟೂರು ರಾಜು, ಇ.ಬಿ. ಜಗದೀಶ್, ಎಸ್. ಶಿವಮೂರ್ತಿ, ಕೆ.
ರಾಘವೇಂದ್ರ, ಜ್ಞಾನೇಶ್, ಸಿ. ಚಂದ್ರಪ್ಪ, ಡಿ.ಹೆಚ್. ರಾಮಚಂದ್ರಪ್ಪ
ಮುಂತಾದವರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here