ಶಿವನ ದರ್ಶನ ಪಡೆದು ಭಕ್ತಿಯ ಭಾವದಲ್ಲಿ ಮಿಂದೆದ್ದ ಸಿಹಿಮೊಗ್ಗೆಯ ಭಕ್ತವೃಂದ

0
526

ಶಿವಮೊಗ್ಗ : ಜಿಲ್ಲೆಯಾದ್ಯಂತ ಭಕ್ತರು ಶಿವರಾತ್ರಿ ಹಬ್ಬವನ್ನು ಇಂದು ಸಂಭ್ರಮದಿಂದ ಆಚರಿಸಿದರು. ಹಬ್ಬದ ಅಂಗವಾಗಿ ಶಿವಮೊಗ್ಗದ ಶಿವನ ದೇವಾಲಯಗಳಲ್ಲಿ ಭಕ್ತಸಾಗರವೇ ನೆರೆದಿತ್ತು. ಬೆಳಗಿನ ಜಾವದಿಂದಲೇ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು. ಶಿವನ ದರ್ಶನ ಪಡೆದ ಭಕ್ತರು ಭಕ್ತಿಯ ಭಾವದಲ್ಲಿ ಮಿಂದೆದ್ದರು.

ಬಿಸಿಲನ್ನು ಲೆಕ್ಕಿಸದೆ ಉದ್ದದ ಸರದಿ ಸಾಲಿನಲ್ಲಿ ನಿಂತು ದೇವರ ದರುಶನ ಪಡೆದರು. ಕಳೆದ ವರ್ಷ ಕೋವಿಡ್ ಇದ್ದರಿಂದ ಸರಳವಾದ ಪೂಜೆಗೆ ಆಧ್ಯತೆ ನೀಡಲಾಗಿತ್ತು. ಆದರೆ ಈ ಬಾರಿ ಅದು ದೂರವಾಗಿ ನಗರದ ಎಲ್ಲಾ ದೇವಾಲಯಗಳಲ್ಲಿ ಭಕ್ತರ ಜಂಗುಳಿ ಕಂಡುಬಂದಿತು. ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಶಿವನ ದೇಗುಲಗಳಲ್ಲದೆ ಎಲ್ಲಾ ದೇವಾಲಯಗಳಲ್ಲಿ ಬೆಳಿಗ್ಗಿನಿಂದಲೆ ವಿಶೇಷ ಪೂಜೆ ಅಭಿಷೇಕ ನಡೆಯಿತು. ವಿಶೇಷವಾಗಿ ಶಿವನ ದೇವಾಲಯಗಳಲ್ಲಿ ಶಿವನ ಮೂರ್ತಿಗೆ ಅಭಿಷೇಕ, ರುದ್ರಾಭಿಷೇಕ, ಬಿಲ್ವಪತ್ರೆ ಅರ್ಪಿಸುವ ಮೂಲಕ ಶಿವನನ್ನು ಪೂಜಿಸಲಾಯಿತು. ಭಕ್ತರಿಗೆ ಪಾನಕ ಮತ್ತು ಕೋಸಂಬರಿಯನ್ನು ಎಲ್ಲಾ ದೇವಾಲಯಗಳಲ್ಲಿ ವಿತರಿಸಲಾಯಿತು.

ವಿನೋಬ ನಗರದ ಶಿವನ ದೇವಾಲಯದಲ್ಲಿ ವಿಶೇಷವಾಗಿ ಪೂಜೆ ಹಮ್ಮಿಕೊಳ್ಳಲಾಗಿತ್ತು. ಭಕ್ತರು ದೇವಸ್ಥಾನಕ್ಕೆ ಗುಂಪು ಗುಂಪಾಗಿ ಪೂಜೆಗೆ ಬರುತ್ತಿರುವ ದೃಶ್ಯ ಕಂಡುಬಂದಿತು. ಮಹಿಳೆಯರು ಅತ್ಯಂತ ಸಡಗರದಿಂದ ಮತ್ತು ಶ್ರದ್ದಾಭಕ್ತಿಯಿಂದ ಶಿವನ ಆರಾಧಿಸುವ ದೃಶ್ಯ ಸಾಮಾನ್ಯವಾಗಿತ್ತು. ಇಲ್ಲಿ ರೋಟರಿ ವಿಜಯ್‍ಕುಮಾರ್ ಸುಮಾರು 10 ಅಡಿ ಗಂಧದ ಕಡ್ಡಿಯನ್ನು ಹಚ್ಚಿದ್ದು ವಿಶೇಷವಾಗಿತ್ತು. ಹಾಗೆಯೇ ಅರ್ಚಕ ಡಾ.ಜಯಪ್ರಕಾಶ್ ಗುರೂಜಿ ಮತ್ತು ದೇವಾಲಯ ಸಮಿತಿ ವತಿಯಿಂದ 25 ಸಾವಿರ ರುದ್ರಾಕ್ಷಿ ವಿತರಿಸಲಾಯಿತು.

