ವಿದ್ಯುತ್ ಟಿ.ಸಿ ಅಳವಡಿಸಲು ರೈತರಿಂದ ಅಧಿಕಾರಿಗಳು ಹಣ ಪಡೆದರೆ ಅಂತಹವರನ್ನು ಅಮಾನತು ಮಾಡಲಾಗುವುದು: ಸಚಿವ ವಿ. ಸುನಿಲ್ ಕುಮಾರ್ ಎಚ್ಚರಿಕೆ

0
457

ಚಿಕ್ಕಮಗಳೂರು: ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪರಿವರ್ತಕಗಳು (ಟಿ.ಸಿ) ಕೆಟ್ಟು ಹೋದಲ್ಲಿ 24 ಗಂಟೆಯೊಳಗೆ ಪರಿವರ್ತಕ ಬದಲಾವಣೆ ಮಾಡಬೇಕು, ವಿದ್ಯುತ್ ಪರಿವರ್ತಕ ಅಳವಡಿಸುವ ಸಂಬಂಧ ಗ್ರಾಮೀಣ ಪ್ರದೇಶದಲ್ಲಿ ಅಧಿಕಾರಿಗಳು ರೈತರುಗಳಿಂದ ಲಂಚ ಪಡೆದ ಬಗ್ಗೆ ದೂರುಗಳು ಕೇಳಿ ಬಂದಲ್ಲಿ 48 ಗಂಟೆಯೊಳಗೆ ಅಧಿಕಾರಿಯನ್ನು ಅಮಾನತುಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ಕುಮಾರ್ ಎಚ್ಚರಿಸಿದರು.

ಸೋಮವಾರ ನಗರದಲ್ಲಿ ನೂತನವಾಗಿ ನಿರ್ಮಿಸಿದ ಮೆಸ್ಕಾಂ ಕಛೇರಿಗಳ ಸಂಕಿರ್ಣದ ಉದ್ಘಾಟನಾ ಮಾಡಿ ನಂತರ ಸಾರ್ವಜನಿಕರೊಂದಿಗೆ ವಿದ್ಯುತ್ ಅದಾಲತ್ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಇಂಧನ ಇಲಾಖೆಯು ಸಾರ್ವಜನಿಕ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಮೂಲಕ ಜನಸ್ನೇಹಿಯಾಗಬೇಕು ಎನ್ನುವ ನಿಟ್ಟಿನಲ್ಲಿ ಹೊಸ ಮಹತ್ತರವಾದ ಬದಲಾವಣೆಗೆ ಮುಂದಾಗಿದೆ.

ಅರಣ್ಯ, ಡೀಮ್ಡ್ ಹೊರತುಪಡಿಸಿ ಗ್ರಾ.ಪಂ ವ್ಯಾಪ್ತಿಯ ಕಂದಾಯ ಜಾಗದಲ್ಲಿ ಹೊಸದಾಗಿ ಮನೆ ನಿರ್ಮಿಸಿಕೊಂಡ ಫಲಾನುಭವಿಗಳು ಯಾವುದೇ ನಿರಪೇಕ್ಷಣ ಪತ್ರ ಇಲ್ಲದೇ ನೇರವಾಗಿ ಮೆಸ್ಕಾಂಗೆ ಅರ್ಜಿ ಸಲ್ಲಿಸುವ ಮೂಲಕ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬಹುದಾಗಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪರಿವರ್ತಕಗಳು ಕೆಟ್ಟುಹೋದಲ್ಲಿ 24 ಗಂಟೆಯೊಳಗೆ ಬದಲಾವಣೆಗೆ ಮುಂದಾಗಬೇಕು ಎಂದು ಸೂಚಿಸಿದರು.

ಅದಾಲತ್‌ನಲ್ಲಿ ಕೇಳಿಬಂದ ಸಾರ್ವಜನಿಕರ ಅಹವಾಲುಗಳನ್ನು ಪಟ್ಟಿ ಮಾಡಿ ನಿಗಧಿತ ಕಾಲಮಿತಿಯೊಳಗೆ ಪರಿಹರಿಸಲು ಕ್ರಮವಹಿಸಬೇಕು ಈ ಬಗ್ಗೆ ಸ್ಥಳೀಯ ಶಾಸಕರು ಹಾಗೂ ನನ್ನ ಗಮನಕ್ಕೂ ತರುವಂತೆ ಸೂಚಿಸಿದರು.

