ವೈದ್ಯ ಸಿಬ್ಬಂದಿಗಳ ನಿರ್ಲಕ್ಷ್ಯ ; ಕಣ್ಣು ಬಿಡುವ ಮುನ್ನವೇ ಉಸಿರು ಚೆಲ್ಲಿದ ನವಜಾತ ಶಿಶು !

0
190

ಶಿಕಾರಿಪುರ: ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಸಾವನ್ನಪ್ಪಿದ್ದನ್ನು ಖಂಡಿಸಿ ಆಸ್ಪತ್ರೆ ಎದುರು ಪ್ರತಿಭಟನೆ ಮಾಡಿದ ಘಟನೆ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ಚಿಕ್ಕಜೋಗಿಹಳ್ಳಿ ಗ್ರಾಮದ ಸರಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ಹೆರಿಗೆ ಆಗಿ ಕೆಲವೆ ಗಂಟೆಯಲ್ಲಿ ಮಗು ಸಾವನ್ನಪ್ಪಿದೆ ಅದಕ್ಕೆ ವೈದ್ಯ ಸಿಬ್ಬಂದಿಯೆ ನೇರಹೊಣೆ. ಮಗು ಹುಟ್ಟಿದಾಗ ಆರೋಗ್ಯವಾಗಿತ್ತು ಮಗುವಿಗೆ ಚಿಕಿತ್ಸೆ ನೀಡಬೇಕು ಎನ್ನುವ ಸಂದರ್ಭದಲ್ಲಿ ಚಿಕಿತ್ಸೆ ನೀಡಲಿಲ್ಲ, ವೈದ್ಯರೂ ಆಸ್ಪತ್ರೆಯಲ್ಲಿ ಇರಲಿಲ್ಲ, ದೂರವಾಣಿ ಮೂಲಕ ಸಂಪರ್ಕಿಸಿದರೂ ಸಿಗಲಿಲ್ಲ. ಹೆರಿಗೆಗೂ ಮುನ್ನ ಮೂರು ಜನ ದಾದಿಯರಿದ್ದರು ಆದರೆ ಹೆರಿಗೆ ಸಂದರ್ಭಕ್ಕೆ ಒಬ್ಬರೆ ಉಳಿದರು, ಇನ್ನಿಬ್ಬರು ಆಸ್ಪತ್ರೆಗೆ ಆಗಮಿಸಲಿಲ್ಲ. ರೋಗಿಯ ಕುರಿತು ಸೂಕ್ತ ಮಾಹಿತಿ ಇಲ್ಲದ ಒಬ್ಬ ಸಿಬ್ಬಂದಿ ಮಗು ಕಾಪಾಡಬೇಕು, ತಾಯಿ ಉಳಿಸಬೇಕು ಎನ್ನುವ ಗೊಂದಲಕ್ಕೆ ಒಳಗಾಗಿದ್ದರು ಒಟ್ಟಾರೆ ಆಸ್ಪತ್ರೆ ಸಿಬ್ಬಂದಿ ಬೇಜವಾಬ್ದಾರಿ ವರ್ತನೆ ತೋರಿದ್ದು ಮಗು ಮೃತಪಟ್ಟಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಘಟನಾ ವಿವರ:

