ಹೊಸನಗರ : ದೀನದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪುರಸ್ಕಾರದಲ್ಲಿ ನಿರ್ಮಿತಿ ಕೇಂದ್ರ ನಿರ್ಮಿಸಿದ ತಾಲೂಕು ಪಂಚಾಯಿತಿ ಕಚೇರಿ ಹೆಚ್ಚುವರಿ ಕೊಠಡಿಗಳು ಹಾಗೂ ಗ್ರಾಮ ಪಂಚಾಯತಿಗಳಿಗೆ ಸ್ವಚ್ಛತಾ ಅಭಿಯಾನ ಕಾರ್ಯ ಉನ್ನತೀಕರಿಸಲು ನೀಡಿದ ಸ್ವಚ್ಛತಾ ವಾಹನಗಳನ್ನು ಇಂದು ಶಾಸಕರು ಮತ್ತು ಎಂಎಸ್ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪನವರು ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು.
ಕಚೇರಿ ಅಧಿಕಾರ ವರ್ಗದವರು ಸಾಮರ್ಥ್ಯ ಹೆಚ್ಚಿಸುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕೆಂದು ಕರೆ ನೀಡಿ, ಸ್ವಚ್ಛತಾ ಅಭಿಯಾನ ಒಂದು ಸವಾಲಿನ ಕಾರ್ಯವಾಗಿದೆ. ಇದೀಗ ಪ್ರತಿ ಪಂಚಾಯಿತಿಗೆ ಸ್ವಚ್ಛತಾ ವಾಹನ ಸೌಲಭ್ಯ ದೊರಕುವುದರಿಂದ ಗ್ರಾಮ ಮಟ್ಟದಿಂದಲೂ ಸ್ವಚ್ಛತೆಗೆ ಆದ್ಯತೆ ನೀಡಬಹುದಾಗಿದೆ ಎಂದರು.
ಗ್ರಾಮೀಣ ಮಟ್ಟದಲ್ಲಿ ಜನರ ಸಂಪರ್ಕ ಸಾಧನ ಉತ್ತಮಗೊಳಿಸಲು ಕಿರು ಸೇತುವೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಉತ್ತಮ ಕುಡಿಯುವ ನೀರಿನ ಸೌಲಭ್ಯವನ್ನು ಗುಣಮಟ್ಟದ ವಿದ್ಯುತ್ತನ್ನು ಒದಗಿಸುವ ಬಗ್ಗೆ ಕ್ರಮ ಕೈಗೊಂಡಿದ್ದು, ಅಕ್ರಮ ವಿದ್ಯುತ್ ಸಂಪರ್ಕ ದಾರರು ಪ್ರಾಮಾಣಿಕವಾಗಿ ವಿದ್ಯುತ್ ಸಂಪರ್ಕ ಪಡೆಯಬೇಕೆಂದು ಶಾಸಕರು ಈ ಸಂದರ್ಭದಲ್ಲಿ ಸಲಹೆ ನೀಡಿದರು.
ಅಭಿವೃದ್ಧಿ ಕಾಮಗಾರಿಗಳಿಗೆ ಮರಳು ಹಾಗೂ ಜಲ್ಲಿ ಸಮಸ್ಯೆ ತಲೆದೋರಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದ ಅವರು, ಅಭಿವೃದ್ಧಿ ನಿಟ್ಟಿನಲ್ಲಿ ಎಲ್ಲರೂ ಪಕ್ಷಾತೀತವಾಗಿ ಕೈ ಜೋಡಿಸಿದಾಗ ಮಾತ್ರ ಪ್ರಗತಿ ಕಾಣಲು ಸಾಧ್ಯ. ಆದ್ದರಿಂದ ಎಲ್ಲರೂ ಅಭಿವೃದ್ಧಿಗೆ ಕೈಜೋಡಿಸಬೇಕೆಂದರು.
ತಾಲೂಕು ಪಂಚಾಯತ್ ಅಧ್ಯಕ್ಷ ವೀರೇಶ್ ಆಲವಳ್ಳಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಸ್ವಾಮಿರಾವ್, ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಶೀಲಮ್ಮ ರಘುಪತಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ, ಸದಸ್ಯರಾದ ಶ್ರೀಮತಿ ಶೋಭಾ ಮಂಜುನಾಥಗೌಡ, ಶಕುಂತಲಾ ರಾಮಚಂದ್ರ, ಎರಗಿ ಉಮೇಶ್, ವಾಸಪ್ಪಗೌಡ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ನಿರ್ದೇಶಕ ಎನ್.ಆರ್. ದೇವಾನಂದ್ ತಾಪಂ ಸದಸ್ಯೆ ಶ್ರೀಮತಿ ರುಕ್ಮಿಣಿ ರಾಜು, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ತಹಶಿಲ್ದಾರ್ ವಿ.ಎಸ್ ರಾಜೀವ್, ವಿವಿಧ ಗ್ರಾಮ ಪಂಚಾಯತಿಗಳ ಪಿಡಿಒಗಳು ಅಧ್ಯಕ್ಷ-ಉಪಾಧ್ಯಕ್ಷ ಸದಸ್ಯರುಗಳು ವಿವಿಧ ಇಲಾಖಾಧಿಕಾರಿಗಳು ಪಾಲ್ಗೊಂಡಿದ್ದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ.ಆರ್ ಪ್ರವೀಣ್ ಸ್ವಾಗತಿಸಿದರು. ಗುರುಮೂರ್ತಿ ಕಾರ್ಯಕ್ರಮ ನಿರೂಪಿಸಿದರು.