ಶಿವಮೊಗ್ಗ : ಶಿಸ್ತು, ಬದ್ಧತೆ, ಕಾಯಕದಲ್ಲಿ ಪ್ರಾಮಾಣಿಕತೆ ಹೊಂದಿರುವ ಯಾವುದೇ ವ್ಯಕ್ತಿ ನಿರೀಕ್ಷಿತ ಗುರಿ ತಲುಪಲು ಸಾಧ್ಯ ಎಂದು ಕಿಮ್ಮನೆ ಗಾಲ್ಫ್ ರೆಸಾರ್ಟ್ಸ್ ನ ವ್ಯವಸ್ಥಾಪಕ ಜಯರಾಮ್ ಜಿ ಕಿಮ್ಮನೆ ಅವರು ಹೇಳಿದರು.
ಅವರು ಇಂದು ಪ್ರೇರಣಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ಶಿಕ್ಷಣ ಪೂರ್ಣಗೊಳಿಸಿ, ಕ್ಯಾಂಪಸ್ ಸೆಲೆಕ್ಷನ್ನಲ್ಲಿ ದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶದ ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಈ ದೇಶದ ಭವಿಷ್ಯ. ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದು. ಶಿಕ್ಷಣವಿಲ್ಲದ ವ್ಯಕ್ತಿಯಿಂದ ದೇಶದ ಭವಿಷ್ಯ ನಿರ್ಧರಿಸುವುದು ಕಷ್ಟಸಾಧ್ಯ ಮಾತ್ರವಲ್ಲ ತನ್ನ ಕೌಟುಂಬಿಕ ಬೆಳವಣಿಗೆಯೂ ಸಾಧ್ಯವಾಗದು ಎಂದವರು ನುಡಿದರು.
ವಿದ್ಯಾರ್ಥಿಯ ಗುರಿ ಖಚಿತವಾಗಿದ್ದು, ಮಾಡುವ ಚಿಂತನೆಗಳು ಸಕಾರಾತ್ಮಕವಾಗಿದ್ದಾಗ ನಿರೀಕ್ಷಿತ ಕೆಲಸ-ಕಾರ್ಯಗಳಲ್ಲಿ ಸಹಜವಾಗಿ ಗೆಲುವು ಸಾಧ್ಯವಾಗಲಿದೆ. ವ್ಯಕ್ತಿ ಪ್ರಾಮಾಣಿಕವಾಗಿದ್ದಾಗ ಸೋಲು ತಾತ್ಕಾಲಿಕವಾಗಿರಲಿದೆ. ಗೆಲವು ಖಚಿತವಾಗಿರಲಿದೆ. ಈ ವಿಷಯದಲ್ಲಿ ಎಲ್ಲರೂ ನಂಬಿಕೆ ಹೊಂದಿರಬೇಕೆAದ ಅವರು, ತಮ್ಮ ವ್ಯಾವಹಾರಿಕ ಬೆಳವಣಿಗೆಯಲ್ಲಿನ ಘಟನಾವಳಿಗಳನ್ನು ಹಂಚಿಕೊಂಡರು. ತಮ್ಮ ಬೆಳವಣಿಗೆಯಲ್ಲಿ ಎಲ್ಲ ರೀತಿಯಲ್ಲೂ ಪ್ರೋತ್ಸಾಹಿಸಿದ ಪೋಷಕರನ್ನು ಗೌರವದಿಂದ ಕಾಣುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸದ ಹಾಗೂ ಪ್ರೇರಣಾ ಟ್ರಸ್ಟ್ನ ವ್ಯವಸ್ಥಾಪಕ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ದಶಕಗಳ ಹಿಂದೆ ಕೇವಲ ಮೆಟ್ರೋ ಪಾಲಿಟಿನ್ ಸಿಟಿಗಳು, ನಂ. 