ವಿದ್ಯುತ್ ವ್ಯವಸ್ಥೆ ಹೊಸನಗರ ತಾಲೂಕಿಗೆ ಮರೀಚಿಕೆ…! ಪಕ್ಕದ ಮನೆಯಲ್ಲಿ ಕರೆಂಟಿದ್ದರೂ ಫೋನ್ ಮಾಡಿದ ಗ್ರಾಹಕರಿಗೆ ಮೆಸ್ಕಾಂ ಇಲಾಖೆಯ ಸಿದ್ದ ಉತ್ತರ ಮರ ಬಿದ್ದಿದೆ… ಈ ಶಾಪ ಕೊನೆಗೊಳ್ಳುವುದೆಂದು…?
ಹೊಸನಗರ: ಇಡಿಯ ರಾಜ್ಯಕ್ಕೆ ವಿದ್ಯುತ್ ನೀಡಿದ ದೀಪದ ಬುಡ ಕತ್ತಲು. ಶಾಪ ಅನುಭವಿಸುತ್ತಿರುವ ನಮ್ಮ ವಿದ್ಯುತ್ ಸಮಸ್ಯೆ ಮೊದಲು ಸರಿಪಡಿಸಿ ನಂತರ ಕ್ಷೇತ್ರ ಉಳಿಸುವ ಹೋರಾಟಕ್ಕೆ ಕೈ ಹಾಕಿ ಜನಪ್ರತಿನಿಧಿಗಳಿಗೆ ಜನರ ಸವಾಲಾಗಿದೆ.
ಹೊಸನಗರ ಮಾರ್ಚ್ 29 ಹುಲಿಕಲ್, ಬ್ಯಾಕೋಡ್, ಸಾಗರ, ಜೋಗ ಹಾಗೂ ಸಾಗರ – ಹೊಸನಗರ 33 ಕೆ.ವಿ. ಲೈನಿನ ನಿರ್ವಹಣೆ. ಹೊಸನಗರ ಸಾಗರ ಫೀಡರ್ ಇಲ್ಲದ ಕಾರಣ ಹೊಸನಗರ ತಾಲೂಕು ಪ್ರತಿದಿನ ವಿದ್ಯುತ್ ಸಮಸ್ಯೆ ಅನುಭವಿಸುತ್ತಿದೆ.
ನಿರ್ವಹಣೆ ಇಲ್ಲದ ಕಾರಣ ತಾಲೂಕಿನ ಗ್ರಾಮೀಣ ಪ್ರದೇಶಗಳು ವಿದ್ಯುತ್ತನ್ನು ಕಾಣುವುದೇ ದುಸ್ತರವಾಗಿ ಪರಿಣಮಿಸಿದೆ. ಮಂಗಳೂರಿನ ಮೆಸ್ಕಾಂ ಕಚೇರಿ, ಸಾಗರ-ಹೊಸನಗರ 33 ಕೆವಿ ಲೈನಿನ ನಿರ್ವಹಣೆ ಬಗ್ಗೆ ಪ್ರತಿ ತಿಂಗಳು 2 ಲಕ್ಷ ರೂ. ಗಳನ್ನು ಗುತ್ತಿಗೆದಾರರಿಗೆ ನೀಡುತ್ತಿದ್ದರು ನಿರ್ವಹಣೆ ಇಲ್ಲದೆ ಲೈನಿನ ಉದ್ದಕ್ಕೂ ಗಿಡಗಂಟಿ ಬೆಳೆದು ಪೊದೆ ಉಂಟಾಗಿದೆ.
ಸ್ವಲ್ಪವೇ ಗಾಳಿ-ಮಳೆ ಬಂದರು ಅಥವಾ ಮೋಡ ಮುಸುಕಿದ್ದರೂ ಇಲ್ಲಿ ವಿದ್ಯುತ್ ಮಾಯವಾಗುತ್ತದೆ. ವಿದ್ಯುತ್ ಬಗ್ಗೆ ಕಚೇರಿಗೆ ಫೋನ್ ಯಾವಾಗ ಮಾಡಿದರು ಇಲ್ಲಿ ಸಿದ್ದ ಉತ್ತರ ರೆಡಿ ಇರುತ್ತದೆ. ಅದೇನೆಂದರೆ ಪುರಪ್ಪೆಮನೆ ಬಳಿ ಮರ ಬಿದ್ದಿದೆ ಅಥವಾ ಮೇನ್ ಲೈನ್ ಟ್ರಬಲ್ ಇದೆ. ಬರುವುದು ಲೇಟಾಗುತ್ತೆ ಎಂದು.
ನಿನ್ನೆ ಸೋಮವಾರ ಸಹ ಸಂಜೆ 6:00 ಗೆ ಹೋದ ವಿದ್ಯುತ್ ರಾತ್ರಿ 10 ಗಂಟೆಯಾದರೂ ಬಂದಿರುವುದಿಲ್ಲ. ಈ ಬಗ್ಗೆ ಕಳೆದ ವಾರ ಹರಿದ್ರಾವತಿ ಗ್ರಾಮದವರು ಪಾದಯಾತ್ರೆ ನಡೆಸಿದ್ದರು. ಅಂದಿನಿಂದ ಪ್ರತಿದಿನ ಸಂಜೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದು ಸಾಮಾನ್ಯವಾಗಿದೆ.
ಇನ್ನಾದರೂ ಈ ಭಾಗದ ಜನಪ್ರತಿನಿಧಿಗಳು ನಿದ್ದೆಯಿಂದ ಎಚ್ಚೆತ್ತು ಮಲೆನಾಡಿನ ಭಾಗದ ಸಮಸ್ಯೆ ಬಗೆಹರಿಸುವ ಬಗ್ಗೆ ಗಮನ ನೀಡುತ್ತಾರಾ ಕಾದುನೋಡಬೇಕಾಗಿದೆ.