ಹಿತ್ಲಾ ಗಾಮದ ನೆಹರು ತಮ್ಮ ಮಗಳ ಹೆರಿಗಾಗಿ ಚಿಕ್ಕಜೋಗಿಹಳ್ಳಿಯ ಆಗಮಿಸಿದ್ದರು. ಇಡೀ ತಾಲ್ಲೂಕಿನಲ್ಲೇ 24×7 ಸೇವಾ ನಿರತ ಮಹಿಳೆಯರಿಗಾಗಿ ಮೀಸಲಿಟ್ಟ ಮಾತೃ ಆರೋಗ್ಯ ಕ್ಷೇಮ ಎಂಬ ಪಿ.ಹೆಚ್.ಸಿ ಕೇವಲ 2 ಕೇಂದ್ರಗಳಿದ್ದು ಒಂದು ಶಿರಾಳಕೊಪ್ಪ ಭಾಗದಲ್ಲಿದ್ದರೇ ಇನ್ನೊಂದು ಚಿಕ್ಕಜೋಗಿಹಳ್ಳಿಯಲ್ಲಿದೆ. ದುರಾದೃಷ್ಟದ ಸಂಗತಿ ಎಂದರೆ ಇಲ್ಲಿ ಕಾರ್ಯನಿರ್ವಹಿಸುವ ವೈದ್ಯಾಧಿಕಾರಿ ಡಾ.ಚಂದ್ರಕಾಂತ್ ಹಾಗೂ ತಾಳಮೇಳವಿಲ್ಲದ ಶುಶ್ರೂಕಿಯರ ಉದಾಸೀನಪರ ಕೆಲಸದಿಂದ ಸುತ್ತಮುತ್ತ ಗ್ರಾಮಸ್ಥರು ಬೇಸತ್ತಿದ್ದಾರೆ. ಜೀವ ಕೊಡುವ ಕೇಂದ್ರ ಇತ್ತೀಚಿಗೆ ಜೀವ ತೆಗೆಯುವ ಕೇಂದ್ರವಾಗಿದೆ. ಈ ಹಿಂದೆ ಗ್ರಾಮ ಸಭೆಯಲ್ಲಿ ಡಾ.ಚಂದ್ರಕಾಂತ್ ವಿರುದ್ಧ ಚರ್ಚಿಸಿ ಇಂತಹ ವೈದ್ಯ ಈ ಕೇಂದ್ರಕ್ಕೆ ಬೇಡ ಎಂಬ ನಿಲುವು ತಾಳಿದ್ದರೂ ಯಾವುದೋ ಶಿಫಾರಿಸ್ಸನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಆಗಾಗ ಆತನ ಮೇಲೆ ಆರೋಪಗಳಿದ್ದರೂ ಈ ಘಟನೆ ಮರುಕಳಿಸಿದ್ದು ಮಗು ಕಳೆದುಕೊಂಡ ದಂಪತಿಗಳಲ್ಲದೇ ಗ್ರಾಮಸ್ಥರಿಗೂ ನೋವಾಗಿದೆ. ಇಂತಹ ಸಿಬ್ಬಂದಿ ನಮಗೆ ಬೇಡವೇ ಬೇಡ ಅವರನ್ನು ಕೂಡಲೇ ಕೆಲಸದಿಂದ ವಜಾ ಮಾಡಿ ಎಂದು ಆಗ್ರಹಿಸಿದ್ದು ಕಂಡುಬಂದಿದೆ. ಕುಟುಂಬದವರು ಎಷ್ಟೇ ಕರೆಮಾಡಿದರೂ ವೈದ್ಯ ನಾನು ಅರ್ಜೆಂಟ್ ಮೀಟಿಂಗ್‌ನಲ್ಲಿದ್ದೇನೆ ಎಂದು ಸಬೂಬು ಹೇಳುತ್ತಾ ಗೈರು ಹಾಜರಾಗಿದ್ದು. ಶುಶ್ರೂಕಿಯವರೇ ಹೆರಿಗೆ ಮಾಡಿಸಲು ಹೋಗಿ ಅರ್ಧಂಬರ್ಧ ಮಾಡಿ ಎಲ್ಲರಿಗೂ ಗಾಬರಿ ಹುಟ್ಟಿಸಿ ಶಿಕಾರಿಪುರದ ಆಸ್ಪತ್ರೆಯಲ್ಲಿಯೂ ಶುಶ್ರೂಷೆ ದೊರಕದೇ ಕೊನೆಗೆ ಶಿವಮೊಗ್ಗ ಆಸ್ಪತ್ರೆಯಲ್ಲಿ ಅಸುನೀಗಿದ್ದು ತುಂಬ ಬೇಸರ ಮೂಡಿಸಿದೆ ಎಂದು ಗ್ರಾಮದ ಮುಖಂಡರು ವಿಷಾದಿಸಿದರು.

