20.6 C
Shimoga
Friday, December 9, 2022

ಶಿವಮೊಗ್ಗ ಮತ್ತೆ ಪ್ರಕ್ಷುಬ್ಧ ; ಹಿಂದೂ ಯುವಕನಿಗೆ ಕಲ್ಲಿನಿಂದ ಜಜ್ಜಿ ಮಾರಣಾಂತಿಕ ಹಲ್ಲೆ !

ಶಿವಮೊಗ್ಗ : ಕೆಲ ತಿಂಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಭಜರಂಗದಳದ ಕಾರ್ಯಕರ್ತ ಹರ್ಷನ ಕುಟುಂಬದ ಸದಸ್ಯರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಕೊಲೆ ಬೆದರಿಕೆ ಹಾಕಿರುವುದು ಹಾಗೂ ಹಿಂದೂ ಯುವಕನೊಬ್ಬನನ್ನು ಕಲ್ಲಿನಿಂದ ಜಜ್ಜಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆಗಳಿಂದ ನಗರದಲ್ಲಿ ಪ್ರಕ್ಷುಬ್ದ ವಾತಾವರಣ ಉಂಟಾಗಿದೆ.

ಭರ್ಮಪ್ಪನಗರದ 2ನೇ ಅಡ್ಡರಸ್ತೆಯಲ್ಲಿ ಘಟನೆ ನಡೆದಿದ್ದು, ಪ್ರಕಾಶ್ (25) ಎಂಬುವರ ಮೇಲೆ ದಾಳಿ ನಡೆಸಲಾಗಿದೆ. ಸದ್ಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಕಾಶ್ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಂಡಿದ್ದಾನೆ.

ಈ ಘಟನೆಯಿಂದಾಗಿ ಶಿವಮೊಗ್ಗ ಸದ್ಯ ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಮೊದಲೇ ಒಂದಿಲ್ಲೊಂದು ಕಾರಣಕ್ಕಾಗಿ ಹೊತ್ತಿ ಉರಿದಿದ್ದ ಶಿವಮೊಗ್ಗ ಈಗ ದುಷ್ಕರ್ಮಿಗಳ ಬೆದರಿಕೆಯಿಂದಾಗಿ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಕಳೆದ ರಾತ್ರಿ ಸೀಗೆಹಟ್ಟಿಯ ನಿವಾಸ, ರವಿವರ್ಮ ಬೀದಿ, ಕೆ.ಆರ್.ಪುರಂ ರಸ್ತೆ ಮತ್ತಿತರ ಕಡೆ ಎರಡು ಬೈಕ್‍ನಲ್ಲಿ ಬಂದ ಒಂದು ಕೋಮಿನ ಆರು ಮಂದಿ ಯುವಕರು ಒಂದು ಧರ್ಮದ ಪರವಾಗಿ ಘೋಷಣೆ ಕೂಗಿ ಕೈಯಲ್ಲಿ ಮಚ್ಚು ಲಾಂಗು ಹಿಡಿದು ಬೆದರಿಕೆ ಹಾಕಿದ್ದಾರೆ.

ಬೈಕ್‍ನಲ್ಲಿ ಬಂದ ಆರೋಪಿಗಳು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಿಂದೂ ಸಂಘಟನೆಗಳ ವಿರುದ್ಧ ಘೋಷಣೆಗಳನ್ನು ಕೂಗಿ ವಾಪಸ್ ಮರಳುವಾಗ ಯುವಕನಿಗೆ ಕಲ್ಲಿನಿಂದ ಹೊಡೆದು ತೆರಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ.

ಹಿಜಾಬ್ ನಂತರ ಉಂಟಾದ ಕಲಹ ಹರ್ಷನ ಕೊಲೆಯಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಬಳಿಕ ಶಾಂತ ಸ್ಥಿತಿಗೆ ಮರಳಿದ್ದ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು ದುಷ್ಕರ್ಮಿಗಳು ಮುಂದಾಗಿದ್ದಾರೆ. ಯಾವುದೇ ಸಮುದಾಯವಿರಲಿ ಅವರ ಮೇಲೆ ಕಾನೂನು ಪ್ರಕಾರ ಶಿಕ್ಷೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಿಮ್ಮನ್ನು ಬಿಡುವುದಿಲ್ಲ. ಹರ್ಷನನ್ನು ಮುಗಿಸಿದಂತೆ ನಿಮ್ಮನ್ನು ಮುಗಿಸುತ್ತೇವೆ. ಸುಮ್ಮನಿದ್ದರೆ ಸರಿ. ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ಹರ್ಷನ ಸಹೋದರಿ ಅಶ್ವಿನಿ ಹೇಳಿದ್ದಾರೆ.

