ಶಿಕಾರಿಗೆ ಹೋದಾಗ ಗುಂಡೇಟು ತಗುಲಿ ಕಾಂತರಾಜ್ ಸಾವು ಪ್ರಕರಣ ; ತೀರ್ಥಹಳ್ಳಿ ಠಾಣೆಯಲ್ಲಿ FIR ದಾಖಲು

0
1365

ತೀರ್ಥಹಳ್ಳಿ: ಶಿರಿಗಾರುವಿನಿಂದ ಹೊಸಕೇರಿ ಮತ್ತು ಅತ್ತಿಗಾರುವಿಗೆ ಹೋಗುವ ರಸ್ತೆಯ ಪಕ್ಕದಲ್ಲಿ ಗುಂಡೇಟು ತಗುಲಿ ನೊಣಬೂರು ಗ್ರಾಪಂ ಮಾಜಿ ಅಧ್ಯಕ್ಷ ಮೇಲಿನಕೊಪ್ಪ ವಾಸಿ ಕಾಂತರಾಜ್ ಎಂ.ಎಸ್. (40) ಶನಿವಾರ ಸಾವನ್ನಪ್ಪಿದ ಪ್ರಕರಣ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾಂತರಾಜ್ ದೊಡ್ಡಪ್ಪನ ಮಗ ಗಣೇಶ್ ಎಂ.ಜೆ ದೂರು ನೀಡಿದ್ದು ಈ ಸಂಬಂಧ ಎಫ್ಐಆರ್ ದಾಖಲಾಗಿದೆ.

ಎಫ್ಐಆರ್’ನಲ್ಲಿ ಏನಿದೆ ?

ಕಾಂತರಾಜ್ ರವರು 1-15 ರವರೆಗೆ ಮನೆಯಲ್ಲಿ ಇದ್ದು ನಂತರ ಮನೆಯಿಂದ ಎಲ್ಲಿಗೊ ಹೋಗಿದ್ದು ನಂತರ ಸುಮಾರು ಮಧ್ಯಾಹ್ನ 2-35ರ ಸಮಯದಲ್ಲಿ ಸೋಮಶೇಖರ್ ಚಂದವಳ್ಳಿಯವರು ಫೋನ್ ಮಾಡಿ ಕಾಂತರಾಜ್ ನಿಗೆ ಏನೋ ಸಿರಿಯಸ್ಸಾಗಿದೆ ನೀವು ಕೂಡಲೇ ಬನ್ನಿ ನಾನು ಬರುತ್ತೇನೆಂದು ತಿಳಿಸಿದರು. ನಾನು ಎಲ್ಲಿಗೆ ಬರಬೇಕೆಂದು ಕೇಳಿದಾಗ ತೀರ್ಥಹಳ್ಳಿಯ ಜೆಸಿ ಸರ್ಕಾರಿ ಆಸ್ಪತ್ರೆಗೆ ಬರಲು ತಿಳಿಸಿದ್ದರಿಂದ ನಾನು ಕೂಡಲೇ ತೀರ್ಥಹಳ್ಳಿ ಜೆ.ಸಿ ಆಸ್ಪತ್ರೆಗೆ ಬಂದು ನೋಡಿದಾಗ ಕಾಂತರಾಜ್ ಮೃತಪಟ್ಟಿರುವ ಬಗ್ಗೆ ತಿಳಿಯಿತು. ನಂತರ ವಿಚಾರ ಮಾಡಿದಾಗ ಶಿರಿಗಾರು ಗ್ರಾಮದ ಹೊಸಕೇರಿ ಮತ್ತು ಅತ್ತಿಗಾರು ಹೋಗುವ ಟಾರ್ ರಸ್ತೆಯ ಪಕ್ಕದಲ್ಲಿ ಗುಂಡೇಟು ತಗುಲಿದೆ ಎಂದು ತಿಳಿದುಬಂದಿದೆ. ಅಲ್ಲಿಂದ ಯಾವುದೋ ವಾಹನದಲ್ಲಿ ಮಂಜುನಾಥ ಅರಳಸುರಳಿರವರು ಕರೆದುಕೊಂಡು ಆಸ್ಪತ್ರೆಗೆ ಬಂದಿರುತ್ತಾರೆ. ಕಾಂತರಾಜ್ ನು ಆಸ್ಪತ್ರೆಗೆ ಬರುವ ಮೊದಲೇ ಮರಣ ಹೊಂದಿರುತ್ತಾರೆ. ಕಾಂತರಾಜ್ ನಿಗೆ ಯಾವ ಕಾರಣದಿಂದ ಗುಂಡೇಟು ತಗುಲಿದೆ ಎಂಬುದು, ಯಾರು ಗುಂಡು ಹಾರಿಸಿದರು ಎಂಬ ಬಗ್ಗೆ ನನಗೆ ಅನುಮಾನವಿರುತ್ತದೆ. ಆದ್ದರಿಂದ ಕಾಂತರಾಜನಿಗೆ ಗುಂಡೇಟು ಬಿದ್ದ ಬಗ್ಗೆ ಅನುಮಾನವಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮೃತನ ಸಹೋದರ ಗಣೇಶ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ತೀರ್ಥಹಳ್ಳಿ ಠಾಣೆಯಲ್ಲಿ ಕಲಂ 302 ಐಪಿಸಿ ಮತ್ತು ಕಲಂ 27(3) ARMS ACT-1959 ರೀತ್ಯಾ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ಜಾಹಿರಾತು

LEAVE A REPLY

Please enter your comment!
Please enter your name here