ಶಿವಮೊಗ್ಗ: ಕಾಂಗ್ರೆಸ್ ಮತ್ತು ಬಿಜೆಪಿ ಎಂ.ಎಲ್.ಸಿ ಅಭ್ಯರ್ಥಿಗಳ ಒಟ್ಟು ಚರ ಮತ್ತು ಸ್ಥಿರಾಸ್ತಿ ಎಷ್ಟು ಗೊತ್ತಾ?

0
559

ಶಿವಮೊಗ್ಗ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿರುವ ಆರ್‌.ಪ್ರಸನ್ನ ಕುಮಾರ್‌ ಮತ್ತು ಬಿಜೆಪಿಯಿಂದ ನಾಮಪತ್ರ ಸಲ್ಲಿಸಿರುವ ಡಿ.ಎಸ್. ಅರುಣ್ ರವರ ಒಟ್ಟು ಚರ ಮತ್ತು ಸ್ಥಿರಾಸ್ತಿ ವಿವರ ಇಲ್ಲಿದೆ.

ಕಾಂಗ್ರೆಸ್ ಅಭ್ಯರ್ಥಿ ಆರ್. ಪ್ರಸನ್ನ ಕುಮಾರ್ ರವರು ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಮ್ಮೊಂದಿಗೆ ಪತ್ನಿ ಎಚ್‌.ಪ್ರಭಾವತಿ ಮತ್ತು ಪುತ್ರ ಪಿ.ಸೂರಜ್‌ ಅವರ ಹೆಸರಿನಲ್ಲಿರುವ ಚರ ಮತ್ತು ಸ್ಥಿರಾಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ. ಬಿಕಾಂ ಪದವೀಧರರಾದ ಪ್ರಸನ್ನಕುಮಾರ್‌ ಅವರು 1.21 ಕೋಟಿ ರೂ. ಚರ ಮತ್ತು 18.15 ಕೋಟಿ ರೂ. ಸ್ಥಿರ ಸೇರಿದಂತೆ ಒಟ್ಟಾರೆ 19.36 ಕೋಟಿ ರೂ., ಪ್ರಭಾವತಿ 4 ಕೋಟಿ ಮತ್ತು ಸೂರಜ್‌ 16.48 ಲಕ್ಷ ರೂ. ಆಸ್ತಿ ಹೊಂದಿದ್ದಾರೆ‌

ಪ್ರಸನ್ನಕುಮಾರ್‌ ಬಳಿ ಫಾರ್ಚೂನರ್‌ ಮತ್ತು ಮಾರುತಿ ಸಿಯಾಜ್‌ ಕಾರುಗಳಿವೆ. 8.64 ಲಕ್ಷ ರೂ. ನಗದು, ಡಿಸಿಸಿ ಬ್ಯಾಂಕ್‌ನಲ್ಲಿ 6.26 ಲಕ್ಷ ರೂ. ನಿಶ್ಚಿತ ಠೇವಣಿ ಮತ್ತು ವಿವಿಧ ಬ್ಯಾಂಕ್‌ಗಳ ಎಸ್‌ಬಿ ಖಾತೆಯಲ್ಲಿ 3.50 ಲಕ್ಷ ರೂ. ಠೇವಣಿ ಇದೆ. ಇವರ ಹೆಸರಲ್ಲಿ 5.56 ಲಕ್ಷ ರೂ. ಮೌಲ್ಯದ 220 ಗ್ರಾಂ ಚಿನ್ನಾಭರಣ ಮತ್ತು ಪ್ರಭಾವತಿ ಅವರ ಬಳಿ 37 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 75 ಸಾವಿರ ರೂ. ಮೌಲ್ಯದ ಬೆಳ್ಳಿ ಒಡವೆಗಳಿವೆ.