ಶಿವಮೊಗ್ಗದ ಹೊರವಲಯದಲ್ಲಿರುವ ಅರಕೆರೆ ಶಿವನ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಅಭಿಷೇಕ ಪ್ರಿಯನಾದ ಶಿವನಿಗೆ ಬೆಳಿಗ್ಗೆಯಿಂದಲೇ ರುದ್ರಾಭಿಷೇಕ ಸೇರಿದಂತೆ ವಿವಿಧ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಇಲ್ಲಿ ಶಿವನ ಬೃಹದಾಕಾರದ ಮೂರ್ತಿಯಿದ್ದು, ಭಕ್ತರು ಮೂರ್ತಿಯ ಬಳಿ ನಿಂತು ಶಿವನ ದರ್ಶನ ಪಡೆದು ಪುನೀತರಾದರು.

ಪ್ರತಿ ವರ್ಷವು ಇಲ್ಲಿನ ಶಿವರಾತ್ರಿ ಒಂದು ಜಾತ್ರೆಯಂತೆ ಕಂಡುಬರುತ್ತದೆ. ತುಂಗಾ ನದಿಯಲ್ಲಿ ಸ್ನಾನ ಮಾಡಿ ನಂತರ ಶಿವನ ದರ್ಶನ ಮಾಡಲಾಗುತ್ತದೆ. ಇದಕ್ಕೊಂದು ಇತಿಹಾಸವೆ ಇದೆ. ಹಬ್ಬದ ದಿನ ಸಂಚಾರದ ಮಾರ್ಗವನ್ನೇ ಬದಲಾಯಿಸುವಷ್ಟು ಭಕ್ತರು ಅಂದರೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿ ಸೇರುತ್ತಾರೆ. ಜನ ಸಾಗರವೆ ಹರಿದುಬಂದಂತಾಗುತ್ತದೆ. ರಸ್ತೆಯಲ್ಲಿ ಹಗ್ಗಕಟ್ಟಿ ಸಾಲಿನಲ್ಲಿ ಭಕ್ತರು ಬಂದು ಶಿವನ ದರ್ಶನ ಪಡೆಯುತ್ತಾರೆ. ಭಕ್ತರನ್ನು ನಿಯಂತ್ರಿಸಲು ಪೊಲೀಸರೆ ಹರಸಾಹಸ ಪಡುವಷ್ಟು ಜನರು ಇಲ್ಲಿರುತ್ತಾರೆ. ಹಾಗಾಗಿ ಅರಕೆರೆ ಶಿವನ ದೇವಾಲಯದ ಶಿವರಾತ್ರಿ ಒಂದು ಐತಿಹಾಸಿಕ ಮಹತ್ವ ಪಡೆದಿದೆ.

ಅಬ್ಬಲಗೆರೆ ಸಮೀಪದ ಈಶ್ವರವನದಲ್ಲಿ ವನದ ಮುಖ್ಯಸ್ಥ ಎಂ.ವಿ.ನಾಗೇಶ್ ನೇತೃತ್ವದಲ್ಲಿ ವಿಶೇಷ ಶಿವರಾತ್ರಿ ಆಚರಿಸಲಾಯಿತು. ಪ್ರಕೃತಿಯ ಪ್ರೇಮ ಸ್ವರೂಪಿಯೇ ಆದ ಈಶ್ವರನ ಆರಾಧನೆಯನ್ನು ಪ್ರಕೃತಿಯನ್ನು ಉಳಿಸುವ ಮತ್ತು ಬೆಳೆಸುವ ಮೂಲಕ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಇಲ್ಲಿ ಸುಮಾರು 120 ಪ್ರಭೇದದ 800 ವೃಕ್ಷಗಳನ್ನು ಬೆಳೆಸಲಾಗಿದೆ. ಹಾಗೆಯೇ ಇಲ್ಲಿ ಇಂದು ರುದ್ರಾಭಿಷೇಕ, ಭಜನೆ, ಪ್ರವಚನ, ಶಿವಸ್ತುತಿ ಮುಂತಾದ ಕಾರ್ಯಕ್ರಮಗಳು ಬೆಳಿಗ್ಗೆ 7 ಗಂಟೆಯಿಂದಲೆ ನಡೆದವು. ಸಂಗೀತ ಕಾರ್ಯಕ್ರಮವನ್ನು ಕೂಡ ಇಲ್ಲಿ ಆಯೋಜಿಸಲಾಗಿತ್ತು.

