ಶಿಕ್ಷಣದೊಂದಿಗೆ ಕಲೆ ಬೆರೆತರೆ ಸನಾತನ ಸಂಸ್ಕೃತಿ ಉಳಿಯುತ್ತದೆ ; ಮಂಜುನಾಥ್ ಹೆಗ್ಡೆ

0
252

ಹೊಸನಗರ : ನಮ್ಮ ಮಕ್ಕಳಿಗೆ ಶಿಕ್ಷಣದೊಂದಿಗೆ ಭಾರತೀಯ ಕಲೆಯನ್ನು ಕಲಿಸಿದಾಗ ಮಾತ್ರ ಸನಾತನ ಸಂಸ್ಕೃತಿ ಉಳಿಸಲು ಸಾಧ್ಯ ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಹೆಗ್ಡೆ ಅಭಿಪ್ರಾಯಪಟ್ಟರು.

ಮಾರುತಿಪುರ ಎಂ. ಪಿ. ಹೆಗಡೆ ಕುಟುಂಬದಿಂದ ಹಮ್ಮಿಕೊಂಡಿದ್ದ ಬಟ್ಟೆಮಲ್ಲಪ್ಪ, ಶ್ರೀ ವ್ಯಾಸ ಮಹರ್ಷಿ ಗುರುಕುಲ ಸಂಗೀತ ಮತ್ತು ಯಕ್ಷ ಕುಟೀರದ ಮಕ್ಕಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದು ಸನಾತನ ಸಂಸ್ಕೃತಿ ನಮ್ಮ ಭಾರತೀಯ ಕಲೆಗಳಲ್ಲೇ ಅಡಕವಾಗಿದೆ. ಹೀಗಾಗಿ ಶಿಕ್ಷಣದೊಂದಿಗೆ ಕಲೆ ಬೆರೆತರೆ ಪರಿಪೂರ್ಣ ಭಾರತೀಯ ಶಿಕ್ಷಣವಾಗುತ್ತದೆ. ಇದನ್ನು ನಮ್ಮ ಶಿಕ್ಷಣ ವ್ಯವಸ್ಥೆ ಒಳಗೊಳ್ಳುವಂತಾಗಬೇಕು ಎಂದರು.

ಪ್ರತಿ ಮಗುವೂ ಕಲೆಯ ಮೂಲಕ ಶಿಕ್ಷಣ ಪಡೆದಾಗ ಮಾತ್ರ ಶಿಕ್ಷಣದ ನಿಜವಾದ ಸ್ವಾದ ಮಕ್ಕಳಿಗೆ ಮತ್ತು ಸಮಾಜಕ್ಕೆ ದೊರೆಯಲು ಸಾಧ್ಯ ಎಂದು ಮಾರುತಿಪುರ ಗ್ರಾಮ ಪಂಚಾಯಿತಿ ಸದಸ್ಯ ಶಂಕರ್ ಶೆಟ್ಟಿ ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಶ್ರೀ ವ್ಯಾಸ ಮಹರ್ಷಿ ಗುರುಕುಲ ಈ ನಿಟ್ಟಿನಲ್ಲಿ ಶ್ಲಾಘನೀಯ ಕಾರ್ಯ ಮಾಡುತ್ತಿದೆ. ಗುರುಕುಲದಲ್ಲಿ ಹಿಂದೂಸ್ಥಾನಿ ಸಂಗೀತ, ಯಕ್ಷಗಾನ, ಭರತನಾಟ್ಯದಂತ ಕಲೆಗಳನ್ನು ಕಳಿಸುತ್ತಿರುವುದು ಶಿಕ್ಷಣದ ಮೌಲ್ಯ ಹೆಚ್ಚಿಸಿದೆ ಎಂದರು.

ಪೋಷಕರು ಅಂಕಪಟ್ಟಿಯ ಹಿಂದಿನ ಶಿಕ್ಷಣವನ್ನು ಆಶ್ರಯಿಸಬಾರದು. ಇದರಿಂದ ವೃತ್ತಿ ಬದುಕಿಗೆ ಬೇಕಾದ ಅಂಕ ಮಾತ್ರ ಪಡೆಯಬಹುದೇ ಹೊರತು ಆದರ್ಶ ಸಮಾಜದ ಬದುಕಿಗೆ ಬೇಕಾದ ಅಂಕ ದೊರೆಯಲಾರದು ಎಂದು ಹಿರಿಯ ಯಕ್ಷ ಗುರು ಎ. ಆರ್. ಗಣಪತಿ ಪುರಪ್ಪೆಮನೆ ಹೇಳಿದರು.

ಎಂ. ಪಿ. ಹೆಗಡೆ ಕುಟುಂಬ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಲೆಯನ್ನು ಎಂದು ಮಾರಾಟದ ಸರಕಾಗಿ ನೋಡಬೇಡಿ ಎಂದರು.

ಹಿರಿಯ ಅರ್ಥದಾರಿ ಮಂಜು ಪೂಜಾರಿ ಅವರು ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿದರು.

ಸಭಾ ಕಾರ್ಯಕ್ರಮದ ನಂತರ ಸಂಗೀತ ಗುರುಕುಲ ಮಕ್ಕಳಿಂದ ವಿಧುಷಿ ಶ್ರೀರಂಜನಿ ಅವರ ನೇತೃತ್ವದಲ್ಲಿ ಹಿಂದುಸ್ಥಾನಿ ಕಚೇರಿ ನಡೆಯಿತು. ಸಂವತ್ಸರ ತಬಲಾ ಮತ್ತು ಶಾನುಬೋಗ್ ಅವರ ಹಾರ್ಮೋನಿಯಂ ಸಾಥ್ ನೀಡಿದರು.

ನಂತರ ಎ. ಆರ್ ಗಣಪತಿ ಪುರಪ್ಪೆಮನೆ ಹಾಗೂ ವೀಣಾ ಪ್ರಸನ್ನಕುಮಾರ್ ಅವರ ನಿರ್ದೇಶನದಲ್ಲಿ, ಪ್ರಶಾಂತ್ ಮಧ್ಯಸ್ತ ಅವರ ವಿರಚಿತ ಕೊರೊನಸುರ ದಮನ ಯಕ್ಷಗಾನ ಪ್ರಸಂಗವನ್ನು ಯಕ್ಷ ಕುಟೀರದ ಮಕ್ಕಳು ಅಭಿನಯಿಸಿದರು.

ನಿವೃತ್ತ ಸೈನಿಕ ಕೆ. ಪಿ. ಕೃಷ್ಣ ಮೂರ್ತಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಮಂಜುನಾಥ್ ಬ್ಯಾಣದ ಸ್ವಾಗತಿಸಿ, ವಂದಿಸಿದರು. ಎಂ. ಪಿ. ಹೆಗಡೆ ಕುಟುಂಬ ಕಾರ್ಯಕ್ರಮದ ಆಯೋಜನೆ ಮಾಡಿತ್ತು.

ಜಾಹಿರಾತು

LEAVE A REPLY

Please enter your comment!
Please enter your name here