ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರನ್ನು ಏಕವಚನದಲ್ಲಿ ಕರೆಯುವ ಸಿದ್ದರಾಮಯ್ಯ ಅವರ ವರ್ತನೆ ಅವರಿಗೆ ಶೋಭೆ ತರುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.
ನಳಿನ್ ಕುಮಾರ್ ಕಟೀಲ್ರನ್ನು ಸಿದ್ದರಾಮಯ್ಯ ಅವರು ವಿಧೂಷಕ ಎಂದು ಕರೆಯುತ್ತಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಏಕವಚನದಲ್ಲಿ ಕರೆಯುತ್ತಾರೆ. ಈ ಹಿಂದೆ ಸಿದ್ದರಾಮಯ್ಯ ಅವರಿಗೆ ಹೀಗೆ ಕರೆಯುವುದು ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ ಈಗ ನಾನು ಲೇ ಸಿದ್ದರಾಮಯ್ಯ ಎಂದು ಕರೆಯಲು ನನಗೇನು ಬರುವುದಿಲ್ಲವೆ ಎಂದು ವ್ಯಂಗ್ಯದ ಮೂಲಕ ಮಾತಿನಲ್ಲೇ ತಿವಿದರು.
ತಾವು ರಾಜ್ಯಪಾಲರಿಗೆ ಬರೆದ ಪತ್ರದ ಬಗ್ಗೆ ಅಪಾರ್ಥ ಮಾಡಿಕೊಂಡಿರುವ ವಿಪಕ್ಷಗಳು ಮುಖ್ಯಮಂತ್ರಿ ಮತ್ತು ನಾನು ಬೇರೆ ಬೇರೆ ಎಂಬ ಅರ್ಥದಲ್ಲಿ ಮಾತನಾಡುತ್ತಿದ್ದಾರೆ. ರಾಜ್ಯಪಾಲರಿಗೆ ನಾನು ನಿಯಮದ ಬಗ್ಗೆ ಮನವಿ ಮಾಡಿದ್ದೇನೆ ಹೊರತು ಬೇರೆ ಏನೂ ಅಲ್ಲ. ನಮ್ಮ ಪಕ್ಷದ ವಿರುದ್ಧವೇ ನಾನೇಕೆ ದೂರು ನೀಡಲಿ ಎಂದರು.