01 – 02 ಸಿಟಿಗಳಿಗೆ ಮಾತ್ರ ಸೀಮಿತವಾಗಿದ್ದ ಅರ್ಹ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಇಂತಹ ಸದವಕಾಶಗಳು ಶಿವಮೊಗ್ಗ ಜಿಲ್ಲಾ ಕೇಂದ್ರಗಳಿಗೂ ಇಂದು ಸಾಧ್ಯವಾಗಿದೆ. ಪ್ರೇರಣಾ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ 651ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ದೇಶದ 75ಕ್ಕೂ ಹೆಚ್ಚಿನ ಪ್ರತಿಷ್ಠಿತ ಔದ್ಯೋಗಿಕ ಸಂಸ್ಥೆಗಳಲ್ಲಿ, ಅತ್ಯಂತ ಹೆಚ್ಚಿನ ವೇತನ ಶ್ರೇಣಿಯ ಉದ್ಯೋಗಾವಕಾಶಗಳು ಮಲೆನಾಡಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒದಗಿ ಬಂದಿದೆ. ಇವರಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಉನ್ನತ ಶ್ರೇಣಿಯ ಉದ್ಯೋಗ ದೊರೆತಿರುವುದು ಹರ್ಷದ ಸಂಗತಿಯಾಗಿದೆ. ಈ ಯಶಸ್ಸಿನ ಹಿಂದೆ ಶ್ರಮಿಸಿದ ಶಿಕ್ಷಣ ಸಂಸ್ಥೆಯ ಸಿಬ್ಬಂಧಿಗಳು, ಉದ್ಯೋಗದಾತರು ಹಾಗೂ ಈ ಸಂದರ್ಭದಲ್ಲಿ ಉದ್ಯೋಗಾವಕಾಶಕ್ಕೆ ಅರ್ಹರಾದ, ಸಂಸ್ಥೆಯ ಹಾಗೂ ನಗರದ ಕೀರ್ತಿ ಹೆಚ್ಚಿಸಿದ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದರು.
ಉದ್ಯೋಗಾವಕಾಶವನ್ನು ಪಡೆದವರಲ್ಲಿ ತಾಂತ್ರಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳಲ್ಲದೇ ತಾಂತ್ರಿಕೇತರ ಶಿಕ್ಷಣ ಪಡೆದ ಕೆಲ ವಿದ್ಯಾರ್ಥಿಗಳು ಇರುವುದು ಹೆಮ್ಮೆ ಎನಿಸಿದೆ. ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಆರ್ಥಿಕ ಅಸಮತೋಲನ ಮತ್ತು ಕೆಲವು ರಾಷ್ಟ್ರಗಳ ನಡುವಿನ ಯುದ್ಧದ ಕರಾಳ ಛಾಯೆಯಂತಹ ಸಂದಿಗ್ಧ ಸಂದರ್ಭದಲ್ಲೂ ದೇಶದ ಅನೇಕ ಪ್ರತಿಷ್ಠಿತ ಕಂಪನಿಗಳಲ್ಲಿ ಅರ್ಹರಿಗೆ ಉದ್ಯೋಗಾವಕಾಶಗಳು ದೊರೆಯುತ್ತಿರುವುದು, ದೇಶವಾಸಿಗಳೆಲ್ಲರಿಗೂ ಸಕಾಲಿಕ ಆಹಾರ ಸಾಮಾಗ್ರಿಗಳ ವಿತರಣೆ ಲಭಿಸುತ್ತಿರುವುದು ದೇಶದ ಸಾಧನೆಗಳಲ್ಲೊಂದು. ವಿಶ್ವದ ಹಲವು ರಾಷ್ಟçಗಳು ಈ ದೇಶದೊಂದಿಗೆ ಸೌಹಾರ್ಧ ಸಂಬಂಧ ಹೊಂದಲು ಹಂಬಲಿಸುತ್ತಿರುವಂತೆ ಮಾಡಿರುವ ಹಾಗೂ ದೇಶದ ನೇತೃತ್ವ ವಹಿಸಿರುವ ಪ್ರಧಾನಮಂತ್ರಿಗಳೂ ಕೂಡ ಅಭಿನಂದನಾರ್ಹರು ಎಂದರು.
