23.2 C
Shimoga
Sunday, November 27, 2022

ಲೋಕೋಪಯೋಗಿ ಇಲಾಖೆಯವರ ಕಾರ್ಯವೈಖರಿಗೆ ಆಕ್ರೋಶ | ಸಚಿವರ ಸ್ವಾಗತಕ್ಕಾಗಿ ರಾಜ್ಯ ಹೆದ್ದಾರಿಯ ಹೊಂಡ – ಗುಂಡಿಗಳಿಗೆ ಕಲ್ಲು ಮಣ್ಣಿನ ಪ್ಯಾಚ್ !!

ರಿಪ್ಪನ್‌ಪೇಟೆ : ಭಾರಿ ಮಳೆಯಿಂದಾಗಿ ಶಿವಮೊಗ್ಗ – ಕೊಲ್ಲೂರು – ಬೈಂದೂರು – ಕುಂದಾಪುರ – ಉಡುಪಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿಗಳು ಹೊಂಡ ಗುಂಡಿಬಿದ್ದಿದ್ದು ಪ್ರಯಾಣಿಕರು ಎಷ್ಟು ಬಾರಿ ದೂರು ನೀಡಿದರೂ ಸ್ಪಂದಿಸದ ಲೋಕೋಪಯೋಗಿ ಇಲಾಖೆಯವರು ಸಚಿವರ ಸ್ವಾಗತಕ್ಕಾಗಿ ರಾಜ್ಯಹೆದ್ದಾರಿಯ ಹೊಂಡ-ಗುಂಡಿ ಮುಚ್ಚಲು ಕಲ್ಲುಮಣ್ಣಿನ ಪ್ಯಾಚ್ ಹಾಕುತ್ತಿರುವುದು ಕಂಡು ಸಾರ್ವಜನಿಕರ ಅಪಹಾಸ್ಯಕ್ಕೆ ಒಳಗಾಗುವಂತಾದ ಪ್ರಸಂಗ ಹೊಸನಗರ ತಾಲ್ಲೂಕಿನ ವ್ಯಾಪ್ತಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.


ಹೌದು, ಈ ದೃಶ್ಯ ಕಂಡುಬಂದಿದ್ದು ರಿಪ್ಪನ್‌ಪೇಟೆ – ಹೊಸನಗರ ರಾಜ್ಯ ಹೆದ್ದಾರಿಯ ಕೋಡೂರಿನಲ್ಲಿ. ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿಯೇ ಆಳು ಉದ್ದದ ಹೊಂಡ-ಗುಂಡಿಗಳು ಬಿದ್ದಿದ್ದು ನಿತ್ಯ ಮಾಧ್ಯಮಗಳಲ್ಲಿ ಸುದ್ದಿಯಾಗಿ ನಗೆಪಾಟಲಿಗೆ ಒಳಗಾಗಿರುವಾಗಲೇ ಸಾಗರ, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಹರಿದು ಹಂಚಿ ಹೋಗಿರುವ ಜಿಲ್ಲೆಯ ಹೊಸನಗರ ತಾಲ್ಲೂಕು ವ್ಯಾಪ್ತಿಯ ಹಲವೆಡೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಸಾಗರ ಕ್ಷೇತ್ರ ಶಾಸಕ ಹರತಾಳು ಹಾಲಪ್ಪ ನವರ ಸ್ವಕ್ಷೇತ್ರ ಹೊಸನಗರ ವ್ಯಾಪ್ತಿಯ ಹಲವು ರಸ್ತೆಗಳು ಭಾರಿ ಮಳೆಯಿಂದಾಗಿ ಹೊಂಡ ಗುಂಡಿಗಳು ಬಿದ್ದು ಸಾರಿಗೆ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿ ಪ್ರಯಾಣಿಕರು ಓಡಾಡದಂತಾಗಿದ್ದು ಈಗ ಸಚಿವರ ಸ್ವಾಗತಕ್ಕಾಗಿ ಹೊಂಡ ಗುಂಡಿಗಳಿಗೆ ಕಲ್ಲು, ಮಣ್ಣು ಹಾಕಿ ಕಣ್ಣು ಕಟ್ಟುವ ಕೆಲಸ ಮಾಡುತ್ತಿರುವುದು ದೃಶ್ಯ ಕಂಡುಬಂದಿದೆ‌. ಇದು ಸಾರ್ವಜನಿಕರ ಮತ್ತು ಪ್ರಯಾಣಿಕರ ಅಪಹಾಸ್ಯಕ್ಕೆ ಎಡೆಮಾಡಿದೆ.


ಕಿತ್ತು ಹೋದ ರಸ್ತೆಗೆ ಕಲ್ಲು ಮಣ್ಣಿನ ಲೇಪನ ಮಾಡಿ ಗಂಟು ಹೊಡೆಯುವ ಕಾರ್ಯದಲ್ಲಿ ತೊಡಗಿದ್ದಾರೆಂದು ಕೋಡೂರು ಮಹಾಬಲೇಶ್ವರ, ಸುಬ್ಬನಾಯಕ್, ಚಂದ್ರು, ನಾಗರಾಜ್, ದೇವೇಂದ್ರ, ಈಶ್ವರಪ್ಪ, ಚೂಡಾಮಣಿ, ಸುಬ್ರಹ್ಮಣ್ಯ, ತೀರ್ಥೇಶ್‌ ಬೆಳಲಮಕ್ಕಿ, ಹಾನಂಬಿ ಸ್ವಾಮಿ, ಗಜೇಂದ್ರ ಮಳಲಗುಡ್ಡೆ ಇನ್ನಿತರರು ಆಗ್ರಹಿಸಿದರು.


ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತು ಇಂತಹ ಕಲ್ಲುಮಣ್ಣಿನ ಪ್ಯಾಚ್ ಹಾಕುವು ಬದಲು ಡಾಂಬರೀಕರಣದ ಪ್ಯಾಚ್ ಹಾಕುವುದರೊಂದಿಗೆ ಸರ್ಕಾರದ ಹಣವನ್ನು ಉಳಿತಾಯ ಮಾಡುವರೇ ಎಂಬುವುದನ್ನು ಕಾದುನೋಡಬೇಕಾಗಿದೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!