ಶಿಕಾರಿಪುರ: ರಾಜೀನಾಮೆಯಿಂದ ತೆರವಾಗಿದ್ದ ಪುರಸಭೆಯ 3 ಸ್ಥಾನಗಳಿಗೆ ಇಂದು ಶಾಂತಿಯುತವಾಗಿ ನಡೆದ ಮತದಾನ

0
347

ಶಿಕಾರಿಪುರ: ಕಳೆದ ಬಾರಿ ಪುರಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ 12 ವಾರ್ಡಿನಲ್ಲಿ, ಬಿಜೆಪಿ 8 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದವು. ಬಿಜೆಪಿಯು ಪುರಸಭೆಯ ಅಧ್ಯಕ್ಷ ಗಾದಿಗೆಗೆ ಪಣತೊಟ್ಟು ಕಾಂಗ್ರೆಸ್ ಪಕ್ಷದ ಮೂರು ಅಭ್ಯರ್ಥಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪುರಸಭಾ ಸದಸ್ಯರಿಂದ ಅವರ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಾಗಿತ್ತು. ಈ ರಾಜೀನಾಮೆಯಿಂದ ತೆರವಾಗಿದ್ದ ಮೂರು ಸ್ಥಾನಗಳಿಗೆ ಇಂದು ನಡೆದ ಉಪಚುನಾವಣೆ ಶಾಂತಿಯುತವಾಗಿ ಮತದಾನ ನಡೆದಿದೆ.

ಎರಡನೇ ಹಂತದ ಕೊರೊನಾ ಭೀತಿಯ ನಡುವೆಯೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು, ಮಾಸ್ಕ್ ಧರಿಸುವುದರ ಮೂಲಕ ವಯೋವೃದ್ಧರು, ಅಂಗವಿಕಲರು ಸೇರಿದಂತೆ ಅನೇಕ ಮತದಾರರು ತಮ್ಮ ಹಕ್ಕನ್ನು ಚಲಾವಣೆ ಮಾಡಿದ್ದಾರೆ. ಮತ ಚಲಾಯಿಸುವ ಸ್ಥಳಗಳಲ್ಲಿ ಮತ ಚಲಾವಣೆಗೆ ಬಂದವರಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸ್ಯಾನಿಟೈಜರ್ ಹಾಕುತ್ತಾ, ಥರ್ಮಲ್ ಸ್ಕ್ಯಾನ್ ಮೂಲಕ ಪರೀಕ್ಷಿಸಿ ಮತ ಚಲಾಯಿಸುವ ಸ್ಥಳಗಳಿಗೆ ಕಳುಹಿಸುತ್ತಿರುವುದು ಸಾಮಾನ್ಯವಾಗಿತ್ತು.

ಸಾರ್ವತ್ರಿಕ ಚುನಾವಣೆಯಲ್ಲಿ ಪಟ್ಟಣದ ದೊಡ್ಡಪೇಟೆ 5ನೇ ವಾರ್ಡಿನಿಂದ ಜ್ಯೋತಿ ಸಿದ್ಧಲಿಂಗಯ್ಯ, ಜಯನಗರದ 9 ರಮೇಶ್ (ಗುಂಡ), ಆಶ್ರಯ ಬಡಾವಣೆಯ 20ನೇ ವಾರ್ಡಿನಿಂದ ಉಮಾವತಿ ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ಆಯ್ಕೆಯಾಗಿದ್ದರು. ಇವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಮತ್ತೆ ಚುನಾವಣೆ ನಡೆದಿದ್ದು, ಈ ಎಲ್ಲಾ ವಾರ್ಡ್ ಗಳಲ್ಲಿಯೂ ಕಳೆದ ಬಾರಿ ಗೆದ್ದು ಬಿಜೆಪಿಗೆ ಸೇರ್ಪಡೆಯಾಗಿರುವ ಅಭ್ಯರ್ಥಿಗಳಿಗೆ ಬಿಜೆಪಿ ಪಕ್ಷದಿಂದ ಮತ್ತೆ ಕಣಕ್ಕಿಳಿಸಲಾಗಿದ್ದು, ಕಾಂಗ್ರೆಸ್ ಪಕ್ಷದವರು ಜಯನಗರದ 9ನೇ ವಾರ್ಡಿನಲ್ಲಿ ವೀಣಾ ವಿಜಯಕುಮಾರ್, ಆಶ್ರಯ ಬಡಾವಣೆಯ 20ನೇ ವಾರ್ಡಿನಲ್ಲಿ ವಿಜಯಲಕ್ಷ್ಮೀ ಸುರೇಶ್ ಕಣದಲ್ಲಿದ್ದಾರೆ.

