ಲಂಚ ಪಡೆಯುವುದು ಮತ್ತು ನೀಡುವುದು ಎರಡೂ ಅಪರಾಧ: ಲೋಕಾಯುಕ್ತ ಡಿವೈಎಸ್‌ಪಿ ಮೃತ್ಯುಂಜಯ

0
336

ಹೊಸನಗರ: ಸರಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಲಂಚ ಪಡೆಯುವುದು ಹಾಗೂ ಲಂಚ ನೀಡುವುದು ಎರಡೂ ಸಹಾ ಅಪರಾಧವಾಗಿದ್ದು ಸರಕಾರಿ ಇಲಾಖೆಯ ಅಧಿಕಾರಿಗಳು ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಶಿವಮೊಗ್ಗದ ಲೋಕಾಯುಕ್ತ ಡಿವೈಎಸ್‌ಪಿ ಮೃತ್ಯುಂಜಯ ಹೇಳಿದರು.

ಅವರು ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಕಾರ‍್ಯಕ್ರಮದಲ್ಲಿ ಸರಕಾರಿ ಸಿಬ್ಬಂದಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದ ಬಳಿಕ ಮಾತನಾಡಿದರು.

ಪ್ರತಿಯೊಬ್ಬ ನೌಕರರೂ ಕಷ್ಟ ಪಟ್ಟು ಸರಕಾರಿ ಕೆಲಸ ಗಿಟ್ಟಿಸಿರುತ್ತಾರೆ. ಕೆಲಸಕ್ಕೆ ಸೇರ್ಪಡೆ ವೇಳೆ ಹೊಂದಿರುವ ಬದ್ಧತೆಯನ್ನು ಸೇವಾವಧಿ ಯುದ್ದಕೂ ಕಾಪಾಡಿಕೊಳ್ಳಬೇಕು. ಜನಸಾಮಾನ್ಯರಿಗೆ, ಬಡವರನ್ನು ಕೆಲಸಕ್ಕಾಗಿ ಕಛೇರಿಗಳಿಗೆ ಅಲೆದಾಡಿಸಬಾರದು. ಸರಕಾರಿ ಕಛೇರಿಗಳಲ್ಲಿ ಅವರಿಗೆ ಯಾವುದೇ ವಿಧದ ತೊಂದರೆ ಆಗದಂತೆ ನೋಡಿಕೊಳ್ಳುವುದು ಸಿಬ್ಬಂದಿಯ ಕರ್ತವ್ಯವಾಗಿದೆ ಎಂದರು.

1984ರ ಲೋಕಾಯುಕ್ತ ಕಾಯಿದೆಯಡಿ ಕೆಲಸ ಮಾಡುತ್ತಿರುವ ನಮ್ಮ ಸಂಸ್ಥೆಯು ಭಾರತದಲ್ಲಿಯೇ ಹೆಸರು ಪಡೆದಿದೆ. ಹೊಸ ಕಾಯಿದೆ ತಿದ್ದುಪಡಿ ಪ್ರಕಾರ ಕೇವಲ ಲಂಚ ಸ್ವೀಕರಿಸುವುದಷ್ಟೇ ಅಲ್ಲ, ನೀಡುವುದೂ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಭ್ರಷ್ಟಾಚಾರ ತಡೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.

ಈ ವೇಳೆ ಲೋಕಾಯುಕ್ತ ಅಧಿಕಾರಿಗಳಾದ ಜಗನ್ನಾಥ, ರಾಧಾಕೃಷ್ಣ, ತಹಸೀಲ್ದಾರ್ ವಿ.ಎಸ್.ರಾಜೀವ್, ಎಸಿಎಫ್ ಶಿವಮೂರ್ತಿ, ಆರ್‌ಎಫ್‌ಓ ಆದರ್ಶ, ಪ.ಪಂ.ಮುಖ್ಯಾಧಿಕಾರಿ ಬಾಲಚಂದ್ರಪ್ಪ, ಗ್ರೇಡ್2 ತಹಸೀಲ್ದಾರ್ ರಾಕೇಶ್, ಶಿರಾಸ್ಥೆದಾರ್ ಶ್ರೀಕಾಂತ್ ಹೆಗ್ಡೆ, ಸುಧೀಂದ್ರಕುಮಾರ್, ಬಿಇಓ ವೀರಭದ್ರಪ್ಪ, ತಾಲೂಕು ಪಂಚಾಯಿತಿ ಇಓ ಸಿ.ಆರ್.ಪ್ರವೀಣ್, ಪ್ರಥಮ ದರ್ಜೆ ಗುಮಾಸ್ಥರಾದ ವಿನಯ್ ಎಂ ಆರಾಧ್ಯ, ಚಿರಾಗ್, ತಾಲ್ಲೂಕು ಕಛೇರಿಯ ಸಿಬ್ಬಂದಿಗಳು ಹಾಗೂ ಇನ್ನೂ ಮತ್ತಿತರರು ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here