ವಿಧಾನ ಪರಿಷತ್ ಚುನಾವಣೆ: ಮತದಾನಕ್ಕೆ ನಿರಾಸಕ್ತಿ, ಕಾಂಗ್ರೆಸ್‌ನಲ್ಲಿ ತಾಳ-ಮೇಳವಿಲ್ಲ, ಬಿಜೆಪಿಯಲ್ಲಿ ಒಳಗೊಳಗೆ ವಿರೋಧ !

0
412

ಹೊಸನಗರ: ಡಿ.10ರಂದು ನಡೆಯುವ ವಿಧಾನ ಪರಿಷತ್‌ ಚುನಾವಣೆಗೆ ಮತದಾರರಾಗಿರುವ ಗ್ರಾಮ ಪಂಚಾಯಿತಿ ಅಭ್ಯರ್ಥಿಗಳು ಚುನಾವಣೆಯಲ್ಲಿ ಹೇಳಿಕೊಳ್ಳುವಂತಹ ಆಸಕ್ತಿ ತೋರುತ್ತಿಲ್ಲ. ಹೊಸನಗರ ತಾಲೂಕಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳು ಪ್ರತಿ ಗ್ರಾಮ ಹಂತದಲ್ಲಿಯೂ ಸಭೆ ನಡೆಸುತ್ತಿದ್ದರೂ, ಸಭೆಗಳಿಗೆ ಮತದಾರರ ಗೈರು ಎದ್ದು ಕಾಣತೊಡಗಿದೆ. ಕಳೆದ ಬಾರಿಯ ವಿಧಾನಪರಿಷತ್‌ಚುನಾವಣೆಗೆ ಹೋಲಿಸಿದಲ್ಲಿ ಈ ಬಾರಿ ಪ್ರಚಾರದ ರಂಗು ಅಷ್ಟಾಗಿ ಕಂಡು ಬರುತ್ತಿಲ್ಲ.

ಹಣದ ಮೇಲಾಟ?

ಮೇಲ್ನೋಟಕ್ಕೆ ಪಕ್ಷ, ಸಿದ್ದಾಂತ, ಆಡಳಿತ ಪಕ್ಷದ ಪರ ವಿರೋಧಗಳು ಚುನಾವಣೆಯ ಪ್ರಮುಖ ವಿಷಯಗಳಾಗಬಹುದೆಂದು ತೋರಿದರೂ, ಅಂತ್ಯದಲ್ಲಿ ನಡೆಯುತ್ತಿರುವುದೇ ಬೇರೆ. ತಳ ಹಂತದ ಜನ ಪ್ರತಿನಿಧಿಗಳು ಎನಿಸಿರುವ ಗ್ರಾಮ ಪಂಚಾಯಿತಿ ಸದಸ್ಯರಿಗೆ ವಿವಿಧ ಆಮಿಷ ತೋರಿ ಗೆಲುವು ಸಾಧಿಸಬಹುದು ಎನ್ನುವ ಮನೋಭಾವ ಉಭಯ ಪಕ್ಷಗಳಲ್ಲಿ ಕಂಡು ಬಂದಿದೆ. ಆದರೆ ಚುನಾವಣೆಯನ್ನು ಎದುರಿಸಿ ಗೆಲುವು ಸಾಧಿಸಿರುವ ಗ್ರಾಮ ಪಂಚಾಯಿತಿ ಸದಸ್ಯರು ಈಗಿನ ರಾಜಕೀಯ ಪರಿಸ್ಥಿತಿ ಅರಿಯದಷ್ಟು ಮುಗ್ಧರಲ್ಲ ಎನ್ನುವುದು ವಾಸ್ತವ. ಸದ್ಯದ ಪರಿಸ್ಥಿತಿಯಲ್ಲಿ ಮತದಾರರು ಯಾವ ಗುಟ್ಟು ಬಿಟ್ಟುಕೊಡದೇ ಕಾಯ್ದಿಟ್ಟುಕೊಂಡಿದ್ದಾರೆ.

ಅತಿಯಾದ ಆತ್ಮವಿಶ್ವಾಸದಲ್ಲಿ ಬಿಜೆಪಿ:

ಬಹುತೇಕ ಗೆಲುವು ಸಾಧಿಸಿಯಾಗಿದೆ ಎನ್ನುವ ಮನೋಭಾವ ತೋರುತ್ತಿರುವ ಬಿಜೆಪಿ ಪಾಳಯಕ್ಕೆ ಅವರ ಅತಿಯಾದ ಆತ್ಮ ವಿಶ್ವಾಸವೇ ಚುನಾವಣೆಯಲ್ಲಿ ಮುಳುವಾದರೂ ಆಶ್ಚರ್ಯವೇನಿಲ್ಲ. ಅಲ್ಲದೇ ಆಡಳಿತಾರೂಢ ಪಕ್ಷವಾಗಿದ್ದರೂ, ಗ್ರಾಮ ಪಂಚಾಯಿತಿ ಅನುದಾನಗಳಿಗೆ ನೀಡುವ ಅನುದಾನಗಳ ಕೊರತೆ ಸ್ವಪಕ್ಷ ಬೆಂಬಲಿತ ಅಭ್ಯರ್ಥಿಗಳ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದ್ದು, ಒಳಗೊಳಗೇ ಹರಿದಾಡುತ್ತಿದೆ.

ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಧಾನ:

ಚುನಾವಣಾ ಪ್ರಕ್ರಿಯೆ ಆರಂಭಗೊಂಡಾಗಿನಿಂದಲೂ ತಾಲೂಕು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಧಾನದ ಹೊಗೆಯಾಡ ತೊಡಗಿದೆ. ಅಭ್ಯರ್ಥಿಗಿಂತಲೂ ಸ್ಥಳೀಯವಾಗಿ ಗುರುತಿಸಿಕೊಂಡ ಪಕ್ಷದ ಪ್ರಮುಖರೊಬ್ಬರು ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದರಿಂದ ಕಾರ್ಯಕರ್ತರು ಮುಜುಗರ ಅನುಭವಿಸುವಂತಾಗಿದೆ ಎನ್ನುವ ಚರ್ಚೆ ಕರ‍್ಯಕರ್ತರ ನಡುವೆ ಆರಂಭಗೊಂಡಿದೆ.

ಕಳೆದ ಬಾರಿ ಕಾಗೋಡು ತಿಮ್ಮಪ್ಪ ಅವರ ಸೋಲಿಗೂ ಇವರೇ ಪರೋಕ್ಷ ಕಾರಣರಾಗಿದ್ದರು ಎನ್ನುವ ಕುಖ್ಯಾತಿ ಇದ್ದು, ಕಾರ್ಯಕರ್ತರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವಲ್ಲಿ ವಿಫಲರಾಗಿರುವುದು ಪ್ರಸ್ತುತ ಚುನಾವಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ನಿಚ್ಚಳವಾಗಿ ಕಂಡು ಬಂದಿದೆ. ಅಭ್ಯರ್ಥಿ ಸಹಾ ಇವರನ್ನೇ ನೆಚ್ಚಿಕೊಂಡಿರುವುದು ಭವಿಷ್ಯದಲ್ಲಿ ಪಶ್ಚಾತ್ತಾಪ ಪಡಬೇಕಾದ ಪ್ರಸಂಗ ಬಂದೊದಗಬಹುದಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here