ಪ್ರಸ್ತುತ ಇಂಧನ ಇಲಾಖೆಯಲ್ಲಿ ಮಹತ್ತರವಾದ ಬದಲಾವಣೆಗಾಗಿ ಮೂರು ಉಪಕ್ರಮಗಳನ್ನು ಕೈಗೊಂಡಿದ್ದು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪರಿವರ್ತಕಗಳು ಕೆಟ್ಟು ಹೋದಲ್ಲಿ 24 ಗಂಟೆಯೊಳಗೆ ಪರಿವರ್ತಕ ಬದಲಾವಣೆ ಮಾಡಬೇಕು, ನಿರಪೇಕ್ಷಣ ಪತ್ರವಿಲ್ಲದೇ ಫಲಾನುಭವಿಗಳ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು, ವಿದ್ಯುತ್ ಪರಿವರ್ತಕಗಳನ್ನು ರೈತರ ಮನೆ ಬಾಗಿಲಿಗೆ ಯಾವುದೇ ಹಣ ಪಡೆಯದೆ ವಾಹನಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ಕಡೂರು, ಚಿಕ್ಕಮಗಳೂರು, ಕೊಪ್ಪ ಭಾಗದಲ್ಲಿ ವಿದ್ಯುತ್ ಪರಿವರ್ತಕಗಳ ಬ್ಯಾಂಕ್ ತೆರೆಯಲಾಗಿದ್ದು ಜತೆಗೆ ರಿಪೇರಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಹಿಂದೆ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹಾಗೂ ಸರಬರಾಜಿನ ಕೊರತೆಯಿತ್ತು ಅದನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗ್ರಾಮೀಣ ಪ್ರದೇಶದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಯ ವಿದ್ಯುದೀಕರಣ ಯೋಜನೆ, ಸೌಭಾಗ್ಯ ಯೋಜನೆಗಳ ಮೂಲಕ ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಒದಗಿಸಲು ಕ್ರಮವಹಿಸಲಾಗಿದೆ.

ಇಲಾಖೆಯು ಸಂಪೂರ್ಣವಾಗಿ ಜನಸ್ನೇಹಿಯಾಗಬೇಕು. ಗ್ರಾಮೀಣ ಪ್ರದೇಶದಲ್ಲಿನ ರೈತರಲ್ಲಿ ವಿದ್ಯುತ್ ಪರಿವರ್ತಕ ಅವಳಡಿಸಲು ಜಿಲ್ಲಾ ಅಥವಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಲಂಚ ಪಡೆದ ಬಗ್ಗೆ ದೂರುಗಳು ಕೇಳಿಬಂದಲ್ಲಿ 48 ಗಂಟೆಯೊಳಗೆ ಅಧಿಕಾರಿಯನ್ನು ಅಮಾನತುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಭ್ರಷ್ಟಾಚಾರವನ್ನು ಕಾರಣಕ್ಕೂ ಸಹಿಸುವುದಿಲ್ಲ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆ ಉದ್ದೇಶದಿಂದ 23 ವಿದ್ಯುತ್ ಉಪವಿಭಾಗಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಗಾಣದಾಳುವಿನಲ್ಲಿ ಉಪವಿಭಾಗ ಆರಂಭಕ್ಕೆ ಕ್ರಿಯಾಯೋಜನೆ ಸಿದ್ದಪಡಿಸಲು ತಿಳಿಸಲಾಗಿದೆ ರೈತರಿಗೆ ಅನುಕೂಲವಾಗುವತೆ ಕನಿಷ್ಟ 7 ಗಂಟೆಗಳ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಕಳೆದ ವರ್ಷ ಪ್ರವಾಹ, ಅತೀವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ 23 ಸಾವಿರಕ್ಕೂ ಹೆಚ್ಚು ವಿದ್ಯುತ್ ಪರಿವರ್ತಕಗಳು ಕೆಟ್ಟುಹೋಗಿದ್ದವು ಕಡೂರು ಭಾಗದಲ್ಲಿ ಅದರ ಪ್ರಮಾಣ ಹೆಚ್ಚಾಗಿತ್ತು. ಸೆ.18 ಕ್ಕೆ ಇಲಾಖೆಯಿಂದ 100 ದಿನಗಳ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಮಸ್ಯೆಗಳನ್ನು ಆಲಿಸಿ ಸ್ಪಂದಿಸಿ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ ಮಲೆನಾಡಿನ ಭಾಗದಲ್ಲಿ ಮಳೆಗಾಲದ ವೇಳೆ ಪ್ರತಿ ವರ್ಷವೂ ವಿದ್ಯುತ್ ಸಮಸ್ಯೆಗಳಿಂದ ಪರಿತಪಿಸುತ್ತಾರೆ. ಅಲ್ಲದೇ ಜನ ಹಾಗೂ ವನ್ಯ ಜೀವಿಗಳ ಹಾನಿಯೂ ಸಂಭವಿಸಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಮೆಸ್ಕಾಂ ಇಲಾಖೆಯು ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ಕೇಬಲ್ ಮೂಲಕ ಅವವಡಿಸಿದ್ದಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ ಕಡಿಮೆಯಾಗಲಿದೆ ಈ ಬಗ್ಗೆ ಕ್ರಮವಹಿಸುವಂತೆ ತಿಳಿಸಿದರು.

ವಿದ್ಯುತ್ ಇಲಾಖೆಗೆ ಸಂಬಂಧಿಸಿದಂತೆ ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಎದುರು ಸಮಸ್ಯೆಗಳ ಸರಮಾಲೆಯೇ ಇದೆ. ವಿದ್ಯುತ್ ಪರಿವರ್ತಕಗಳನ್ನು ಅಳವಡಿಸುವ ವೇಳೆ ರೈತರಿಂದ ಅಧಿಕಾರಿಗಳು ಲಂಚ ಪಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕಾದ ಅಗತ್ಯವಿದೆ ಎಂದರು.

