24.3 C
Shimoga
Friday, December 9, 2022

ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಶೀಘ್ರ ಪರಿಹಾರ ; ಬಿ.ಎಸ್ ಯಡಿಯೂರಪ್ಪ

ಶಿವಮೊಗ್ಗ : ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ 15-20 ದಿನಗಳಲ್ಲಿ ಪರಿಹರಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಜಿಲ್ಲಾ ಬಿಜೆಪಿ ವತಿಯಿಂದ ಈಡಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಶರಾವತಿ ಮುಳುಗಡೆ ಸಂತ್ರಸ್ತರ ಸಭೆಯಲ್ಲಿ ಮಾತನಾಡಿದರು.

ಅಧಿಕಾರದಲ್ಲಿದ್ದಾಗ ಯಾವುದೇ ಕಾಳಜಿ ವಹಿಸದೆ ಈಗ ಪಾದಯಾತ್ರೆಯಂತಹ ರಾಜಕೀಯ ಗಿಮಿಕ್ ಮಾಡಬೇಡಿ. ಇದೇ ತಿಂಗಳ 27 ರಂದು ಸಿಎಂ ತೀರ್ಥಹಳ್ಳಿಗೆ ಬರಲಿದ್ದಾರೆ. ಅವರ ಮುಖಾಂತರವೇ ಪರಿಹರಿಸಲಾಗುತ್ತದೆ. ಅಗತ್ಯವಿದ್ದರೆ ಮತ್ತೊಮ್ಮೆ ದೆಹಲಿಗೆ ಹೋಗಲಾಗುತ್ತದೆ ಎಂದರು.

ಮಾಜಿ ಶಾಸಕ ಬಿ.ಸ್ವಾಮಿರಾವ್ ಮಾತನಾಡಿ, ಶರಾವತಿ ಸಂತ್ರಸ್ತರ ಸಮಸ್ಯೆ ದಶಕಗಳಿಂದ ಇದ್ದು, ಇದರ ನಿವಾರಣೆಗೆ ಜಿಲ್ಲಾಧಿಕಾರಿ ಮಟ್ಟದ  ವಿಶೇಷ ಸಮಿತಿ‌ ನೇಮಕ ಮಾಡಬೇಕಿದೆ. ಅವರಿಗೆ ವಿಶೇಷವಾದ ಅಧಿಕಾರ ನೀಡಬೇಕಿದೆ ಎಂದು‌  ಹೇಳಿದರು.

ನೇಮಕವಾದ ಅಧಿಕಾರಿಗೆ ವಿಶೇಷ ಅಧಿಕಾರ ನೀಡಬೇಕು. ಸುಪ್ರೀಂಕೋರ್ಟ್ ಆದೇಶಗಳನ್ನು ನಿಭಾಯಿಸುವ ಅಧಿಕಾರ ನೀಡಬೇಕು. ಅವರಿಗೆ ಬೇಕಾದ ಸೌಲಭ್ಯ ನೀಡುವಂತೆ ಸಲಹೆ ನೀಡಿದರು.

ಈಗಿರುವ ತಹಶೀಲ್ದಾರ್, ಕಂದಾಯ ಆಧಿಕಾರಿಗಳು ಸಮಸ್ಯೆ ಬಗೆಹರಿಸುವುದಿಲ್ಲ. ಕಸ್ತೂರಿ ರಂಗನ್ ವರದಿಗೆ ಹೆದರಿ ಅಧಿಕಾರಿಗಳು ಯಾವುದೇ ದಾಖಲೆ ನೀಡುತ್ತಿಲ್ಲ ಎಂದರು.

