ಕಡೂರು: ಶಿವಮೊಗ್ಗ ಮೂಲದ ಲಾರಿ ಚಾಲಕ ಅಮ್ಜದ್ ಎಂಬವರು ತನ್ನ ಲಾರಿಯಲ್ಲಿ ಮಲಗಿದ್ದ ವೇಳೆ ಮಧ್ಯರಾತ್ರಿ ಆತನ ಮೇಲೆ ಹಲ್ಲೆ ನಡೆಸಿ ನಗದು ಹಾಗೂ ಮೊಬೈಲ್ ಸುಲಿಗೆ ಮಾಡಿದ್ದ ಆರೋಪದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ತುಮಕೂರು ಜಿಲ್ಲೆಯ ಕೊಂಡ್ಲಿ ನಿವಾಸಿ ಮೋಹನ್ (20), ಬೆಂಗಳೂರಿನ ಸುಂಕದಕಟ್ಟೆ ನಿವಾಸಿ ಭರತ್ (20) ಹಾಗೂ ತುಮಕೂರು ಜಿಲ್ಲೆ ಹೆಗ್ಗೆರೆ ನಿವಾಸಿ ಸೂರಜ್ಕುಮಾರ್ ಮಿಶ್ರಾ (20) ಎಂದು ಗುರುತಿಸಲಾಗಿದೆ.
ಕಳೆದ ಜ.18ರಂದು ಲಾರಿ ಚಾಲಕ ಅಮ್ಜದ್ ಶಿವಮೊಗ್ಗದಿಂದ ಹುಣಸೂರಿಗೆ ಟಿಂಬರ್ ಕೊಂಡೊಯ್ದು, 27,300 ರೂ. ಬಾಡಿಗೆ ಹಣದೊಂದಿಗೆ ಕಡೂರು ಮಾರ್ಗವಾಗಿ ಶಿವಮೊಗ್ಗಕ್ಕೆ ಹಿಂದಿರುಗುತ್ತಿದ್ದ ವೇಳೆ ರಾತ್ರಿ ವೇಳೆ ನಿದ್ರೆ ಆವರಿಸಿದೆ. ಈ ವೇಳೆ ಚಾಲಕ ಅಮ್ಜದ್ ಸಖರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಕುಪ್ಪಾಳು ಎಂಬಲ್ಲಿ ಲಾರಿ ನಿಲ್ಲಿಸಿ ಲಾರಿಯಲ್ಲೇ ನಿದ್ರಿಸಿದ್ದಾರೆ. ಮಧ್ಯರಾತ್ರಿ ಮೂವರು ಆರೋಪಿಗಳು ಲಾರಿಯಲ್ಲಿದ್ದ ಅಮ್ಜದ್ ಅವರನ್ನು ಎಚ್ಚರಿಸಿ ಎದೆ ಮೇಲೆ ಕುಳಿತು ಹಲ್ಲೆ ಮಾಡಿದ್ದಾರೆ. ಬಳಿಕ ಮಾರಕಾಯುಧ ತೋರಿಸಿ ಹಣ ಹಾಕು ಮೊಬೈಲ್ ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಲಾರಿ ಚಾಲಕ ಅಮ್ಜದ್ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಘಟನೆ ಸಂಬಂಧ ಸ್ಥಳ ಪರಿಶೀಲನೆ ನಡೆಸಿದ ಎಸ್ಪಿ ಎಂ.ಎಚ್.ಅಕ್ಷಯ್ ಅವರು ಆರೋಪಿಗಳ ಬಂಧನಕ್ಕೆ ಎಎಸ್ಪಿ ಶೃತಿ, ತರೀಕೆರೆ ಡಿವೈಎಸ್ಪಿ ಏಗನಗೌಡರ್ ನೇತೃತ್ವದಲ್ಲಿ ಕಡೂರು ವೃತ್ತ ನಿರೀಕ್ಷಕ ಮಂಜುನಾಥ್, ಪಿಎಸ್ಸೈಗಳಾದ ರಮ್ಯಾ, ಶೋಭಾ ಹಾಗೂ ಸಖರಾಯಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಹರೀಶ್ ಮತ್ತು ಸಿಬ್ಬಂದಿಯ ತಂಡ ರಚನೆ ಮಾಡಿದ್ದರು.