ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ | ನಿಯಮಿತವಾಗಿ ರಕ್ತದಾನ ಶಿಬಿರ ಆಯೋಜಿಸಿ ರಕ್ತ ಸಂಗ್ರಹಿಸಿ : ಡಿಹೆಚ್‍ಓ

0
78

ಶಿವಮೊಗ್ಗ : ತುರ್ತು ಚಿಕಿತ್ಸೆಗಳ ಸಂದರ್ಭದಲ್ಲಿ ಜೀವ ಉಳಿಸಲು ಅತಿ ಅಗತ್ಯವಾದ ರಕ್ತವನ್ನು ನಿಯಮಿತವಾಗಿ ಶಿಬಿರ ಆಯೋಜಿಸಿ ಸಂಗ್ರಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ತಿಳಿಸಿದರು.

ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ಶಿವಮೊಗ್ಗ ಇವರ ವತಿಯಿಂದ ವಿಶ್ವ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಇಂದು ನ್ಯೂಮಂಡ್ಲಿಯ ಫಾರುಕಿಯಾ ಶಾದಿ ಮಹಲ್ ಇಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಕ್ತದಾನ ಮಾಡುವುದು ಒಗ್ಗಟ್ಟಿನ ಪ್ರಕ್ರಿಯೆ, ಈ ಪ್ರಯತ್ನಕ್ಕೆ ಕೈ ಜೋಡಿಸಿ ಜೀವ ಉಳಿಸೋಣ’ ಎಂಬ ಪ್ರಸಕ್ತ ವರ್ಷದ ಘೋಷವಾಕ್ಯದೊಂದಿಗೆ ಈ ಬಾರಿ ರಕ್ತದಾನಿಗಳ ದಿನಾಚರಣೆ ಆಚರಿಸಲಾಗುತ್ತಿದ್ದು, ರಕ್ತಕ್ಕೆ ವರ್ಷವಿಡೀ ನಿರಂತರವಾಗಿ ಬೇಡಿಕೆ ಇರುತ್ತದೆ. ಏಕೆಂದರೆ ಅಪಘಾತಗಳು, ತುರ್ತು ಚಿಕಿತ್ಸೆ ಸಂದರ್ಭಗಳು ಬರುತ್ತಲೇ ಇರುತ್ತವೆ. ಜೊತೆಯಲ್ಲಿ ಕ್ಯಾನ್ಸರ್ ರೋಗಿಗಳು, ಗರ್ಭಿಣಿ ಸ್ತ್ರೀಯರು, ತಲಸ್ಸೀಮಿಯ, ಹಿಮೊಫೀಲಿಯ ಮುಂತಾದ ರೋಗಿಗಳು ರಕ್ತದಾನಿಗಳನ್ನೇ ಅವಲಂಬಿಸಿರುತ್ತಾರೆ. ನಮ್ಮ ಜಿಲ್ಲೆಯಲ್ಲೇ ದಿನವೊಂದಕ್ಕೆ ಸರಾಸರಿ 200 ಯುನಿಟ್ ರಕ್ತದ ಅವಶ್ಯಕತೆ ಇದ್ದು, ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ರಕ್ತನಿಧಿ ಕೇಂದ್ರಗಳು ನಿಯಮಿತವಾಗಿ ರಕ್ತದಾನ ಶಿಬಿರ ಏರ್ಪಡಿಸಿ ರಕ್ತ ಸಂಗ್ರಹಿಸಬೇಕು ಎಂದರು.

ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕದ ಕಾರ್ಯಕ್ರಮಾಧಿಕಾರಿ ಡಾ.ದಿನೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವದಾದ್ಯಂತ ರಕ್ತದ ಅವಶ್ಯಕತೆ ಇದ್ದು, ಪ್ರಥಮ ಬಾರಿಗೆ ರಕ್ತದ ಗುಂಪು ಕಂಡು ಹಿಡಿದ ಕಾರ್ಲ್ ಲ್ಯಾಂಡ್‍ಸ್ಟೇನರ್ ಎಂಬ ವಿಜ್ಞಾನಿಯ ಹುಟ್ಟುಹಬ್ಬದ ನೆನಪಿಗಾಗಿ 2004 ರಿಂದ ವಿಶ್ವ ಆರೋಗ್ಯ ಸಂಸ್ಥೆ ಜೂನ್ 14 ರಂದು ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ ಜಾರಿಗೆ ತಂದು ಆಚರಿಸುತ್ತಾ, ಎಲ್ಲರಲ್ಲಿ ಸ್ವಯಂಪ್ರೇರಿತ ರಕ್ತದಾನದ ಅಗತ್ಯದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ರಕ್ತದಾನಿಗಳಾದ ಅರುಣ್‍ಕುಮಾರ್, ಅನೀಶ್ ಮತ್ತು ಶಿಲ್ಪಾ ಮೋಹನ್ ಇವರನ್ನು ಗೌರವಿಸಲಾಯಿತು. ಹಾಗೂ ಸ್ವಯಂಪ್ರೇರಿತ ರಕ್ತದಾನದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ಥಳೀಯರಾದ ಶಂಕರ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಮೆಡಿಕಲ್ ಆಫೀಸರ್ ಡಾ.ಭೀಮಪ್ಪ ಪಾಲ್ಗೊಂಡಿದ್ದರು. ತುಂಗಾನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಅಕ್ತರ್ ನಿರೂಪಿಸಿದರು. ಪ್ರತಿಮಾ ಡಾಕಪ್ಪಗೌಡ ಸ್ವಾಗತಿಸಿದರು. ಮಂಗಳಾ ಎನ್.ಎಂ ವಂದಿಸಿದರು.

ಜಾಥಾ :

ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಇಂದು ಬೆಳಿಗ್ಗೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ತುಂಗಾನಗರ ಆವರಣ ಇಲ್ಲಿಂದ ಜಾಥಾ ಹೊರಟು ನ್ಯೂ ಮಂಡ್ಲಿ ವೃತ್ತದಿಂದ ಹಾದು ಫಾರುಕಿಯಾ ಶಾದಿ ಮಹಲ್ ಶಿವಮೊಗ್ಗ ಇಲ್ಲಿ ಮುಕ್ತಾಯಗೊಂಡಿತು. ಜಾಥಾದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ಶುಶ್ರೂಷಕ ದಾದಿಯರು, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here