ಕೋಟೆ ಭೀಮೇಶ್ವರ ದೇವಾಲಯದಲ್ಲೂ ಕೂಡ ವಿಶೇಷವಾಗಿ ಶಿವನ ಪೂಜೆ ನಡೆಯಿತು. ಬೆಳಿಗ್ಗಿನಿಂದಲೆ ಭಕ್ತರು ನೂರಾರು ಸಂಖ್ಯೆಯಲ್ಲಿ ಸೇರಿ ಈಶ್ವರನ ದರ್ಶನ ಪಡೆದು ಪುನೀತರಾದರು. ನದಿಯ ದಂಡೆಯ ಮೇಲೆ ಈಶ್ವರ ದೇವಾಲಯ ಇರುವುದು ಇಲ್ಲಿನ ವಿಶೇಷವಾಗಿದೆ. ಅದರಲ್ಲೂ ಕೋಟೆ ಭೀಮೇಶ್ವರ ದೇವಾಲಯಕ್ಕೆ ನೂರಾರು ವರ್ಷದ ಇತಿಹಾಸವಿದೆ. ಇಲ್ಲಿಗೆ ಆಗಮಿಸಿದ ಭಕ್ತರಿಗೆ ಪಾನಕ ಮತ್ತು ಕೋಸಂಬರಿಯನ್ನು ಹಂಚಲಾಯಿತು.

ವೀರಶೈವ ಕಲ್ಯಾಣ ಮಂದಿರದ ಶಿವನ ದೇವಾಲಯ, ಜೈಲ್ ಆವರಣದಲ್ಲಿರುವ ಉಮಾ ಮಹೇಶ್ವರ ದೇವಾಲಯ, ಬಸವನಗುಡಿಯ ಈಶ್ವರ ದೇವಾಲಯ, ರವೀಂದ್ರ ನಗರದ ಶಿವನ ಮೂರ್ತಿ, ತುಂಗಾ ತೀರದ ಅರಕೇಶ್ವರ ದೇವಾಲಯ, ಗಾಂಧಿ ಬಜಾರಿನ ಬಸವೇಶ್ವರ ದೇವಾಲಯ, ಮಲವಗೊಪ್ಪದ ಚನ್ನಬಸವೇಶ್ವರ, ಶರಾವತಿ ನಗರದ ಕಾಲಭೈರವೇಶ್ವರ ದೇವಾಲಯ, ಬಿ.ಹೆಚ್. ರಸ್ತೆಯ ಮೈಲಾರೇಶ್ವರ, ಬಿ.ಬಿ. ರಸ್ತೆಯ ಶ್ರೀ ಭವಾನಿ ಶಂಕರ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿವಿಧ ಪೂಜಾ ಕಾರ್ಯಗಳು, ಭಜನೆ ಏರ್ಪಡಿಸಲಾಗಿತ್ತು. ಬಸವನಗುಡಿ ಶ್ರೀ ಶೈಲಮಲ್ಲಿಕಾರ್ಜುನ ಸ್ವಾಮಿ ಮತ್ತು ಶ್ರೀ ಬಸವೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮೊದಲಾದ ಪೂಜಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಜಾಗರಣೆ ಅಂಗವಾಗಿ ದೇವಾಲಯಗಳಲ್ಲಿ ಭಕ್ತಿಗೀತೆ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆದವು.

ಹಬ್ಬದ ಅಂಗವಾಗಿ ಕಲ್ಲಂಗಡಿ ಹಣ್ಣು, ಬನಾಸ್ಪತ್ರೆ, ಕರಬೂಜ ಮೊದಲಾದ ಹಣ್ಣುಗಳ ಖರೀದಿ ಜೋರಾಗಿತ್ತು. ಇವುಗಳೊಂದಿಗೆ ಹೂವು, ಪೂಜಾ ಸಾಮಗ್ರಿ ಹಾಗೂ ವಿವಿಧ ಹಣ್ಣುಗಳ ಮಾರಾಟವು ಕೂಡ ಜೋರಾಗಿತ್ತು.

ಜಾಹಿರಾತು

LEAVE A REPLY

Please enter your comment!
Please enter your name here