ಇಷ್ಟೇ ಅಲ್ಲದೇ ದೇಶದ ಇನ್ನೂ ಹಲವು ಪ್ರತಿಷ್ಠಿತ ಕಂಪನಿಗಳೊಂದಿಗೆ ಸಂಪರ್ಕ ಸಾಧಿಸುವ ಕಾರ್ಯ ಪ್ರಗತಿಯಲ್ಲಿದ್ದು, ಇನ್ನಷ್ಟು ಪ್ರತಿಭಾವಂತರಿಗೆ ಉದ್ಯೋಗಾವಕಾಶಗಳು ದೊರೆಯಲಿದೆ. ವಿವಿಧ ಕೋರ್ಸುಗಳಲ್ಲಿ ವ್ಯಾಸಂಗ ಮುಂದುವರೆಸುವ ವಿದ್ಯಾರ್ಥಿಗಳ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಡೇಟಾ ಸೈನ್ಸ್, ಕಂಪ್ಯೂಟರ್ ಡಿಸೈನಿಂಗ್ ಮುಂತಾದ ಕೋರ್ಸುಗಳು ಆರಂಭಿಸಲಾಗುವುದು. ಅಲ್ಲದೇ ಕುವೆಂಪು ವಿವಿಯ ಸಹಯೋಗದೊಂದಿಗೆ ಟೂರಿಸಂ ಅಂಡ್ ಟ್ರಾವೆಲ್ಸ್, ಬಿ.ಎಸ್.ಡಬ್ಲ್ಯೂ ತರಗತಿಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಯತ್ನ ನಿರಂತರವಾಗಿರಲಿದೆ. ಡಿಸೆಂಬರ್ ಮಾಸಾಂತ್ಯದಲ್ಲಿ ಇಲ್ಲಿನ ನೂತನ ವಿಮಾನ ನಿಲ್ದಾಣ ಉದ್ಘಾಟನೆಗೊಂಡು ಕೈಗಾರಿಕೋದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಇದರಿಂದಾಗಿ ಹೆಚ್ಚಿನ ಜನರಿಗೆ ಉದ್ಯೋಗ ದೊರೆಯುವ ವಿಶ್ವಾಸವಿದೆ. ಬದಲಾದ ಕಾಲಘಟ್ಟದಲ್ಲಿ ದಶಕದಿಂದೀಚೆಗೆ ಶಿವಮೊಗ್ಗ ಜಿಲ್ಲೆ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಶೈಕ್ಷಣಿಕವಾಗಿ ಅನೇಕ ವಿವಿಗಳು, ಕೈಗಾರಿಕೆಗಳು ಆರಂಭಗೊAಡಿವೆ. ಸ್ಥಗಿತಗೊಂಡಿರುವ ಭದ್ರಾವತಿಯ ಅವಳಿ ಕಾರ್ಖಾನೆಗಳನ್ನು ಪುನರಾರಂಭಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದರು.
– ಪ್ರಸನ್ನಕುಮಾರ್, ಉದ್ಯೋಗ ಮಾರ್ಗದರ್ಶಕರು. ಪ್ರೇರಣಾ ಸಂಸ್ಥೆ.
ಇದೇ ಸಂದರ್ಭದಲ್ಲಿ ಉದ್ಯೋಗಾವಕಾಶವನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಪ್ರಮಾಣಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೊ.ಚೇತನಕುಮಾರ್, ಪ್ರೊ.ಗೌತಮ್, ಪ್ರೊ.ಸಾಯಿಲತಾ, ಡಾ|| ಅರುಣಾ, ಡಾ|| ನಾಗರಾಜ್ ಸೇರಿದಂತೆ ಪ್ರೇರಣಾ ತಾಂತ್ರಿಕ ಮತ್ತು ತಾಂತ್ರಿಕೇತರ ಶಿಕ್ಷಣ ಸಂಸ್ಥೆಯ ಅಧಿಕಾರಿ-ಸಿಬ್ಬಂದಿಗಳು ಉಪಸ್ಥಿತರಿದ್ದರು.