ಶಿಕಾರಿಪುರ; ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜನ್ಮದಿನಾಚರಣೆ

0
59

ಶಿಕಾರಿಪುರ: ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜನ್ಮದಿನಾಚರಣೆಯನ್ನು ತಾಲ್ಲೂಕು ದಂಡಾಧಿಕಾರಿ ಎಂ ಪಿ ಕವಿರಾಜ್ ರವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಕನ್ನಡ ನಾಡು ನುಡಿ ಸಂಸ್ಕೃತಿ ಉಳಿಸುವುದಕ್ಕಾಗಿ ಅಪಾರ ತ್ಯಾಗ ಮಾಡಿದ್ದಾರೆ. ಬ್ರಿಟಿಷ್ ಆಡಳಿತ ಅವಧಿಯಲ್ಲಿ ರಾಜ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬ್ರಿಟಿಷರ ವಿರುದ್ಧ ರಣಕಹಳೆಯೂದಿ ಕರ್ನಾಟಕ ರಾಜ್ಯವನ್ನು ಉಳಿಸುವ ಕಾರ್ಯ ಮಾಡಿದ್ದರು.

ಬ್ರಿಟಿಷರ ಕಾಲದಲ್ಲಿಯೇ ಅವರು ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದ ಅವರು, ರಾಜ್ಯದಲ್ಲಿ ನೀರು ಶೇಖರಣೆ ಮಾಡುವ ಸದುದ್ದೇಶದಿಂದ ಅನೇಕ ನದಿಗಳಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟು ಇಂದಿಗೂ ಸಹ ರೈತರಿಗೆ ಸಾರ್ವಜನಿಕರಿಗೆ ಅನುಕೂಲ ಆಗಲಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ರಾಜ್ಯದ ಅಭಿವೃದ್ಧಿಗೆ ಅವರದ್ದೇ ಆದ ಕೊಡುಗೆಯನ್ನು ನೀಡಿದ್ದರು. ಇಡೀ ಏಷ್ಯಾದಲ್ಲೇ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಅವರು ಮಾಡಿದರು. ಆರಂಭದಲ್ಲಿ ಕೋಲಾರ ಜಿಲ್ಲೆಗೆ ನಂತರ ಬೆಂಗಳೂರು ನಗರಕ್ಕೆ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ವಿದ್ಯುತ್ ಸರಬರಾಜು ಮಾಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ರವರಿಗೆ ಮಹಾತ್ಮ ಗಾಂಧೀಜಿ ರವರು ರಾಜಶ್ರೀ ಎಂದು ಕರೆಯುತ್ತಾರೆ. ಏಕೆಂದರೆ ಪ್ರಜೆಗಳ ಏಳಿಗೆಗೆ ಶ್ರಮಿಸಿದ ಮಹಾನ್ ಪುರುಷರಾಗಿದ್ದರು. ರಾಜರ ಆಳ್ವಿಕೆಯಿದ್ದರೂ ಪ್ರಜೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಅವರಿಂದ ಸಲಹೆಗಳನ್ನು ಪಡೆದು ಯೋಜನೆಗಳನ್ನು ರೂಪಿಸಿ ಅದನ್ನು ಜಾರಿಗೆ ತರುವ ಕೆಲಸ ಅವರು ಮಾಡುತ್ತಿದ್ದರು. ಮೈಸೂರಿನ ಕನ್ನಂಬಾಡಿ ಅಣೆಕಟ್ಟು ಕಟ್ಟುವ ಸಂದರ್ಭದಲ್ಲಿ ಹಣದ ಕೊರತೆ ಉಂಟಾದಾಗ ತಮ್ಮ ಆಸ್ಥಾನದಲ್ಲಿದ್ದ ಒಡವೆ ವೈಡುರ್ಯಗಳನ್ನು ಮಾರಾಟ ಮಾಡುವ ಮೂಲಕ ಅಣೆಕಟ್ಟಿನ ನಿರ್ಮಾಣ ಮಾಡಿರುತ್ತಾರೆ.

ಈಗಿನ ಮೀಸಲಾತಿ ಸೌಲಭ್ಯವನ್ನು ಆಗಿನ ಕಾಲದಲ್ಲಿಯೇ ಅವರು ಕಲ್ಪಿಸಿ ದೀನ ದಲಿತರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಆಗ ಸರ್ ಎಂ ವಿಶ್ವೇಶ್ವರಯ್ಯ ರವರು ಪ್ರತಿಭೆಗೆ ತಕ್ಕಂತೆ ಮಾನದಂಡವಾಗಬೇಕು, ಮೀಸಲಾತಿ ಮಾನದಂಡವಾಗಬಾರದು ಎಂದು ಅವರ ದಿವಾನರ ಹುದ್ದೆಗೆ ರಾಜೀನಾಮೆ ನೀಡುವುದಾಗಿ ತಿಳಿಸಿದಾಗ, ಒಡೆಯರ್ ರವರು ವಿಶ್ವೇಶ್ವರಯ್ಯ ರವರ ಮಾತಿಗೆ ಮನ್ನಣೆ ನೀಡದೆ ಅವರು ತೆಗೆದುಕೊಂಡ ನಿರ್ಧಾರದ ಪ್ರಕಾರ ಮೀಸಲಾತಿ ಕಲ್ಪಿಸುವ ಕೆಲಸ ಮಾಡುತ್ತಾರೆ. ಆಗ ಸಾಕಷ್ಟು ಜನ ತುಳಿತಕ್ಕೆ ಒಳಗಾದವರು ವಿದ್ಯಾಭ್ಯಾಸ ಮತ್ತು ನೌಕರಿಗಳನ್ನು ಹೊಂದುತ್ತಾರೆ. ಇದರಿಂದಾಗಿ ಸರ್ ಎಂ ವಿಶ್ವೇಶ್ವರಯ್ಯ ರವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಯಾವುದೇ ಸಮಯದಲ್ಲಿ ಯಾರಿಗೆ ಸಹೋಯ ಮಾಡಬೇಕು ಎಂಬುದು ಅವರ ಮನಸ್ಸಿಗೆ ಬಂದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಎಂತಹಾ ಕಷ್ಟಬಂದರೂ ಹಿಂದೆ ಸರಿಯುವ ಮನಸ್ಸನ್ನು ಹೊಂದಿರಲಿಲ್ಲ. ಹೀಗಿರುವಾಗ ಇಂತಹ ಮಹಾತ್ಮರ ಜಯಂತಿ ಆಚರಣೆಯು ಅರ್ಥಪೂರ್ಣವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕಿರಣ್ ಹತ್ರಿ, ಶಿರ‌ಸ್ಥೆದಾರ್ ಮಂಜಣ್ಣ, ರಾಜಪ್ಪ, ಸುಧೀರ್ ಸೇರಿದಂತೆ ಅನೇಕರು ಹಾಜರಿದ್ದರು

ಜಾಹಿರಾತು

LEAVE A REPLY

Please enter your comment!
Please enter your name here