ಚಿಕ್ಕಮಗಳೂರು : ಕಾಫಿನಾಡಿನ ಮಲೆನಾಡು ಭಾಗವು ಒಂದು ಕಾಲದಲ್ಲಿ ಭಾರೀ ಸದ್ದುಮಾಡಿದ ನಕ್ಸಲ್ ಚಟುವಟಿಕೆ ಇದೀಗ ತಣ್ಣಗಾಗಿದೆ. ಅದರಲ್ಲೂ ಮಲೆನಾಡಿನ ನಕ್ಸಲ್ ಚಳುವಳಿಯ ಸೂತ್ರಧಾರ ಬಿ.ಜಿ ಕೃಷ್ಣಮೂರ್ತಿ, ಸಾವಿತ್ರಿ ಬಂಧನ ಆಗುತ್ತಿದ್ದಂತೆ ಪೊಲೀಸರು ಕೂಡ ನೀರಳರಾಗಿದ್ದಾರೆ. ನಕ್ಸಲ್ ಸೂತ್ರಧಾರರ ಬಂಧನದ ಮೂಲಕ ಮಲೆನಾಡಿನಲ್ಲಿ ಕೆಂಪು ಉಗ್ರರ ನೆಲ ಕಳಚಿಬಿದ್ದಿದೆ. ಕೇರಳ ಪೊಲೀಸರಿಗೆ ಸಿಕ್ಕಿಬಿದ್ದ ನಕ್ಸಲ್ ನಾಯಕರು, ಇದೀಗ ಕಾಫಿನಾಡಿನ ಪೋಲಿಸ್ ಸುರ್ಪದಿನಲ್ಲಿದ್ದಾರೆ. ಅಷ್ಟಕ್ಕೂ ಕಾಫಿನಾಡಿನಿಂದ ಕೇರಳಕ್ಕೆ ನಕ್ಸಲ್ ನಾಯಕರು ಹೋಗಿದ್ದಾದ್ರೂ ಯಾಕೆ, ಮಲೆನಾಡಿನಲ್ಲಿ ನಕ್ಸಲ್ ಯುಗಾಂತ್ಯವಾಯ್ತಾ? ಎನ್ನುವ ಪ್ರಶ್ನೆ ಮೂಡಿದೆ.
ಪಶ್ಚಿಮಘಟ್ಟಗಳ ರಮಣೀಯ ಪ್ರಕೃತಿಯ ಐಸಿರಿ. ಎತ್ತ ಕಣ್ಣಾಯಿಸಿದ್ರೂ ಅತ್ತ ಸುಂದರ ಪರಿಸರ ಕಣ್ಣಿಗೆ ಗೋಚರಿಸುತ್ತದೆ. ಇದೇ ಪರಿಸರವು ಒಂದು ಕಾಲದಲ್ಲಿ ನಕ್ಸಲ್ ಹುಟ್ಟಿಗೆ ಕಾರಣವಾಯ್ತು. ನಕ್ಸಲ್ ಚಟುವಟಿಕೆ ಮಲೆನಾಡಿನಲ್ಲಿ ಬೇರೂರಲು ವೇದಿಕೆ ಮಾಡಿಕೊಡ್ತು ಅನ್ನೋದು ಕೂಡ ಅಷ್ಟೇ ಸತ್ಯನೇ.. ಹೌದು, ನಕ್ಸಲ್ ಸೂತ್ರಧಾರ ಬಿ.ಜಿ ಕೃಷ್ಣಮೂರ್ತಿ ಸೇರಿದಂತೆ ಹಲವರು ಇದೇ ಕಾಡಿನಲ್ಲಿ ಭೂಗತರಾಗುವ ಮೂಲಕ ಪೊಲೀಸರಿಗೆ ಸೆಡ್ಡು ಹೊಡೆದು ಅನೇಕ ಯುವಕರನ್ನ ನಕ್ಸಲ್ ಲೋಕದಲ್ಲಿ ಸಕ್ರಿಯರಾಗಿಸಿದ್ರು.
