ಚಿಕ್ಕಮಗಳೂರು: ಜಿಲ್ಲೆಯ ಕಿರು ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಗೌಡನಹಳ್ಳಿಯಲ್ಲಿರುವ ಸ್ಥಳವನ್ನು ತಾಂತ್ರಿಕವಾಗಿ ಪರಿಶೀಲಿಸಿ ನಂತರ ನಿಗದಿತ ಅವಧಿಯೊಳಗೆ ವರದಿ ಸಲ್ಲಿಸುವಂತೆ ಮೂಲ ಸೌಕರ್ಯ, ಬಂದರು, ಒಳನಾಡು, ಜಲಸಾರಿಗೆ, ಹಜ್ ಮತ್ತು ವಕ್ಫ್ ಸಚಿವರಾದ ಆನಂದ್ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದರು.
ಗೌಡನಹಳ್ಳಿಯ ಕಿರು ವಿಮಾನ ನಿಲ್ದಾಣದ ಸ್ಥಳ ಪರಿಶೀಲನೆ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಚಿಕ್ಕಮಗಳೂರು ತನ್ನ ನೈಸರ್ಗಿಕ ಸಂಪತ್ತಿನಿಂದಾಗಿ ಪ್ರವಾಸೋದ್ಯಮ ತಾಣವಾಗಿ ಗುರುತಿಸಿಕೊಂಡಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಜಿಲ್ಲೆಗೆ ವಿಮಾನ ನಿಲ್ದಾಣದ ಅವಶ್ಯಕತೆ ಇದ್ದು, ಇದಕ್ಕಾಗಿ ಸ್ಥಳ ಗುರುತಿಸಲಾಗಿತ್ತು. ಆದರೆ ಈ ಸ್ಥಳವು ಎ.ಟಿ.ಆರ್ 10 ಸೀಟರ್ ವಿಮಾನ ನಿಲ್ದಾಣಕ್ಕೆ ಮಾತ್ರ ಸೂಕ್ತವಾಗಿದ್ದು, ಪ್ರವಾಸೋದ್ಯಮ ಹಾಗೂ ಕೈಗಾರಿಕಾ ದೃಷ್ಠಿಯಿಂದ ಎ.ಟಿ.ಆರ್ 72 ಸೀಟರ್ ವಿಮಾನ ನಿಲ್ದಾಣದ ಅವಶ್ಯಕತೆ ಇರುವುದರಿಂದ ಸೂಕ್ತವಾದ ಸ್ಥಳವನ್ನು ಗುರುತಿಸಿ ತಾಂತ್ರಿಕವಾಗಿ ಪರಿಶೀಲಿಸಿ ಮೇ 15 ರೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಹಲವಾರು ವರ್ಷಗಳಿಂದ ಅಭಿವೃದ್ಧಿಯಾಗದೆ ನೆನೆಗುದಿಗೆ ಬಿದ್ದಿದ್ದ ವಿಮಾನ ನಿಲ್ದಾಣದ ಅಭಿವೃದ್ಧಿ ಕುರಿತಂತೆ ಅಧಿಕಾರಿಗಳು ಸೂಕ್ತವಾದ ಸ್ಥಳವನ್ನು ಗುರುತಿಸಿ ವರದಿ ಸಲ್ಲಿಸಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಹಾಗೂ ಬೇಲೂರು, ಹಾಸನ ರೈಲು ಮಾರ್ಗ ನಿರ್ಮಾಣಕ್ಕೆ ಈಗಾಗಲೆ ಭೂಸ್ವಾಧೀನಕ್ಕೆ ಸರ್ವೆ ನಡೆದಿದ್ದು ಸರ್ಕಾರಿ ಜಾಗವನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಚಿಕ್ಕಮಗಳೂರಿನಿಂದ ಹಾಸನ ರೈಲ್ವೆ ಮಾರ್ಗ ನಿರ್ಮಾಣಕ್ಕೆ ರೂ.1200 ಕೋಟಿ ಅಂದಾಜು ವೆಚ್ಛದ ಕ್ರೀಯಾ ಯೋಜನೆ ತಯಾರಿಸಿ ಸಲ್ಲಿಸಲಾಗಿದ್ದು, ಭೂಸ್ವಾಧೀನ ಸೇರಿದಂತೆ ಮೋದಲ ಹಂತದಲ್ಲಿ ರೂ.465 ಕೋಟಿ ಮಂಜೂರಾಗಿದೆ, ಹಣ ಮಂಜೂರಾಗಿ ಎರಡು ವರ್ಷ ಕಳೆದರು ಕೂಡ ಕಾಮಗಾರಿ ಪ್ರಾರಂಭವಾಗಿರದೆ ಸಚಿವರು ಬೇಸರ ವ್ಯಕ್ತಪಡಿಸಿದರು.
