ವಿಶ್ವ ರಂಗಭೂಮಿ ರಂಗೋತ್ಸವ ಸಮಾರೋಪ | ರಂಗಭೂಮಿ ಜೀವ ಚೈತನ್ಯದ ಚಿಲುಮೆ: ಆರ್.ಎಸ್.ಹಾಲಸ್ವಾಮಿ

0
223

ಶಿವಮೊಗ್ಗ : ಕೊರೊನಾದಂತಹ ಸಂದಿಗ್ಧ ಸನ್ನಿವೇಶದಲ್ಲೂ ರಂಗಭೂಮಿ ಕಲಾವಿದರಲ್ಲಿ ಜೀವನ ಪ್ರೀತಿಯನ್ನು ಉಳಿಸಿಕೊಂಡು ಚೈತನ್ಯ ಮೂಡಿಸಿದೆ ಎಂದು ರಂಗಸಮಾಜದ ಸದಸ್ಯ ಆರ್.ಎಸ್.ಹಾಲಸ್ವಾಮಿ ಅವರು ತಿಳಿಸಿದರು.

ಅವರು ಸೋಮವಾರ ಶಿವಮೊಗ್ಗ ರಂಗಾಯಣದಲ್ಲಿ ಕಳೆದ ಮೂರು ದಿನಗಳಿಂದ ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ನಡೆಯುತ್ತಿರುವ ಎಸ್.ಮಾಲತಿ ರಂಗೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ರಂಗಭೂಮಿ ಪ್ರತಿಯೊಬ್ಬರಿಗೂ ಉತ್ತಮ ಮನುಷ್ಯನಾಗಿ ಬದುಕುವ ಕಲೆಯನ್ನು ಕಲಿಸುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ರಂಗ ಚಟುವಟಿಕೆಗಳಲ್ಲಿ ತೊಡಗಿಸಲು, ಅವರಿಗೆ ನಾಟಕ ತೋರಿಸಲು, ರಂಗದ ಬಗ್ಗೆ ಅಭಿರುಚಿಯನ್ನು ಮೂಡಿಸಲು ಪೋಷಕರು ಮುಂದಾಗಬೇಕಾಗಿದೆ. ಶಿವಮೊಗ್ಗ ರಂಗಾಯಣ ಈ ನಿಟ್ಟಿನಲ್ಲಿ ಮಕ್ಕಳನ್ನು ಕೇಂದ್ರೀಕರಿಸಿ ರಂಗಚಟುವಟಿಕೆಗಳನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಹಮ್ಮಿಕೊಳ್ಳಲಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಿ.ಆರ್.ಲವ ಅವರು ಮಾತನಾಡಿ, ರಂಗಭೂಮಿ ಸಮಕಾಲೀನ ಸಮಸ್ಯೆಗಳಿಗೆ ಧ್ವನಿಯಾಗಬೇಕು. ತನ್ನ ಸುತ್ತಲಿನ ದೌರ್ಜನ್ಯ, ಅನ್ಯಾಯಗಳನ್ನು ಪ್ರಶ್ನಿಸುವ ಅವಕಾಶವನ್ನು ರಂಗಭೂಮಿ ಮುಕ್ತವಾಗಿರಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರಂಗಾಯಣ ನಿರ್ದೇಶಕ ಸಂದೇಶ ಜವಳಿ ಅವರು ಮಾತನಾಡಿ, ಮೂರು ದಿನಗಳ ಕಾಲ ನಡೆದ ವಿಶ್ವ ರಂಗಭೂಮಿ ರಂಗೋತ್ಸವ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಮೂರು ವಿಭಿನ್ನ ನಾಟಕಗಳು, ರಂಗ ಸಂಸ್ಕೃತಿಯ ಭವಿಷ್ಯದ ಕುರಿತಾದ ಸಂವಾದ ಕಾರ್ಯಕ್ರಮ, ಯುವ ರಂಗ ನಿರ್ದೇಶಕರೊಂದಿಗಿನ ಸಂವಾದ ಕಾರ್ಯಕ್ರಮಗಳು ರಂಗಭೂಮಿಯ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲುವಲ್ಲಿ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವೈವಿಧ್ಯಮಯ ಕಾರ್ಯಕ್ರಮಗಳನ್ನು ರಂಗಾಯಣದ ವತಿಯಿಂದ ಆಯೋಜಿಸಲಾಗುವುದು ಎಂದರು.

ಹಿರಿಯ ರಂಗಕರ್ಮಿಗಳಾದ ಕೆ.ಲಕ್ಷ್ಮಿನಾರಾಯಣ ರಾವ್ ಮತ್ತು ಡಾ.ಎಚ್.ಎಸ್.ನಾಗಭೂಷಣ ಅವರು ಮಾತನಾಡಿದರು. ಮಂಜುನಾಥ ಸ್ವಾಮಿ ಅವರು ಸ್ವಾಗತಿಸಿದರು. ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದ ಬಳಿಕ ಕೆ.ಜಿ.ಕೃಷ್ಣಮೂರ್ತಿ ಅವರ ನಿರ್ದೇಶನದ `ಅಬ್ಬಲಿಗೆ’ ನಾಟಕ ಪ್ರದರ್ಶನ ನಡೆಯಿತು.

ಜಾಹಿರಾತು

LEAVE A REPLY

Please enter your comment!
Please enter your name here