ಗ್ರಾಮಸ್ಥರ ಕರೆಯ ಮೇರೆಗೆ ತಾಲ್ಲೂಕು ಕಾಂಗ್ರೆಸ್‌ ಮುಖಂಡ ಪುರಸಭಾ ಸದಸ್ಯ ನಾಗರಾಜ್‌ಗೌಡ ತತ್ ಕ್ಷಣವೇ ದೌಡಾಯಿಸಿ ಪ್ರತಿಭಟಿಸುತ್ತಿದ್ದ ಗ್ರಾಮಕ್ಕೆ ಬಂದು ಸಾಂತ್ವನ ತಿಳಿಸಿ, ಸರ್ಕಾರ ನಡೆಸುತ್ತಿರುವ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿ ಮಾತನಾಡಿದ ಅವರು, ಜಿಲ್ಲಾ ಮಟ್ಟದ ಅಧಿಕಾರಿಗಳಿಗೂ ಹಿಂದಿನಿಂದಲೂ ವೈದ್ಯ ಚಂದ್ರಕಾಂತ್ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ, ಎಷ್ಟು ಸಾರಿ ವರ್ತನೆ ಬದಲಾಯಿಸುವಂತೆ ತಿಳಿಸಿದ್ದಾಗ್ಯೂ ವೈದ್ಯನಲ್ಲಿ ಯಾವ ಬದಲಾವಣೆಯೂ ಇಲ್ಲ, ತಮಗೆಲ್ಲ ಗೊತ್ತಿರುವ ವಿಷಯವೇ ಎಂದು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ತರಾಟಗೆ ತೆಗೆದು ಕೊಂಡರು. ನಮ್ಮ ತಾಲ್ಲೂಕಿನಲ್ಲಿ ಮತ್ತೆ ಇಂತಹ ಬೇಜವಾಬ್ದಾರಿ ಮರುಕಳಿಸಬಾರದು ಹಾಗೆ ಅನಾಸಕ್ತ ಸಿಬ್ಬಂದಿಗಳನ್ನು ಅಮಾನತ್ತು ಮಾಡುವಂತೆ ಆಗ್ರಹಿಸಿದರು. ಸರ್ಕಾರದ ಈ ಮಾತೃ ಕ್ಷೇಮ ಆಸ್ಪತ್ರೆಯ ಸವಲತ್ತುಗಳು ಸಮಯೋಚಿತವಾಗಿ ಜನಸಾಮಾನ್ಯರಿಗೆ ಸಿಕ್ಕಾಗಲೇ ಮಾತ್ರ ಸಾರ್ಥಕವಾಗುತ್ತದೆ ಎಂದರು.

ತಾಲೂಕು ವೈದ್ಯಾಧಿಕಾರಿ ಚಂದ್ರಪ್ಪ, ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯನ್ನು ಪ್ರತಿನಿಧಿಸಿದ ಹಿರಿಯ ಅಧಿಕಾರಿಗಳಾದ ವೈದ್ಯ ಡಾ.ನಾಗರಾಜ್‌ನಾಯ್ಕ್, ಸರ್ವೆಯಲೈನ್ ಅಧಿಕಾರಿ ವೈದ್ಯ ಮೈಲಾರಪ್ಪ ಸ್ಥಳಕ್ಕೆ ಭೇಟಿ ನೀಡಿ ಆರೋಪಿಸಿ ಆಗ್ರಹಿಸುತ್ತಿದ್ದ ಸಾರ್ವಜನಿಕರೊಡನೆ ಮಾತನಾಡಿ, ಘಟನೆ ಕುರಿತು ಸಿಬ್ಬಂದಿಯೊಂದಿಗೆ ಮಾಹಿತಿ ಪಡೆದಿದ್ದು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು, ಸಂಬಂಧಿಗಳಾದ ರಾಧಾ, ಭದ್ರಾವತಿಯ ನೇತ್ರಾ, ಕಾಂಗ್ರೆಸ್ ಎಸ್ಟಿಮೋರ್ಚಾ ಮುಖಂಡ ವೀರೇಶ್, ಕೊಟ್ರೇಶ್ ಗ್ರಾಮಸ್ಥರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here