ರಿಪ್ಪನ್ಪೇಟೆ : ಸಾಗರ, ಹೊಸನಗರ ಕ್ಷೇತ್ರದ ವಿಧಾನಸಭಾ ಸದಸ್ಯ ಹಾಗೂ ಎಂಎಸ್ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಇಂದು ರಿಪ್ಪನ್ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಹಾಗೂ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆರೆಹಳ್ಳಿ ಹೋಬಳಿಯಲ್ಲಿ ಈಗಾಗಲೇ 200 ಕೋಟಿ ರೂ.ಗಳಿಗೂ ಅಧಿಕ ಅಭಿವೃದ್ಧಿ ಕಾಮಗಾರಿಗಳು ನೆರವೇರಿದ್ದು ಈಗಾಗಲೇ ಕೆಲವು ಕಾಮಗಾರಿಗಳು ಪೂರ್ಣಗೊಂಡಿದ್ದು ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ.
ರಿಪ್ಪನ್ಪೇಟೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಿಂದ ವಿನಾಯಕ ವೃತ್ತದವರೆಗೆ ದ್ವಿಪಥ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಸರ್ಕಾರದಿಂದ ಅನುಮೋದನೆ ದೊರೆತಿದ್ದು ಇನ್ನು ಕೆಲವೇ ದಿನಗಳಲ್ಲಿ ದ್ವಿಪಥ ರಸ್ತೆಯ ಕಾಮಗಾರಿಗೆ ಚಾಲನೆಯನ್ನು ನೀಡಲಾಗುವುದು. ಈಗಾಗಲೇ ಸಾಗರ ಹಾಗೂ ಹೊಸನಗರ ತಾಲೂಕುಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಗ್ರಾಮೀಣ ಪ್ರದೇಶದ ಜನರ ಮೂಲಭೂತ ಸೌಕರ್ಯಗಳಾದ ರಸ್ತೆ ಮತ್ತು ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ವರಾಹಿ ಡ್ಯಾಮ್ ನಿಂದ ರಿಪ್ಪನ್ಪೇಟೆ ಪಟ್ಟಣಕ್ಕೆ ಕುಡಿಯುವ ನೀರಿನ ಸೌಲಭ್ಯವನ್ನು ಏರ್ಪಡಿಸಲಾಗುವುದು. ರಿಪ್ಪನ್ಪೇಟೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಪರಿವರ್ತನೆ ಮಾಡಲು ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.
ಹುಂಚ – ಕೆರೆಹಳ್ಳಿ ಹೋಬಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಉಪಾಧ್ಯಕ್ಷೆ ಮಹಾಲಕ್ಷ್ಮಿ ಅಣ್ಣಪ್ಪ, ಸದಸ್ಯರಾದ ಸುಧೀಂದ್ರ ಪೂಜಾರಿ. ಡಿ. ಈ.ಮಧುಸೂದನ್, ಭೂ ನ್ಯಾಯ ಮಂಡಳಿ ಸದಸ್ಯರಾದ ಎ.ಟಿ ನಾಗರತ್ನ, ಮೆಣಸೆ ಆನಂದ, ಬಿಜೆಪಿ ಮುಖಂಡರುಗಳಾದ ಸುರೇಶ್ ಸಿಂಗ್, ನವಟೂರು ದೇವೇಂದ್ರಪ್ಪ ಗೌಡ, ಹೂವಪ್ಪ ಇನ್ನಿತರರಿದ್ದರು.
ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಹಾಗೂ ವೀಕ್ಷಣೆ:
ರಿಪ್ಪನ್ಪೇಟೆ ಗ್ರಾ.ಪಂ, ಕುಕ್ಕಳಲೆ ರಸ್ತೆಯಿಂದ ನಿಂಗಪ್ಪ ಪುರುಷೋತ್ತಮ ಮನೆಯವರೆಗಿನ ಎಸ್.ಸಿ ಕಾಲೋನಿ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ. ಬರುವೆ ಬಸ್ ನಿಲ್ದಾಣದಿಂದ ಚಿಪ್ಪಿಗನ ಕೆರೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ, ರಿಪ್ಪನ್ಪೇಟೆ, ತೀರ್ಥಹಳ್ಳಿ ಮುಖ್ಯರಸ್ತೆಯ ಆನಂದ್ ಮೆಣಸೆ ಮನೆಯಿಂದ ಗವಟೂರು ಗ್ರಾಮದ ಬೆಟ್ಟಿನಕೆರೆ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಪೂಜೆ, ಬರುವೆ ಗ್ರಾಮದ ಚೌಡೇಶ್ವರಿ ಬೀದಿಯ ಕೇಶವ ಮನೆಯ ಎದುರಿನ ಎಸ್.ಸಿ ಗುರುಶಾಂತಪ್ಪನವರ ಮನೆಯವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ, ರಿಪ್ಪನ್ಪೇಟೆ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ವೀಕ್ಷಣೆ, ರಿಪ್ಪನ್ಪೇಟೆ, ತಿಲಕ್ ನಗರ ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ, ರಿಪ್ಪನ್ಪೇಟೆ ಸಂತೆ ಮಾರ್ಕೆಟ್ ನಿಂದ ಬಸವೇಶ್ವರ ಶಾಲೆಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ ಪೂಜೆ ಹಾಗೂ ವಿನಾಯಕ ನಗರ ದೇವದಾಸ್ ಮನೆಯಿಂದ ಸುರೇಶ್ ಶಾರದಮ್ಮ ಮನೆಯವರಿಗೆ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ, ಬಾಳೂರು ಗ್ರಾ.ಪಂ, ಪೂಜಾರಿದಿಂಬದಿಂದ ಗವಟೂರು ವರೆಗಿನ PMGSY ರಸ್ತೆ ನಿರ್ಮಾಣ ಕಾಮಗಾರಿ ವೀಕ್ಷಣೆ, ಬಾಳೂರು ಗ್ರಾ.ಪಂ, ಈಚಲಕೊಪ್ಪ ಎಸ್.ಸಿ ಪುಟ್ಟಮ್ಮ ಮನೆಯಿಂದ ಎಸ್.ಸಿ ದಾನೇಶ್ ಮನೆಯವರೆಗಿನ ಎಸ್.ಸಿ ಕಾಲೋನಿ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ, ಬಾಳೂರು ಗ್ರಾ.ಪಂ, ಮಾವಿನಸರ ಸಾರ್ವಜನಿಕ ಸಮುದಾಯ ಭವನ ಕಾಮಗಾರಿ ವೀಕ್ಷಣೆ, ರಿಪ್ಪನ್ಪೇಟೆ ಗ್ರಾ.ಪಂ ಕಸ ವಿಲೇವಾರಿ ಘಟಕ ಉದ್ಘಾಟನೆ, ಗವಟೂರು ಊರೊಳಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ, ಅರಸಾಳು ಗ್ರಾ.ಪಂ ಬಸವಾಪುರ ಗ್ರಾಮದ ಗುಂಡ್ರೂಮೂಲೆ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿದರು.