ಶಿಷ್ಟಾಚಾರ ಉಲ್ಲಂಘನೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ: ಬಂಧನ

0
373

 

ಶಿವಮೊಗ್ಗ: ನಗರದಲ್ಲಿಂದು ಮೇಲ್ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರನ್ನು ಬಂಧಿಸಲಾಗಿದೆ.

ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಹಾದುಹೋಗುವ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಯೋಜನೆ, ವಿದ್ಯಾನಗರ ರೈಲ್ವೆ ಮೇಲ್ಸೇತುವೆ ಕಾಮಗಾರಿ ಹಾಗೂ ತುಂಗಾ ನದಿ ಮೇಲ್ಸೇತುವೆ ಕಾಮಗಾರಿ ಗುದ್ದಲಿಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್ ಹಾಗೂ ವಾರ್ಡಿನ ಪ್ರಥಮ ಪ್ರಜೆ, ಶಿವಮೊಗ್ಗ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ ಅವರನ್ನು ಈ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಆಹ್ವಾನಿಸದ ಜಿಲ್ಲಾಡಳಿತ ಅಧಿಕಾರಿಗಳು ಆಹ್ವಾನ ಪತ್ರಿಕೆಯಲ್ಲಿ ಹೆಸರನ್ನು ಮುದ್ರಿಸದೆ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆನ್ನಲಾಗಿದೆ.

ಇದನ್ನು ಖಂಡಿಸಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಕಾಂಗ್ರೆಸ್ ಮುಖಂಡರು ಈ ಬಗ್ಗೆ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರನ್ನು ಕೇಳಲು ಹೋದ ಸಂದರ್ಭದಲ್ಲಿ ಪೊಲೀಸರು ತಡೆದಿದ್ದಾರೆ. ಇದನ್ನು ಖಂಡಿಸಿ ಗುದ್ದಲಿ ಪೂಜೆ ನಡೆಯುವ ಸ್ಥಳದಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದ್ದು, ಶಿಷ್ಟಾಚಾರ ಉಲ್ಲಂಘನೆ ಮಾಡಿದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು 20ಕ್ಕೂ ಹೆಚ್ಚು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.

 

ಕೈಮುಗಿದು ವೇದಿಕೆಗೆ ಬರಮಾಡಿಕೊಂಡ ಈಶ್ವರಪ್ಪ:

ಈ ವೇಳೆ ಆರ್.ಪ್ರಸನ್ನ ಕುಮಾರ್ ಅವರನ್ನೂ ವಶಕ್ಕೆ ಪಡೆಯಲು‌ ಪೊಲೀಸರು ಮುಂದಾದಾಗ ಸಚಿವ ಈಶ್ವರಪ್ಪ ಮಧ್ಯ ಪ್ರವೇಶಿಸಿ ಕೈಮುಗಿದು ಅವರನ್ನು ವೇದಿಕೆಗೆ ಆಹ್ವಾನಿಸಿದರು.

 

ಬಳಿಕ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ಅವರು‌ ‘ಪ್ರತಿಭಟನೆ ಮಾಡಿದವರು ವೇದಿಕೆ ಮೇಲೆ ಕುಳಿತುಕೊಂಡಿದ್ದಾರೆ’ ಎಂದು ಪ್ರಸನ್ನ ಕುಮಾರ್ ರನ್ನು ಕುಟುಕಿದರು. ಇದರಿಂದ ಮತ್ತೆ ಕೆರಳಿದ ಕಾಂಗ್ರೆಸ್ ಆರ್.ಪ್ರಸನ್ನ ಕುಮಾರ್ ಮತ್ತು ಚೆನ್ನಬಸಪ್ಪ ನಡುವೆ ವೇದಿಕೆಯಲ್ಲೇ ವಾಗ್ವಾದ ನಡೆಯಿತು. ಈ ವೇಳೆ ಪ್ರಸನ್ನ ಕುಮಾರ್ ವೇದಿಕೆ ಬಿಟ್ಟು ಕೆಳಗಿಳಿದು ಹೋದರು. ಮಧ್ಯಪ್ರವೇಶಿಸಿದ ಸಚಿವ ಈಶ್ವರಪ್ಪ, ಸಂಸದ ರಾಘವೇಂದ್ರ ಅವರು ಪ್ರಸನ್ನ ಕುಮಾರ್ ಮನವೊಲಿಸಿ ಮತ್ತೆ ವೇದಿಕೆ ಮೇಲೆ ಕುಳಿತುಕೊಳ್ಳುವಂತೆ ಮಾಡಿದರು.

ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರಾದ ಆರ್.ಸಿ. ನಾಯ್ಕ, ಮೆಹಖ್ ಶರೀಫ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್, ರಾಜ್ಯ ಕಾರ್ಯದರ್ಶಿ ಕೆ.ಚೇತನ್, ರಂಗೇಗೌಡ, ಮೊಹಮ್ಮದ್ ನಿಹಾಲ್, ರಾಜ್ಯ ಕಾರ್ಯದರ್ಶಿ ಬಾಲಾಜಿ ಮೊದಲಾದವರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here