ಈ ಎರಡೂ ವಾರ್ಡ್ ಗಳಲ್ಲಿ ಪುನಃ ಅಧಿಕಾರ ಪಡೆಯಲು ಹವಣಿಸುತ್ತಿರುವ ಎಲ್ಲಾ ಲಕ್ಷಣಗಳು ಮೇಲ್ನೋಟಕ್ಕೆ ಕಂಡುಬರುತ್ತಿದೆಯಾದರೂ, ದೊಡ್ಡಪೇಟೆ 5ನೇ ವಾರ್ಡಿನಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯನ್ನಾಗಿ ಯಾರನ್ನು ಕಣಕ್ಕಿಳಿಸದೇ ಪಕ್ಷೇತರ ಅಭ್ಯರ್ಥಿಯಾದ ಶೈಲಾ ಯೋಗೀಶ್ ಮಡ್ಡಿಯವರಿಗೆ ಬಾಹ್ಯ ಬೆಂಬಲ ನೀಡಲಾಗಿದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.

ದೊಡ್ಡಪೇಟೆಯ 5 ನೇ ವಾರ್ಡಿನಲ್ಲಿ ಜ್ಯೋತಿ ಸಿದ್ಧಲಿಂಗಯ್ಯರವರು ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದರೆ, ಇವರ ಪ್ರತಿಸ್ಪರ್ಧಿಯಾಗಿ ಪಕ್ಷೇತರ ಅಭ್ಯರ್ಥಿಯಾಗಿ ಶೈಲಾ ಯೋಗೀಶ್ ಮಡ್ಡಿಯವರು ತೀವ್ರ ಪೈಪೋಟಿ ನೀಡಿದ್ದಾರೆ. ಜಯನಗರದ 9 ನೇ ವಾರ್ಡಿನಲ್ಲಿ ರಮೇಶ್ (ಗುಂಡ) ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದರೆ ಇವರ ಪ್ರತಿಸ್ಪರ್ಧಿಯಾಗಿ ಮಾಜಿ ಪುರಸಭಾ ಸದಸ್ಯರಾದ ವೀಣಾ ವಿಜಯಕುಮಾರ್ ಆಶ್ರಯ ಬಡಾವಣೆಯ 20ನೇ ವಾರ್ಡಿನಲ್ಲಿ ಬಿಜೆಪಿ ಪಕ್ಷದಿಂದ ಉಮಾಪತಿ ಕಣದಲ್ಲಿದ್ದರೆ, ಕಾಂಗ್ರೆಸ್ ಪಕ್ಷದಿಂದ ವಿಜಯಲಕ್ಷ್ಮಿ ಸುರೇಶ್ ರವರು ಕಣದಲ್ಲಿದ್ದು ತೀವ್ರ ಪೈಪೋಟಿ ನೀಡಿದ್ದಾರೆ.

ಒಟ್ಟಿನಲ್ಲಿ ಈ ಉಪಚುನಾವಣೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರಿಗೆ ಹಾಗೂ ಸಂಸದ ಬಿ ವೈ ರಾಘವೇಂದ್ರ ರವರಿಗೆ ಪ್ರತಿಷ್ಠಿತ ಚುನಾವಣೆಯಾಗಿದ್ದು, ಬಿಜೆಪಿಯು ಕಳೆದ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದನ್ನು ಸರಿದೂಗಿಸಲು ಹವಣಿಸುತ್ತಿರುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಕಾಂಗ್ರೆಸ್ ಪಕ್ಷದ ಮುಖಂಡರೂ ಕೂಡ ಇದಕ್ಕೆ ಹೊರತಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಜಯನಗರ ಹಾಗೂ ಆಶ್ರಯ ಬಡಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಹೆಚ್ಚಿನ ಆದ್ಯತೆ ನೀಡಿ ಎರಡೂ ಪಕ್ಷಗಳ ಕಾರ್ಯಕರ್ತರಿಂದ ಮತ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಒಟ್ಟಾರೆ ಈ ಎರಡೂ ಪಕ್ಷಗಳ ನಡುವೆ ನಡೆದ ಚುನಾವಣೆಯ ಫಲಿತಾಂಶವನ್ನು ಇದೇ ತಿಂಗಳ ದಿನಾಂಕ 31 ರವರೆಗೆ ಕಾಯಬೇಕು.

ಸೋಮವಾರದಂದು ನಡೆದ ಪುರಸಭಾ ಉಪ ಚುನಾವಣೆಯಲ್ಲಿ ಶೇಕಡಾ 70% ಮತ ಚಲಾವಣೆಯಾಗಿದೆ ಎನ್ನಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here