ನನ್ನ ಅಧಿಕಾರಾವಧಿಯಲ್ಲಿ 9 ಸಾವಿರ ಹಕ್ಕು ಪತ್ರ ನೀಡಲಾಗಿತ್ತು. ಹಾಯ್ ಹೊಳೆಯಲ್ಲಿ 2 ಸಾವಿರ ಎಕರೆ ಜಮೀನಿ 1961ರಲ್ಲಿ ನೀಡಲಾಗಿತ್ತು. ಅಲ್ಲಿಗೆ ಸಂತ್ರಸ್ತರು ಹೋಗಲಿಲ್ಲ.  ಬಳಿಕ ಚಕ್ರಾ ವರಾಹಿಯವರಿಗೆ ಪುನಃ ನೀಡಲಾಗಿತ್ತು. ಈ ಜಮೀನು ಇಂದು ಯಾರದ್ದೋ ಪಾಲಾಗಿದೆ. ಒಕ್ಕಲಿಗಗ, ಈಡಿಗ ಸಂಘದವರಿಗೆ ಮಂಜೂರು ಮಾಡಲಾಗಿದೆ. ಈಗ ಈಡಿಗರ ಸಂಘದವರು ಕೂಡ ಅರ್ಜಿ ಹಾಕಿದಾರೆ. ಅದು ತಪ್ಪಲ್ಲ. ಆದರೆ ನಿಜವಾಗಿಯೂ ದಾಖಲೆ ಮಾಡಿ ಕೊಟ್ಟಿಲ್ಲ ಎಂದರು.

ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಕಾಗೋಡು ತಿಮ್ಮಪ್ಪನವರು 1962 ರಲ್ಲಿಯೇ ರಾಜಕೀಯಕ್ಕೆ ಬಂದಿದ್ದರು. ಆಗಿನಿಂದ ಕಾಗೋಡು ಬೇರೆ ಬೇರೆ ಸಚಿವ ಸ್ಥಾನದಲ್ಲಿ ಇದ್ದರು. ಆಗಿನಿಂದ ಈಗಿನವರೆಗೆ ಸಮಸ್ಯೆ ಬಗೆಹರಿಸಲಿಲ್ಲ. ಈಗ ಈ ಎಲ್ಲಾ ಸಮಸ್ಯೆಗೆ ಹಾಲಪ್ಪ, ಜ್ಞಾನೇಂದ್ರ, ಯಡಿಯೂರಪ್ಪ ರಾಘವೇಂದ್ರ ಕಾರಣವೆಂದು ಹೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗ ಮುಖ್ಯಮಂತ್ರಿಯವರನ್ನು ಕರೆಸಿ ಅವರ ಗಮನ ಸೆಳೆಯಬೇಕಿದೆ. ಸಮಸ್ಯೆಯನ್ನು ದೆಹಲಿ ಮಟ್ಟಕ್ಕೆ ತೆಗೆದುಕೊಂಡು ಹೋಗಲಾಗಿದೆ. ಈ ಹಂತದಲ್ಲಿ ನಮ್ಮ ಮೇಲೆ ಆರೋಪಿಸಲಾಗುತ್ತಿದೆ. 60 ವರ್ಷದಿಂದ ಇರುವ ಸಮಸ್ಯೆ ಪರಿಹರಿಸಿಲ್ಲ. ಈಗ ಯಡಿಯೂರಪ್ಪನವರ ನೇತೃತ್ವದಲ್ಲಿ ಪರಿಹರಿಸಬೇಕಿದೆ ಎಂದರು.

24,757ಎಕರೆ ಜಮೀನು ಮೂರು ಅಣೆಕಟ್ಟುಗಳಿಂದ ಕಳೆದುಕೊಂಡಿದ್ದೇವೆ. ಈಗ ಸ್ವಾಧೀನದಲ್ಲಿರುವ ಜಮೀನಿಗೆ ದಾಖಲೆಗಳು ಇಲ್ಲ. ಆ ದಾಖಲೆಗಳನ್ನು ಪಡೆಯುವ ಕೆಲಸ ಆಗಬೇಕಿದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, 1980 ರ ಅರಣ್ಯ ಕಾಯ್ದೆ ಬರುವುದಕ್ಕಿಂತ ಮೊದಲು ಸಂತ್ರಸ್ತರ ಸಮಸ್ಯೆ ಪರಿಹರಿಸಲು ಅವಕಾಶ ಇತ್ತು. ಆದರೆ ಮಾಡಿಲ್ಲ. ಪುನರ್ವಸತಿಗಾಗಿ ಈಗ ಕೆಲಸ ಮಾಡಿದರೆ ಕೇಂದ್ರದ ಪೂರ್ವಾನುಮತಿ ಬೇಕಿದೆ. ಚುನಾವಣಾ ಉದ್ದೇಶಕ್ಕೆ ಡಿನೋಟಿಫಿಕೇಶನ್ ಮಾಡಿದ್ದರಿಂದಾಗಿ ಇಷ್ಟೆಲ್ಲಾ ಸಮಸ್ಯೆ ಆಗಿದೆ ಎಂದರು.

