ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಭೂಮಿ‌ ಹಕ್ಕು ನೀಡುವಂತೆ ಆಗ್ರಹಿಸಿ ಮಾ. 29‌ರಂದು ಬೃಹತ್ ಪ್ರತಿಭಟನಾ ಮೆರವಣಿಗೆ‌

0
231

ಶಿವಮೊಗ್ಗ:‌ ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಭೂಮಿ‌ ಹಕ್ಕು ನೀಡುವಂತೆ ಆಗ್ರಹಿಸಿ ಮಾರ್ಚ್ 29‌ರಂದು ಬೃಹತ್ ಪ್ರತಿಭಟನಾ ಮೆರವಣಿಗೆ‌ ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ‌ ಶರಾವತಿ ಹಿನ್ನೀರಿನ ಮುಳುಗಡೆ ರೈತರ ಸಂಘದ(ರಿ) ಅಧ್ಯಕ್ಷ ಹೂವಪ್ಪ ಕೂಡಿ‌ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ‌ ಅವರು, ನಾಡಿಗೆ ಬೆಳಕು ನೀಡಲು ಸಾಗರ ಹಾಗೂ ಹೊಸನಗರ ತಾಲೂಕಿನಲ್ಲಿ ಶರಾವತಿ‌ ಆಣೆಕಟ್ಟಿಗಾಗಿ ಭೂಮಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. 1959-62 ರಲ್ಲಿ ಭೂಮಿ ಬಿಡುಗಡೆಯಾದರೂ ಹಂಚಿಕೆ ಮಾಡದೆ ಭೂ ವಂಚಿತರನ್ನಾಗಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಮಾರ್ಚ್ 29 ರಂದು ನಗರದ ಆಲ್ಕೋಳ ವೃತ್ತದಿಂದ ಪ್ರಾರಂಭಗೊಂಡ ಬೃಹತ್ ಪ್ರತಿಭಟನೆ ಆಶೋಕ ವೃತ್ತ, ಅಮೀರ್ ಅಹ್ಮದ್‌ ವೃತ್ತ,ಗೋಪಿ ವೃತ್ತದ ಮೂಲಕ ಡಿಸಿ ಕಚೇರಿ ತಲುಪಲಿದೆ. ಬಳಿಕ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದರು.

ಮುಳುಗಡೆ ಪ್ರದೇಶದಲ್ಲಿ 58 ಸಾವಿರ ಎಕರೆ ಅರಣ್ಯ ಭೂಮಿಯಿದೆ. 30 ಸಾವಿರ ಕಂದಾಯ ಭೂಮಿ ಇದೆ. 27 ಸಾವಿರ ಗೇಣಿದಾರರಿದ್ದಾರೆ.‌ 6 ಸಾವಿರಕ್ಕೂ ಹೆಚ್ವು ಕುಟುಂಬಗಳಿವೆ. ಸರ್ಕಾರದ ಆದೇಶ 1962 ಪ್ರಕಾರ, ಶಿವಮೊಗ್ಗ ತಾಲೂಕಿನ ಆಗಸವಳ್ಳಿ ಗ್ರಾಮದ ಸರ್ವೆ ನಂ.167 ರಲ್ಲಿ ಹಾಗೂ ಶೆಟ್ಟಿಹಳ್ಳಿಯಲ್ಲಿ ಒಟ್ಟು 1200 ಎಕರೆ ಜಾಗವನ್ನು ಶರಾವತಿ‌ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿಗಾಗಿ‌ ಮೀಸಲಿಡಲಾಗಿದೆ. ಆದರೆ, ಆರು ದಶಕಗಳು ಕಳೆದರೂ ಸಂತ್ರಸ್ತರಿಗೆ ಭೂಮಿ ಹಂಚಿಕೆ ಮಾಡದೆ ಸರ್ಕಾರಗಳು ನಮಗೆ ವಂಚನೆ ಮಾಡಿವೆ ಎಂದು ದೂರಿದರು.

2009 ರಲ್ಲಿ ಸಂಘದ ಪರವಾಗಿ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ. ಶರಾವತಿ ಮುಳುಗಡೆ ಸಂತ್ರಸ್ತರ ಮನವಿ ಆಲಿಸಿದ ನ್ಯಾಯಾಲಯ 2014 ರಲ್ಲಿ 6 ತಿಂಗಳೊಳಗೆ ಅರ್ಜಿದಾರರ ಸಮಸ್ಯೆಯನ್ನು ಇತ್ಯರ್ಥ ಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ. ಆರು ತಿಂಗಳೊಳಗೆ ಇತ್ಯರ್ಥವಾಗದ ಕಾರಣ 2021 ರಲ್ಲಿ ಪುನಃ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ 4 ತಿಂಗಳೊಗೆ ಇತ್ಯರ್ಥಪಡಿಸುವಂತೆ ಜಿಲ್ಲಾಡಳಿತಕ್ಕೆ ಆದೇಶ ನೀಡಿತ್ತು. ನ್ಯಾಯಾಲಯದ ಆದೇಶ ಪಾಲನೆ ಮಾಡದ ಕಾರಣ 17/11/ 2021 ಹೈಕೋರ್ಟ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿ 2 ವಾರದೊಳಗೆ ವರದಿ ನೀಡಲು ಜಿಲ್ಲಾಡಳಿತಕ್ಕೆ ಅದೇಶಿಸಿತ್ತು ಎಂದರು.

ಈ ವಿಚಾರವು ಜಿಲ್ಲಾಡಳಿತದ ಹಂತದಲ್ಲಿದ್ದು, ಇತ್ಯರ್ಥವಾಗಬೇಕಿದೆ. ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಸರ್ಕಾರಗಳಿಗೆ ಇಚ್ಚಾಶಕ್ತಿಯ ಕೊರತೆ ಇದೆ. ಅಧಿಕಾರಿಗಳು ಯಾವುದೇ ರೀತಿಯ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಮುಳಗಡೆ ಸಂತ್ರಸ್ತರಿಗೆ ಭೂಮಿ ನೀಡಬೇಕು. ಜೊತೆಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದ ಅವರು, ತಕ್ಷಣವೇ ಶರಾವತಿ ಮುಳುಗಡೆ ಸಂತ್ರಸ್ಥರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ನಾಗರಾಜ್ ಎಂ.ಡಿ.ಕೆ., ಆಶೋಕ್ ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here