ಶಿವಮೊಗ್ಗ: ನಗರದಲ್ಲಿ ನಿನ್ನೆ ರಾತ್ರಿ ಭಜರಂಗದಳ ಕಾರ್ಯಕರ್ತನ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಥಳಿಸಿ ಹತ್ಯೆ ಮಾಡಿದ್ದಾರೆ.
ಹರ್ಷ (28) ಕೊಲೆಯಾದ ಯವಕ. ಭಾರತಿ ಕಾಲೋನಿ ಬಳಿ ಕಾರ್ನಲ್ಲಿ ಬಂದಿದ್ದ ಯುವಕರ ಗುಂಪೊಂದು ಹರ್ಷನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ. ಹೊಟ್ಟೆ, ತಲೆ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಹರ್ಷ ರಕ್ತದ ಮಡುವಿನಲ್ಲಿ ಬಿದ್ದಿದ್ದ ಹರ್ಷನನ್ನು ಕೂಡಲೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಸಂಸ್ಕಾರಕ್ಕೆ ಮುನ್ನ ಮೆರವಣಿಗೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಪರಿಸ್ಥಿತಿ ಕೈ ಮೀರಿದ್ದು, ಉದ್ರಿಕ್ತರು ಕಲ್ಲುತೂರಾಟ ನಡೆಸಿದ್ದಾರೆ.
ಶಿವಮೊಗ್ಗ ನಗರದ ಸೀಗೆಹಟ್ಟಿ, ಇಮಾಮ್ ಬಡಾ, ಆಜಾದ್ ನಗರ ಮೊದಲಾದ ಕಡೆಗಳಲ್ಲಿ ಕಲ್ಲು ತೂರಾಟ ನಡೆಸಲಾಗಿದೆ. ದ್ವಿಚಕ್ರವಾಹನಗಳು, ಕಾರುಗಳು, ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಅಲ್ಲದೆ ಘಟನೆಯಲ್ಲಿ ಇಬ್ಬರು ಪತ್ರಕರ್ತರು, ನಾಲ್ವರು ಪೊಲೀಸರು ತೀವ್ರ ಗಾಯಗೊಂಡಿದ್ದಾರೆ.
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ. ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ ಮಾರಕಾಸ್ತ್ರಗಳನ್ನು ಹಿಡಿದು ಯುವಕರ ಗುಂಪು ಕಲ್ಲು ತೂರಾಟ ನಡೆಸಿದೆ. ಎಡಿಜಿಪಿ ಮುರುಗನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ.
ಹಿಂದೂ ಇರಲಿ, ಮುಸ್ಲಿಂ ಇರಲಿ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಮುರುಗನ್ ಹೇಳಿದ್ದು, ಎಲ್ಲರೂ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.
ಇಂದು ಬೆಳಗ್ಗೆ ಮೆಗ್ಗಾನ್ ಶವಾಗಾರದ ಬಳಿ ನೂರಾರು ಸಂಖ್ಯೆಯ ಜನ ಸೇರಿದ್ದು, ಮರಣೋತ್ತರ ಪರೀಕ್ಷೆ ನಂತರ ಕುಟುಂಬದವರಿಗೆ ಮೃತದೇಹ ಹಸ್ತಾಂತರಿಸಲಾಯಿತು.
ಮೆಗ್ಗಾನ್ ನಿಂದ ಎನ್.ಟಿ. ರಸ್ತೆ ಮೂಲಕ ನೂರಾರು ಸಂಖ್ಯೆಯ ಹಿಂದೂ ಸಂಘಟನೆ ಕಾರ್ಯಕರ್ತರು ಸೀಗೆಹಟ್ಟಿಯಲ್ಲಿರುವ ಹರ್ಷನ ಮನೆಗೆ ತೆರಳುವಾಗ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು.
ಕೆಲವು ಹಣ್ಣಿನ ಅಂಗಡಿಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದರು.
ಸೀಗೆಹಟ್ಟಿ, ಆಜಾದ್ ನಗರ ಮೃತದೇಹ ತೆಗೆದುಕೊಂಡು ಹೋಗುವಾ ಉದ್ವಿಗ್ನ ಸ್ಥಿತಿ ಉಂಟಾಗಿ ಭಾರೀ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆಸಲಾಯಿತು. ಈರ್ವರು ಮಹಿಳೆಯರು, ನಾಲ್ವರು ಯುವಕರು ಸೇರಿದಂತೆ ಹಲವರು ಗಾಯಗೊಂಡು ಹತ್ತಾರು ವಾಹನಗಳನ್ನು ಹಾನಿಗೊಳಿಸಲಾಗಿದೆ. ಕೆಲವು ಮನೆಗಳಿಗೂ ದೊಡ್ಡ ಕಲ್ಲುಗಳನ್ನು ಕಿಡಿಗೇಡಿಗಳು ಎಸೆದಿದ್ದು, ಕೆಲವೊಂದು ಮನೆಗಳ ಮಹಡಿಗಳ ಮೇಲೆ ನಿಂತು ಕೆಲವರು ಪ್ರಚೋದಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದರು.
ಅಂತಿಮವಾಗಿ ಮೃತನ ಮನೆಗೆ ಮೃತದೇಹ ತಂದಿರಿಸಲಾಗಿತ್ತು. ಮಧ್ಯಾಹ್ನ ಮೆರವಣಿಗೆ ಆರಂಭಿಸಿ, ಸ್ಥಳಕ್ಕೆ ಸಚಿವ ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಬಂದಿದ್ದರು. ರ್ಯಾಪಿಡ್ ಆಕ್ಷನ್ ಫೋರ್ಸ್ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.