ಶಿವಮೊಗ್ಗ: ನೂತನ ಜಿಲ್ಲಾ ರಕ್ಷಣಾಧಿಕಾರಿಯಾಗಿ ಬಿ.ಎಂ.ಲಕ್ಷ್ಮೀ ಪ್ರಸಾದ್ ಅಧಿಕಾರ ಸ್ವೀಕರಿಸಿದರು.
ನಿರ್ಗಮಿತ ಎಸ್ಪಿ ಕೆ.ಎಂ.ಶಾಂತರಾಜು ಅವರು ಹೂಗುಚ್ಛ ನೀಡಿ ಲಕ್ಷ್ಮೀ ಪ್ರಸಾದ್ ರವರಿಗೆ ಅಧಿಕಾರ ಹಸ್ತಾಂತರಿಸಿದರು. ನಂತರ ಸರ್ಕಾರದ ನಿಯಮಾವಳಿ ಪ್ರಕಾರ ಲೆಡ್ಜರ್ ಗೆ ಸಹಿ ಮಾಡಿದ ನೂತನ ಎಸ್ಪಿ ಅಧಿಕಾರ ವಹಿಸಿಕೊಂಡರು.
ಸುಮಾರು 5-30 ರ ಸಮಯದಲ್ಲಿ ಎಸ್ಪಿ ಕಚೇರಿಗೆ ಬಂದ ಲಕ್ಷ್ಮೀ ಪ್ರಸಾದ್ ಗೌರವ ವಂದನೆ ಸ್ವೀಕರಿಸಿ ಎಲ್ಲಾ ಸಿಪಿಐ, ಪಿಎಸ್ಐ ಹಾಗೂ ಪಿಐಗಳಿಗೆ ಶೇಕ್ ಹ್ಯಾಂಡ್ ಮಾಡುವ ಮೂಲಕ ಪರಿಚಯ ಮಾಡಿಕೊಂಡರು.
ನಂತರ ಮಾತನಾಡಿದ ಅವರು, ಸರ್ಕಾರಿ ಆದೇಶದಂತೆ ಇಂದು ಶಿವಮೊಗ್ಗ ಎಸ್ಪಿ ಆಗಿ ಅಧಿಕಾರ ಸ್ವೀಕರಿಸಿದ್ದೇನೆ. ಸದ್ಯಕ್ಕೆ ಶಿವಮೊಗ್ಗ ಸವಾಲಿನ ಜಿಲ್ಲೆಯಾಗಿದೆ. ಈ ಹಿಂದೆ ಕೋಮು ಗಲಭೆಗಳು ಶಿವಮೊಗ್ಗದಲ್ಲಿ ಸಾಕಷ್ಟು ನಡೆದಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ನಮ್ಮದೇ ಆದ ವಿಧಿವಿಧಾನಗಳಿವೆ ಎಂದು ತಿಳಿಸಿದರು.
ಇವೆಲ್ಲವೂ ಮ್ಯಾನುವೆಲ್ ಪ್ರಕಾರ ಈಗಾಗಲೇ ಜಾರಿಯಲ್ಲಿವೆ. ಇದನ್ನೇ ಬಳಸಿಕೊಂಡು ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸುತ್ತೇವೆ.
ನಮ್ಮ ಅಧಿಕಾರಿಗಳ ಬಳಿ ಸಮಗ್ರ ಜಿಲ್ಲೆ ಬಗ್ಗೆ ಚರ್ಚೆ ನಡೆಸುತ್ತೇನೆ. ಪೊಲೀಸ್ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯನ್ನಾಗಿಸಲು, ಕ್ರಮ ತೆಗೆದುಕೊಳ್ಳುತ್ತೇನೆ. ಶಿವಮೊಗ್ಗವನ್ನು ಮೊದಲು ಅರ್ಥ ಮಾಡಿಕೊಂಡು ನಿಮಗೆ ಪ್ರತಿಕ್ರಿಯಿಸುತ್ತೇನೆ ಎಂದು ತಿಳಿಸಿದರು.