ಈ ಘಟನೆ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಕಳೆದ ರಾತ್ರಿ 11.45ರ ವೇಳೆ ನಮ್ಮ ಮನೆಗೆ ಬಂದ ದುಷ್ಕರ್ಮಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ನಮ್ಮ ತಂದೆತಾಯಿ ಹಾಗೂ ಕುಟುಂಬದ ಎಲ್ಲ ಸದಸ್ಯರಿಗೂ ಬೆದರಿಕೆವೊಡ್ಡಿದ್ದಾರೆ.

ಹರ್ಷನ ವಿಚಾರವನ್ನು ಪದೇ ಪದೇ ಕೆದಕಿದರೆ ಅವನಿಗಾದ ಗತಿಯೇ ನಿಮಗೂ ಆಗುತ್ತದೆ ಎಂದು ಮಾರಕಾಸ್ತ್ರಗಳನ್ನು ತೋರಿಸಿ ಪ್ರಾಣ ಬೆದರಿಕೆ ಹಾಕಿದರು. ನಮಗೆ ಪೊಲೀಸರು ಸೂಕ್ತ ರಕ್ಷಣೆ ಕೊಡಬೇಕೆಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಘಟನೆ ಕುರಿತಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಜಿಲ್ಲಾ ಪೊಲೀಸ್ ವರಿಷ್ಠಾಕಾರಿಯಿಂದ ಮಾಹಿತಿ ಪಡೆದಿದ್ದು, ದೀಪಾವಳಿ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಬೇಕು. ಸಿಸಿಟಿವಿಗಳನ್ನು ಪರಿಶೀಲಿಸಿ ಹರ್ಷನ ಕುಟುಂಬಕ್ಕೆ ಪ್ರಾಣ ಬೆದರಿಕೆ ಹಾಕಿರುವವರನ್ನು ತಕ್ಷಣವೇ ಬಂಸಬೇಕೆಂದು ಸೂಚನೆ ನೀಡಿದ್ದಾರೆ.

ಇನ್ನು ಹಲ್ಲೆಗೊಳಗಾಗಿರುವ ಪ್ರಕಾಶ್‍ನ ಸಹೋದರ ಕೂಡ ಮಾತನಾಡಿದ್ದು, ಭಜರಂಗದಳ ಮತ್ತು ಆರ್‍ಎಸ್‍ಎಸ್ ವಿರುದ್ದ ರಸ್ತೆಯಲ್ಲಿ ಬೈದುಕೊಂಡು ಹೋಗುತ್ತಿದ್ದರು. ಲಾಂಗ್ ಮಚ್ಚು ಹಿಡಿದುಕೊಂಡು ಗಲಾಟೆ ಮಾಡಿಕೊಂಡು ಹೋಗುತ್ತಿದ್ದರು. ರಾತ್ರಿ ಮೂರು ಬೈಕ್‍ಗಳಲ್ಲಿ ಸುಮಾರು 9 ಮಂದಿ ಮಾಸ್ಕ್ ಹಾಕಿಕೊಂಡು ಹೋಗುತ್ತಿದ್ದರು. ನಮ್ಮ ಏರಿಯಾದ ಜನರು ಅವರನ್ನು ನೋಡಿದ್ದಾರೆ. ಈ ಹಿಂದೆ ಗಣೇಶ ಹಬ್ಬ ಸೇರಿದಂತೆ ಕೆಲವು ಹಿಂದೂ ಕಾರ್ಯಕ್ರಮಗಳಲ್ಲಿ ನನ್ನ ಸಹೋದರ ಭಾಗಿಯಾಗಿದ್ದ ಹೀಗಾಗಿ ಹಲ್ಲೆ ನಡೆಸಿರಬಹುದೆಂದು ದೂರಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!