ಶಿಕ್ಷಕಿಗೆ ಚಿನ್ನದ ಉಂಗುರ ತೊಡಿಸಿ ಮನೆಮಗಳಂತೆ ಬೀಳ್ಕೊಟ್ಟ ಬುಲ್ಡೋಜರ್ ಗುಡ್ಡದ ಪೋಷಕರು

0
2702

ರಿಪ್ಪನ್‌ಪೇಟೆ : ತಮ್ಮ ಊರಿನ ಶಾಲೆಯಲ್ಲಿ ಕಳೆದ 12 ವರ್ಷಗಳಿಂದ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕಿಯನ್ನು ಮನೆಮಗಳಂತೆ ಪೋಷಕರು ಬೀಳ್ಕೊಟ್ಟರು.

ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬುಲ್ಡೋಜರ್ ಗುಡ್ಡದಲ್ಲಿ ನಡೆದ ಪ್ರೇಮಾಬಾಯಿ ಶಿಕ್ಷಕಿ ಇವರ ಗುರುವಂದನಾ ಹಾಗೂ ಮಕ್ಕಳ ಹಬ್ಬದ ಕಾರ್ಯಕ್ರಮದಲ್ಲಿ ಪ್ರೇಮಾ ಬಾಯಿರವನ್ನು ಬುಲ್ಡೋಜರ್ ಗುಡ್ಡದ ಪಾಲಕ ಪೋಷಕರು ಆರತಿ ಎತ್ತಿ, ಡೊಳ್ಳು, ಕುಂಭಗಳ ಮೂಲಕ ಶಾಲೆಗೆ ಮೆರವಣಿಗೆಯ ಮೂಲಕ ಕರೆತಂದು ಶಿಕ್ಷಕಿಗೆ ಚಿನ್ನದ ಉಂಗುರ ತೊಡಿಸಿ ಕಣ್ಣೀರಿನ ಮೂಲಕ ಬೀಳ್ಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರಾದ ಧರ್ಮಪ್ಪ ನವರು ಮಾತನಾಡಿ, ಶಾಲೆಗೆ ಪ್ರೇಮಾಬಾಯಿ ರವರ ಕಾಣಿಕೆ ಮಹತ್ವದ್ದಾಗಿದೆ ಎಂಬುದನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೋಡೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಜಯಪ್ರಕಾಶ್ ಶೆಟ್ಟಿ ಯವರು ಮಾತನಾಡಿ, ಶಿಕ್ಷಕರ ಸೇವೆಗೆ ಇರುವ ಮಹತ್ವ ಬೇರೆ ಯಾವ ಸೇವೆಗೂ ಇರುವುದಿಲ್ಲ ಎಂಬುದನ್ನು ಬುಲ್ಡೋಜರ್ ಗುಡ್ಡದ ಗ್ರಾಮಸ್ಥರು ತೋರಿಸಿಕೊಟ್ಟಿದ್ದಾರೆ. ಇಂಥ ಮಹತ್ವದ ಕಾರ್ಯ ಮಾಡುತ್ತಿರುವ ಎಲ್ಲ ಶಿಕ್ಷಕರಿಗೂ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.

ಮತ್ತೋರ್ವ ಅತಿಥಿ ಸರಕಾರಿ ನೌಕರ ಸಂಘದ ಕಾರ್ಯದರ್ಶಿ ಬಸವಣ್ಣಪ್ಪ ಮಾತನಾಡಿ, ಮಕ್ಕಳಿಗೆ ಸಂಸ್ಕಾರ ಕಲಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಅದೇ ರೀತಿ ಪಾಲಕರು ಕೂಡ ಮಕ್ಕಳ ಬಗ್ಗೆ ಜಾಗೃತರಾಗುವ ಕಾಲಘಟ್ಟ ಇದಾಗಿದೆ ಎಂಬುದನ್ನು ತಿಳಿಸಿದರು.

ಪದವೀಧರ ಶಿಕ್ಷಕ ಸಂಘದ ಅಧ್ಯಕ್ಷರಾದ ರವಿ ಮಾವಿನಸರ ರವರು ಮಾತನಾಡಿ, ಶಿಕ್ಷಕ ವೃತ್ತಿ ಪಾವಿತ್ರ್ಯತೆಯನ್ನು ಉಳಿಸಿಕೊಂಡಿದೆ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ ಎಂಬುದನ್ನು ತಿಳಿಸಿದರು.

ಗ್ರಾಮ ಪಂಚಾಯತಿ ಸದಸ್ಯ ಯೋಗೇಂದ್ರಪ್ಪ ಮಾತನಾಡಿ, ಶಿಕ್ಷಕಿಯ ಸೇವೆ ಅಗಾಧವಾಗಿ ಹೊರಹೊಮ್ಮಿದೆ. ಪ್ರೇಮಾಬಾಯಿ ಅವರು ಶಾಲೆಗೆ ಅಗಾಧವಾಗಿರುವ ಸೇವೆಯನ್ನು ಸಲ್ಲಿಸಿರುವ ಬಗ್ಗೆ ಸ್ಮರಿಸಿದರು.

ನಂತರ ಬೀಳ್ಕೊಡುಗೆ ಕಾರ್ಯಕ್ರಮದ ಕೇಂದ್ರ ಬಿಂದುಗಳಾದ ಪ್ರೇಮಾಬಾಯಿ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಅನಿವಾರ್ಯ ಕಾರಣಗಳಿಂದ ವರ್ಗಾವಣೆ ತೆಗೆದುಕೊಳ್ಳುವಂತಾಯಿತು. ಇಲ್ಲಿನ ಜನರ ಪ್ರೀತಿ ಸಹಕಾರ ಎಂದಿಗೂ ಮರೆಯಲು ಸಾಧ್ಯವಿಲ್ಲ. ಹನ್ನೆರಡು ವರ್ಷದ ಸೇವೆಯಲ್ಲಿನ ಕಷ್ಟ ಸುಖಗಳನ್ನು ಎಳೆಎಳೆಯಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲಕ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ನಂತರ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ಕೃಷಿ ಪತ್ತಿನ ಸಹಕಾರ ಸಂಘ ಕೋಡೂರು ಉಪಾಧ್ಯಕ್ಷರಾದ ಸುಬ್ಬಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿಗಳಾದ ನಾಗರಾಜಪ್ಪ ಬಿ, ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ, ಸವಿತಾ, ಬಿಸಿಯೂಟದ ಪಾರ್ವತಮ್ಮ, ಯಳಗಲ್ಲು ಶಾಲೆಯ ಶಿಕ್ಷಕ ರಾಜು ಬಿ ಎಸ್, ಎಸ್ ಡಿಎಂಸಿ ಉಪಾಧ್ಯಕ್ಷೆ ಭಾರತಿ ಮಂಜುನಾಥ್, ಶಿಕ್ಷಕರಾದ ಗಾಯತ್ರಿ, ಗೌರಮ್ಮ, ಪ್ರದೀಪ್, ಹನುಮಂತಪ್ಪ ಉಪಸ್ಥಿತರಿದ್ದರು.

ಶಾಲೆಯ ಮುಖ್ಯ ಶಿಕ್ಷಕ ಸಂತೋಷ್ ಸ್ವಾಗತಿಸಿದರು.

ಎಸ್ ಡಿಎಂಸಿ ಸದಸ್ಯ ಮಂಡಾನಿ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಸುರ್ಜಿತ್ ಕುಮಾರ್ ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here