ಶಂಕಿತ ಉಗ್ರ ಮಾಜ್ ತಂದೆ ಹೃದಯಾಘಾತದಿಂದ ಸಾವು !

0
527

ಶಿವಮೊಗ್ಗ: ನಿಷೇಧಿತ ಭಯೋತ್ಪಾದನೆ ಸಂಘಟನೆ ಐಸಿಸ್‌ ಜೊತೆ ನಂಟು ಶಂಕೆ ಮೇಲೆ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿರುವ ಆರೋಪಿಗಳಲ್ಲಿ ಒಬ್ಬನಾದ ಮಾಜ್ ತಂದೆ ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಉಗ್ರ ಸಂಘಟನೆಗೆ ನಂಟಿರುವ ಆರೋಪದ ಹಿನ್ನಲೆ ಮಾಜ್ ಬಂಧನವಾಗುತ್ತಿದ್ದಂತೆ, ಆತನ ತಂದೆ ಮುನೀರ್ ಅಹಮ್ಮದ್‌ (57) ಮಾನಸಿಕವಾಗಿ ಕುಗ್ಗಿದ್ದರು. ಇದೇ ನೋವಿನಲ್ಲಿ ಹೃದಯಾಘಾತ ಸಂಭವಿಸಿ ಮಂಗಳೂರಿನ ಫಾದರ್ ಮುಲ್ಲರ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಮಂಗಳವಾರ ತೀರ್ಥಹಳ್ಳಿ ತಾಲೂಕು ಸೊಪ್ಪುಗುಡ್ಡೆಯ ಶಂಕಿತ ಉಗ್ರ ಶಾರೀಕ್‌ನ ಸಹಚರರಾದ ಮಂಗಳೂರಿನ ಮಾಜ್ ಮುನೀರ್ ಅಹಮದ್ (22) ಮತ್ತು ಶಿವಮೊಗ್ಗ ಸಿದ್ದೇಶ್ವರ ನಗರದ ಸಯ್ಯದ್ ಯಾಸಿನ್ ಅಲಿಯಾಸ್ ಬೈಲ್ (21) ಎಂಬುವವರನ್ನು ಪೊಲೀಸರು ಬಂಧಿಸಿದ್ದರು.

ಮಾಜ್ ಮುನೀರ್‌ ಎಂಟೆಕ್‌ ಪದವೀಧರನಾಗಿದ್ದು, ಶಿವಮೊಗ್ಗದಲ್ಲಿ ವಾಸವಾಗಿದ್ದನು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಯಾಸಿನ್‌ ಮತ್ತು ಮಾಜ್‌ರನ್ನು ಈಗಾಗಲೇ ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ ಇವರಿಬ್ಬರ ಕಿಂಗ್ ಪಿನ್‌ ಮಹಮ್ಮದ್ ಶಾರಿಕ್ ತಲೆಮರಿಸಿಕೊಂಡಿದ್ದಾನೆ.

ಮಾಜ್‌ ಮುನೀರ್‌ ತಂದೆ ಮೂಲತಃ ತೀರ್ಥಹಳ್ಳಿಯವರಾಗಿದ್ದು, ಕಳೆದ ಐದು ವರ್ಷಗಳಿಂದ ಮಂಗಳೂರಿನಲ್ಲಿ ವಾಸವಾಗಿದ್ದರೆಂದು ತಿಳಿದುಬಂದಿದೆ. ಮುನೀರ್ ಅಹಮದ್ ತಂದೆ ತೀರ್ಥಹಳ್ಳಿ ಪಟ್ಟಣ ಪಂಚಾಯತಿ ಸದಸ್ಯರಾಗಿದ್ದರು. ತೀರ್ಥಹಳ್ಳಿಯಲ್ಲಿ ಹೋಲ್ ಸೇಲ್ ಮೀನು ವ್ಯಾಪಾರಿಯಾಗಿದ್ದರು.

ಇನ್ನು ಮಾಜ್ ತಂದೆ ಸಾವಿನ ಹಿನ್ನಲೆ ಪೊಲೀಸರು ಮಾಜ್‌ನನ್ನು ಕೋರ್ಟ್‌ಗೆ ಹಾಜರು ಪಡಿಸಿ ಅಂತಿಮ ದರ್ಶನಕ್ಕೆ ಕರೆದೊಯ್ಯವ ಸಾಧ್ಯತೆ ಇದೆ.

ಜಾಹಿರಾತು

LEAVE A REPLY

Please enter your comment!
Please enter your name here