ಕೇಂದ್ರ ಅರಣ್ಯ ಸಚಿವರನ್ನು ಯಡಿಯೂರಪ್ಪ ನೇತೃತ್ವದಲ್ಲಿ ನಿಯೋಗ ಭೇಟಿ ಮಾಡಿದ್ದು, ಪ್ರಸ್ತಾವನೆ ಕಳಿಸಿದರೆ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ಮುಂದಿನ 15-20 ದಿನದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಗ್ರ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳಿಸಲಾಗುತ್ತದೆ ಎಂದರು.

ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಕೇಂದ್ರ ಅರಣ್ಯ ಸಚಿವರು ಖಡಕ್. ಹೀಗಾಗಿ ನಮ್ಮ ಮನವಿಗೆ ಒಪ್ಪುವುದಿಲ್ಲ ಎಂದು ಭಾವಿಸಿದ್ದೆವು. ಆದರೆ ಅವರು ಧನಾತ್ಮಕ ಭರವಸೆ ನೀಡಿದ್ದಾರೆ. ಹೀಗಾಗಿ ಶೀಘ್ರದಲ್ಲಿ ಸಂತ್ರಸ್ತರ ಸಮಸ್ಯೆ ಪರಿಹಾರವಾಗುವ ನಂಬಿಕೆ ಇದೆ ಎಂದರು.

ಸುದೀರ್ಘ ಅಧಿಕಾರ ನಡೆಸಿಕೊಂಡು ಬಂದವರು ಇಲ್ಲಿಯವರೆಗೂ ಸಮಸ್ಯೆ ಪರಿಹಾರ ಮಾಡಿಲ್ಲ. ಈಗ ಪರಿಹಾರ ಮಾಡಲು ಪಾದಯಾತ್ರೆ ಯಾವ ಉದ್ದೇಶಕ್ಕೆ ಮಾಡುತ್ತಿದ್ದೀರಿ.  ನಿಮ್ಮ ಜೀವನದಲ್ಲಿ ಈ ಸಮಸ್ಯೆ ಪರಿಹರಿಸಲು ಆಗಿಲ್ಲ. ಈಗ ನಾವು ಪರಿಹರಿಸುತ್ತೇವೆ. ಶುಗರ್ ಕಡಿಮೆ ಮಾಡಿಕೊಳ್ಳಲು ಪಾದಯಾತ್ರೆ ಮಾಡಿ. ಸಮಸ್ಯೆ ಪರಿಹರಿಸುವ ಸಲುವಾಗಿ ರಾಜಕೀಯ ಗಿಮಿಕ್ ಮಾಡಬೇಡಿ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಅಶೋಕನಾಯ್ಕ, ಪ್ರಮುಖರಾದ ಬೆಳ್ಳೂರು ತಿಮ್ಮಪ್ಪ, ಗುರುಮೂರ್ತಿ, ರತ್ನಾಕರ, ಬೇಗುವಳ್ಳಿ ಸತೀಶ್, ಕಾಳನಾಯ್ಕ, ಸೂಡೂರು ಸುಧಾಕರ, ಸಾಲೆಕೊಪ್ಪ ರಾಮಚಂದ್ರ ಮತ್ತಿತರರು ಇದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!