ಶಿವಮೊಗ್ಗ: ಸಾಕಾನೆಯೊಂದು ವೈದ್ಯರ ಮೇಲೆ ದಾಳಿಗೆ ಮುಂದಾದ ಘಟನೆ ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದಲ್ಲಿ ನಡೆದಿದ್ದು, ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಸಕ್ರೆಬೈಲು ಆನೆ ಬಿಡಾರದಲ್ಲಿ ಕಳೆದ ಎರಡು ದಿನದ ಹಿಂದೆ ಭಾನುಮತಿ ಆನೆ ಮರಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿ ಆನೆಗೆ, ವೈದ್ಯ ಡಾ|| ವಿನಯ್ ಕುಮಾರ್ ಔಷಧೋಪಚಾರ ನಡೆಸುತ್ತಿದ್ದರು. ಈ ವೇಳೆ ಪಕ್ಕದಲ್ಲೇ ಇದ್ದ ನೀಲಾಂಬರಿ ಆನೆ ವೈದ್ಯ ವಿನಯ್ ಕುಮಾರ್ ಅವರಿಗೆ ಸೊಂಡಿಲಿನಿಂದ ತಿವಿದಿದೆ. ಸೊಂಡಿಲಿನಿಂದ ತಿವಿದ ಭರಸಕ್ಕೆ ವೈದ್ಯ ವಿನಯ್ ಕುಮಾರ್ ಕೆಳಗೆ ಬಿದ್ದಿದ್ದಾರೆ.

ರೋಷಗೊಂಡಿದ್ದ ನೀಲಾಂಬರಿ ಆನೆ ಎರಡು ಬಾರಿ ಕಾಲನ್ನು ಮೇಲೆ ಎತ್ತಿ ವೈದ್ಯರ ಮೇಲೆ ಇಡಲು ಪ್ರಯತ್ನಿಸಿದೆ. ಈ ವೇಳೆ ವೈದ್ಯ ಜೋರಾಗಿ ಕಿರುಚಾಟ ನಡೆಸಿದ್ದಾರೆ. ಆದರೆ ತಾಯಿ ಹಾಗೂ ಮರಿ ಆನೆ ಜೊತೆ ಮಾವುತರು ಹಾಗೂ ಕಾವಾಡಿಗಳು ಇದ್ದಿದ್ದರಿಂದ ವೈದ್ಯರ ಸಹಾಯಕ್ಕೆ ಯಾರೊಬ್ಬರೂ ಬರಲು ಸಾಧ್ಯವಾಗಿಲ್ಲ. ನಂತರ ಕ್ಷಣಾರ್ಧದಲ್ಲಿ ವೈದ್ಯ ವಿನಯ್ ಕುಮಾರ್ ಮೇಲಕ್ಕೆ ಎದ್ದು ಪಕ್ಕಕ್ಕೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.