ಚಿಕ್ಕಮಗಳೂರಿನಿಂದ ಬೇಲೂರಿಗೆ 22ಕಿ.ಮೀ ಮತ್ತು ಬೇಲೂರಿನಿಂದ ಹಾಸನಕ್ಕೆ 38 ಕಿ.ಮೀ ಸೇರಿದಂತೆ ಒಟ್ಟು 60 ಕಿ.ಮೀ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಭೂಸ್ವಾಧೀನವಾಗಿದ್ದು ಇದರಲ್ಲಿ ಸರ್ಕಾರಿ ಜಾಗವನ್ನು ಗುರುತಿಸುವಂತೆ ತಿಳಿಸಿದ ಸಚಿವರು ಭೂಸ್ವಾಧೀನ ಪಡಿಸಿಕೊಂಡಿರುವ ಫಲಾನುಭವಿಗಳಿಗೆ ಪರಿಹಾರ ನೀಡಲಾಗಿರುವ ಕುರಿತು ಮಾಹಿತಿ ಪಡೆದರು.
ಈ ಬಗ್ಗೆ ಮಾಹಿತಿ ನೀಡಿದ ಉಪ ವಿಭಾಗಾಧಿಕಾರಿ ಡಾ.ಹೆಚ್.ಎಲ್. ನಾಗರಾಜ್ ಈಗಾಗಲೆ 150 ಎಕ್ಕರೆ ಖಾಸಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಫಲಾನುಭವಿಗಳಿಗೆ ಪರಿಹಾರ ನೀಡಲಾಗಿದೆ ಎಂದರು.
ನಂತರ ಮಾತನಾಡಿದ ಶಾಸಕ ಸಿ.ಟಿ.ರವಿ, ಕಿರು ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲು ಗೌಡನಹಳ್ಳಿಯಲ್ಲಿ 120 ಎಕ್ಕರೆ 22 ಗುಂಟೆ ಸರ್ಕಾರಿ ಜಾಗವನ್ನು ನಿಲ್ದಾಣಕ್ಕಾಗಿ ಮೀಸಲಿಡಲಾಗಿತ್ತು, ಇದು ಕೇವಲ ಎಟಿಆರ್ 10 ಸೀಟರ್ ವಿಮಾನ ನಿಲ್ದಾಣಕ್ಕೆ ಮಾತ್ರ ಸೂಕ್ತವಾಗಿದೆ. ಆದರೆ ಎ.ಟಿ.ಆರ್ 72ಸೀಟರ್ ವಿಮಾನ ನಿಲ್ದಾಣಕ್ಕೆ 200 ಎಕರೆ ಸ್ಥಳದ ಅವಶ್ಯಕತೆ ಇದ್ದು, ಗೌಡನಹಳ್ಳಿಯಲ್ಲಿರುವ ಸ್ಥಳವನ್ನು ಪರಶೀಲಿಸಿ ಸೂಕ್ತವಾಗದಿದ್ದರೆ ಬೇರೆ ಪ್ರದೇಶದಲ್ಲಿ ಸ್ಥಳದಲ್ಲಿ ತಾಂತ್ರಿಕವಾಗಿ ಪರಿಶೀಲನೆ ಮಾಡಿ ವರದಿ ಸಲ್ಲಿಸಿದ ನಂತರ ಕ್ರಮ ಕೈಗೊಳ್ಳಲು ಮನವಿ ಮಾಡಲಾಗದು ಎಂದರು.
ನಗರದಲ್ಲಿ ಎ.ಟಿ.ಆರ್ 10 ಸೀಟರ್ ನ ವಿಮಾನ ನಿಲ್ದಾಣಕ್ಕೆ ನಿರ್ಧಾರ ಮಾಡಲಾಗಿತ್ತು, ಇತ್ತೀಚೆಗೆ ಬಂದ ಸಲಹೆಯ ಪ್ರಕಾರ ಎ.ಟಿ.ಆರ್ 72 ಸೀಟರ್ ನ ನಿಲ್ದಾಣದ ನಿರ್ಮಾಣಕ್ಕೆ ಸ್ಥಳದ ಅಭಾವವಿರುವುದರಿಂದ ಸೂಕ್ತವಾದ ಸ್ಥಳವನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಮತ್ತು ರೈಲ್ವೆ ಮಾರ್ಗ ಹಳಿಗಳ ಮಾರ್ಗದಲ್ಲಿ ಗ್ರಾಮಗಳು ಒಳಪಟ್ಟಿದ್ದರೆ ಅಂತಹ ಜಾಗವನ್ನು ಗುರುತಿಸಿ ಬೇರೆ ಕಡೆಗೆ ಸ್ಥಳಾಂತರಿಸುವ ಬಗ್ಗೆ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲಾಧಿಕಾರಿಗಳು ಸಭೆ ಸೇರಿ ರೈಲ್ವೆ ಮಾರ್ಗ ನಿರ್ಮಾಣದ ಬಗ್ಗೆ ಚರ್ಚಿಸಿ ಕಾಮಗಾರಿ ಪ್ರಾರಂಭಕ್ಕೆ ಗಮನಹರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಉಪಾಧ್ಯಕ್ಷ ಬಿ.ಜೆ.ಸೋಮಶೇಖರಪ್ಪ, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್.ಎಂ.ಹೆಚ್, ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.