ನಗರ ಹೊರವಲಯದ ಉರುಗಡೂರಲ್ಲಿ 8 ಕೋಟಿ ರೂ. ಮೌಲ್ಯದ 5.29 ಎಕರೆ, ಗೋಪಿಶೆಟ್ಟಿಕೊಪ್ಪದಲ್ಲಿ 2.25 ಕೋಟಿ ರೂ. ಮೌಲ್ಯದ 2.33 ಎಕರೆ, ಆಲ್ಗೊಳದಲ್ಲಿ 6 ಕೋಟಿ ರೂ. ಮೌಲ್ಯದ 1.30 ಎಕರೆ, ಶಿವಮೊಗ್ಗ ತಾಲೂಕು ಮುಳ್ಳುಕೆರೆಯಲ್ಲಿ 40 ಲಕ್ಷ ರೂ. ಮೌಲ್ಯದ 10 ಗುಂಟೆ, ಹೊಸನಗರ ತಾಲೂಕಿನ ಹುಂಚದಲ್ಲಿ 1.50 ಕೋಟಿ ರೂ. ಮೌಲ್ಯದ 6.22 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಪ್ರಭಾವತಿ ಅವರು ಮೈಸೂರಿನ ಜಯಪುರದಲ್ಲಿ 40 ಲಕ್ಷ ರೂ. ಮೌಲ್ಯದ 1 ಎಕರೆ ಕೃಷಿ ಭೂಮಿ, ಶಿವಮೊಗ್ಗ ಶರಾವತಿ ನಗರದಲ್ಲಿ 1.58 ಕೋಟಿ ರೂ. ಮೌಲ್ಯದ ವಾಸದ ಮನೆ ಹೊಂದಿದ್ದಾರೆ. ಬಾಲರಾಜ್‌ ಅರಸ್‌ ರಸ್ತೆಯಲ್ಲಿರುವ ಸಹ್ಯಾದ್ರಿ ಪೆಟ್ರೋಲ್‌ ಬಂಕ್‌ಗೆ ಪ್ರಸನ್ನಕುಮಾರ್‌ ಅವರೊಂದಿಗೆ ಪತ್ನಿ ಮತ್ತು ಪುತ್ರ ಸಹ ಪಾಲುದಾರರಾಗಿದ್ದಾರೆ. ಇವೆಲ್ಲದರ ಜತೆಗೆ ಶಿವಮೊಗ್ಗ ಕಸಬಾ ಸೊಸೈಟಿಯಲ್ಲಿ 3 ಲಕ್ಷ ರೂ. ಕೃಷಿ ಸಾಲ ಮತ್ತು ಡಿಸಿಸಿ ಬ್ಯಾಂಕ್‌ ನಲ್ಲಿ 5.60 ಲಕ್ಷ ರೂ. ನಿಶ್ಚಿತ ಠೇವಣಿ ಮೇಲೆ ಸಾಲವಿದ್ದರೆ, ಪ್ರಭಾವತಿಯವರು ಪುಟ್ಟಮ್ಮ ಎಂಬುವವರ ಬಳಿ 6 ಲಕ್ಷ ರೂ. ಕೈಗಡ ಸಾಲ ಮಾಡಿದ್ದಾರೆ.

ಇನ್ನೂ ಬಿಜೆಪಿ ಅಭ್ಯರ್ಥಿ ಡಿ.ಎಸ್‌. ಅರುಣ್‌ ಅವರ ಕುಟುಂಬದ ಒಟ್ಟು ಆಸ್ತಿ ಮೌಲ್ಯ 18 ಕೋಟಿ ರೂ. ಇದು ಅವರು ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನ ಮಾಹಿತಿ.

ತಮ್ಮ ಬಳಿ 9.47 ಕೋಟಿ ರೂ., ಪತ್ನಿ ಡಿ.ಎ. ಪ್ರತಿಭಾ ಬಳಿ 2.20 ಕೋಟಿ ರೂ. ಸ್ಥಿರಾಸ್ತಿ, ತಮ್ಮ ಬಳಿ 1.43 ಕೋಟಿ ರೂ., ಪತ್ನಿ ಬಳಿ 80.09 ಲಕ್ಷ ರೂ. ಚರಾಸ್ತಿ ಹೊಂದಿದ್ದಾರೆ. ಕೂಡುಕುಟುಂಬಕ್ಕೆ ಸೇರಿದ 4 ಕೋಟಿ ರೂ. ಆಸ್ತಿಯನ್ನೂ ನಮೂದಿಸಿದ್ದಾರೆ.

ಕುಟುಂಬದ ಬಳಿ 1,125 ಗ್ರಾಂ ಚಿನ್ನ, 20 ಕೆ.ಜಿ. ಬೆಳ್ಳಿ ಇದೆ. ಕೈಯಲ್ಲಿ 8.50 ಲಕ್ಷ ರೂ. ನಗದು ಇಟ್ಟುಕೊಂಡಿದ್ದಾರೆ. ಪೆಟ್ರೋಲ್ ಬಂಕ್‌ ಸೇರಿ ಹಲವೆಡೆ ಹೂಡಿಕೆ ಮಾಡಿದ್ದಾರೆ.

2015ರಲ್ಲಿ 13.32 ಲಕ್ಷ ರೂ. ಇದ್ದ ಆದಾಯ ಪ್ರಸಕ್ತ ವರ್ಷ 15.83 ಲಕ್ಷ ರೂ. ಗಳಿಗೆ ಏರಿಕೆಯಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here