ಜಿಲ್ಲೆಯ ಶೃಂಗೇರಿ, ಎನ್.ಆರ್ ಪುರ, ಕೊಪ್ಪದ ಸುತ್ತಮುತ್ತ ಸೇರಿದಂತೆ ಉಡುಪಿ ಜಿಲ್ಲೆಯ ಅನೇಕ ಪ್ರದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನ ಎಸಗಿ ಪೋಲಿಸರಿಗೆ ಸವಾಲೆಸಗಿದರು. ಆ ಬಳಿಕ ಸರ್ಕಾರ ನಕ್ಸಲ್ ನಿಗ್ರಹ ದಳ ರಚಿಸಿದ ಬಳಿಕ ಚಿಕ್ಕಮಗಳೂರು ಜಿಲ್ಲೆ, ಉಡುಪಿ ಜಿಲ್ಲೆ ಅಲ್ಲದೇ ರಾಜ್ಯದಿಂದಲೇ ಕಾಲ್ಕಿತ್ತ ನಕ್ಸಲ್ ಪಡೆ, ಕೇರಳ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ, ಒರಿಸ್ಸಾ ಸೇರಿ ಹಲವೆಡೆ ತೆರಳಿ ಯುವಕ-ಯುವತಿಯರನ್ನ ನಕ್ಸಲ್ ಕಡೆ ಸೆಳೆಯುತ್ತಿದರು. ಹೀಗೆ ಒಂದು ಕಾಲದಲ್ಲಿ ಪೊಲೀಸರಿಗೆ ಸಿಂಹ ಸ್ವಪ್ನವಾಗಿದ್ದ ಬಿ.ಜಿ ಕೃಷ್ಣಮೂರ್ತಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಎರಡು ದಶಕಗಳ ಹಿಂದೆ ಮಲೆನಾಡಿನ ನಕ್ಸಲ್ ಚಳುವಳಿ ಸೂತ್ರಧಾರ ಬಿ.,ಜಿ ಕೃಷ್ಣಮೂರ್ತಿಯ ಹೆಸರು ಕೇಳದವರೇ ಇಲ್ಲ. ಶೃಂಗೇರಿ, ಉಡುಪಿ, ಶಿವಮೊಗ್ಗ ಸೇರಿದಂತೆ ರಾಜ್ಯದ ನಾನಾ ಭಾಗಗಳ ಪೊಲೀಸರೂ ಕೂಡ ಇದೇ ಕೃಷ್ಣಮೂರ್ತಿಯ ಬೆನ್ನು ಬಿದ್ದಿದ್ದರು. ಹೀಗಿರುವಾಗ 2000ನೇ ಇಸವಿಯಲ್ಲಿ ಭೂಗತನಾದ ಈ ನಕ್ಸಲ್ ನಾಯಕ ಕೇರಳ, ಆಂಧ್ರದ ಕಡೆ ಮುಖಮಾಡಿದ್ರು. ಆ ವೇಳೆ ಕೃಷ್ಣಮೂರ್ತಿ ತಲೆಗೆ ಪೊಲೀಸ್ ಇಲಾಖೆ, ಐದು ಲಕ್ಷ ನಗದು ಬಹುಮಾನವೂ ಘೋಷಣೆ ಮಾಡಿತ್ತು. ಆ ನಕ್ಸಲ್ ನಾಯಕನ್ನು ಕೇರಳ ಪೊಲೀಸರು ಮೂರು ತಿಂಗಳ ಹಿಂದೆಯಷ್ಟೇ ಬಂಧಿಸಿದರು. ನಕ್ಸಲ್ ಚಳವಳಿ ಸೂತ್ರಧಾರನಾಗಿದ್ದ ಬಿ.ಜಿ ಕೃಷ್ಣಮೂರ್ತಿಯ ವಿರುದ್ಧ 53 ಪ್ರಕರಣಗಳು ದಾಲಾಗಿದೆ.
ಬಿ.ಜಿ ಕೃಷ್ಣಮೂರ್ತಿ ಬಂಧನದ ಜೊತೆ ಜೊತೆಗೆ 2001ರಿಂದಲೂ ಭೂಗತರಾಗಿದ್ದ ಕಳಸ ತಾಲ್ಲೂಕಿನ ಸಾವಿತ್ರಿ ಬಂಧನ ಕೂಡ ಆಗಿದೆ. ನಕ್ಸಲ್ ನಾಯಕಿ ಸಾವಿತ್ರಿಯನ್ನ ಬಂಧಿಸಿದ ಕೇರಳ ಪೊಲೀಸರು, ಅನೇಕ ಪ್ರಕರಣಗಳ ತನಿಖೆಗೆ ಕಾಫಿನಾಡಿನ ಪೊಲೀಸರಿಗೆ ಕೂಡ ಸಾವಿತ್ರಿ ಬೇಕಾಗಿದ್ದರಿಂದ ಕಳುಹಿಸಿಕೊಟ್ಟಿದ್ದಾರೆ. ಸದ್ಯ ಇಬ್ಬರು ಕೂಡ ಬಿಗಿ ಪೊಲೀಸ್ ಭದ್ರತೆಯಲ್ಲಿ ನ್ಯಾಯಾಲಯಗಳಿಗೆ ಹಾಜರಾಗಿ ವಿಚಾರಣೆಯನ್ನ ಎದುರಿಸುತ್ತಿದ್ದಾರೆ. ಸದ್ಯ ಇವರಿಬ್ಬರ ಬಂಧನದ ಮೂಲಕ ಮಲೆನಾಡಿನಲ್ಲಿ ಕೆಂಪು ಉಗ್ರರ ನೆಲೆಗಳು ಕೊನೆಗೊಂಡತ್ತೆ ಕಾಣುತ್ತಿದೆ.
Related