ಗ್ರಾಮೀಣ ಭಾಗದಲ್ಲಿ ರೈತರಿಗೆ ಅನುಕೂಲವಾಗುವಂತೆ ವಿದ್ಯುತ್ ಸರಬರಾಜಿಗೆ ಅಗತ್ಯ ಪರಿಣಾಮಕಾರಿ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ಶಾಸಕ ಸಿ.ಟಿ.ರವಿ ಮಾತನಾಡಿ ದೇಶವು ವಿದ್ಯುತ್‌ನಲ್ಲಿ ಸ್ವಾವಲಂಬನೆ ಸಾಧಿಸುತ್ತಿದೆ. ಕಟ್ಟಕಡೆಯ ವ್ಯಕ್ತಿಯ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಲವು ಯೋಜನೆ ರೂಪಿಸಿ ಅನುದಾನ ಬಿಡುಗಡೆಗೊಳಿಸಿದ್ದಾರೆ, ಗಾಣದಾಳು ಗ್ರಾಮದ ಬಳಿ ಹೊಸದಾಗಿ ವಿದ್ಯುತ್ ಉಪವಿಭಾಗ ಆರಂಭಕ್ಕೆ ಕ್ರಿಯಾಯೋಜನೆ ರೂಪಿಸಲು ಅನುಮೋದನೆ ನೀಡಿರುವುದು ಸ್ವಾಗತಾರ್ಹ, ಕಂದಾಯ ಜಾಗದಲ್ಲಿ ವಾಸಿಸುವ ಫಲಾನುಭವಿಗಳು ಯಾವುದೇ ನಿರಾಪೇಕ್ಷಣಾ ಪತ್ರವಿಲ್ಲದೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಆದೇಶಿಸಿರುವುದು ಹೊಸ ಬದಲಾವಣೆಗೆ ನಾಂದಿ ಹಾಡಲಿದೆ ಎಂದು ತಿಳಿಸಿದರು.

ಲೋಡ್‌ಶೆಡ್ಡಿಂಗ್, ವಿದ್ಯುತ್ ಸರಬರಾಜಿನ ಸಮಸೆಯಿಂದಾಗಿ ಮಲೆನಾಡಿಗರ ಬದುಕು ಶಾಪಗ್ರಸ್ತವಾಗಿದೆ, ಇದಕ್ಕೆ ಪರಿಹರಿಸಿ ಜನರ ಬದುಕು ಕಟ್ಟುವಲ್ಲಿ ಇಲಾಖೆ ಮುಂದಾಗಲಿದೆ, ಅಧಿಕಾರ ಶಾಶ್ವತವಲ್ಲ ಬದಲಾಗಿ ನಾವು ಮಾಡುವ ಕೆಲಸ ಸದಾ ಶಾಶ್ವತ ಆ ನಿಟ್ಟಿನಲ್ಲಿ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ನಡೆದ ವಿದ್ಯುತ್ ಆದಾಲತ್‌ನಲ್ಲಿ ಜಿಲ್ಲೆಯ ವಿವಿಧ ಭಾಗದ ಗ್ರಾಮಗಳ ಸುಮಾರು 60 ಕ್ಕೂ ಹೆಚ್ಚು ಸಾರ್ವಜನಿಕರು ತಮ್ಮ ಭಾಗದಲ್ಲಿನ ಗ್ರಾಮಗಳಲ್ಲಿ ವಿದ್ಯುತ್ ಕಂಬ ಅಳವಡಿಕೆ. ತ್ರೀಪೇಸ್ ವಿದ್ಯುತ್ ಪೂರೈಕೆ, ಕೋವಿಡ್ ಸಂದರ್ಭ ಸಣ್ಣ ಕೈಗಾರಿಕೆಗಳಿಗೆ ವಿದ್ಯುತ್ ರಿಯಾಯಿತಿ ನೀಡುವಂತೆ, ಕಾರ್ಮಿಕ ಭವನಕ್ಕೆ ವಿದ್ಯುತ್ ಸಂಪರ್ಕ ಸೇರಿದಂತೆ ಹಲವು ಅಹವಾಲುಗಳನ್ನು ಸಚಿವರ ಮುಂದಿಟ್ಟರು ಇವೆಲ್ಲವನ್ನು ಆಲಿಸಿದ ಅವರು ನಿಗಧಿತ ಅವಧಿಯೊಳಗೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ನಗರಾಭಿವೃದ್ಧೀ ಪ್ರಾಧಿಕಾರದ ಅಧ್ಯಕ್ಷ ಸಿ.ಆನಂದ್, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌ಕುಮಾರ್ ಮಿಶ್ರಾ, ಪದ್ಮಾವತಿ, ಒಕ್ಕೂಟದ ಅಧ್ಯಕ್ಷ ರಾಮಕೃಷ್ಣಯ್ಯ ಅಧಿಕಾಗಳು ಸಾರ್ವಜನಿಕ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here