ಶೀಘ್ರವಾಗಿ ಮಳೆಹಾನಿ ನಷ್ಟ ಅಂದಾಜು ನಷ್ಟ ತ್ವರಿತವಾಗಿ ನಡೆಸಲು ಉಸ್ತುವಾರಿ ಕಾರ್ಯದರ್ಶಿಗಳ ಸೂಚನೆ

0
183

ಚಿಕ್ಕಮಗಳೂರು: ಇತ್ತೀಚಿಗೆ ಸುರಿದ ಅಕಾಲಿಕ ಭಾರೀ ಮಳೆಯಿಂದ ಆದ ಬೆಳೆ ಹಾನಿ, ಮೂಲಸೌಕರ್ಯಗಳ ಹಾನಿ ಸೇರಿದಂತೆ ನಿಖರವಾದ ನಷ್ಟ ಅಂದಾಜನ್ನು ಅಧಿಕಾರಿಗಳು ತ್ವರಿತಗತಿಯಲ್ಲಿ ನಡೆಸಿ ಸರಕಾರಕ್ಕೆ ಸಲ್ಲಿಸಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಿ. ಶಿಖಾ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಪ್ರಕೃತಿ ವಿಕೋಪದಿಂದಾದ ಹಾನಿ ಪರಿಶೀಲನೆ ಬಗ್ಗೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಮಾತನಾಡಿದ ಅವರು, ಮನೆ, ರಸ್ತೆ, ಶಾಲಾ ಕಟ್ಟಡ, ವಿದ್ಯುತ್ ಕಂಬಗಳು, ಬೆಳೆ ಹಾನಿ, ಕೃಷಿ, ಕಾಫಿ ತೋಟ ಸೇರಿದಂತೆ ಪ್ರಾಕೃತಿಕ ವಿಕೋಪದಿಂದ ಹಾನಿಯಾಗಿರುವ ನಷ್ಟವನ್ನು ವಿಳಂಭವಿಲ್ಲದೆ ಸಂಬಂಧಪಟ್ಟ ಇಲಾಖೆಯವರು ನಡೆಸಬೇಕು. ಇದರಿಂದ ಪರಿಹಾರವನ್ನು ತ್ವರಿತವಾಗಿ ಸಂತ್ರಸ್ತರಿಗೆ ವಿತರಿಸಲು ಅನುಕೂಲವಾಗಲಿದೆ.

ಕೃಷಿ, ತೋಟಗಾರಿಕೆಗೆ ಸಂಬಂಧಿಸಿದ ಬೆಳೆನಷ್ಟವನ್ನು ಕಂದಾಯ ಇಲಾಖೆಯೊಂದಿಗೆ ಜಂಟಿಯಾಗಿ ಸಂಬಂಧಿಸಿದ ಇಲಾಖೆಯವರು ನಡೆಸಬೇಕು. ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ನಿಖರವಾದ ನಷ್ಟ ಅಂದಾಜಿಸಿ, ದಾಖಲಿಸಬೇಕು. ರೈತರಿಂದ ಅಗತ್ಯ ದಾಖಲೆಗಳನ್ನು ಪರಸ್ಪರ ಸಮನ್ವಯದಿಂದ ಪಡೆದು ಸರಕಾರದ ನಿಗದಿತ ಪೋರ್ಟಲ್‌ನಲ್ಲಿ ನಮೂದು ಮಾಡಬೇಕು ಎಂದು ಹೇಳಿದರು.

ಭಾರೀ ಮಳೆಯಿಂದ ರಸ್ತೆ ಸೇರಿದಂತೆ ಸಂಪರ್ಕ ವ್ಯವಸ್ಥೆ ತೀವ್ರ ಹಾನಿಗೀಡಾದರೆ ಅಥವಾ ಕಡಿತಗೊಂಡರೆ, ಅದನ್ನು ಮರುಜೋಡಿಸಲು ಆದ್ಯತೆ ನೀಡಬೇಕು. ಶಾಲಾ ಮತ್ತು ಅಂಗನವಾಡಿ ಕಟ್ಟಡಗಳು ಹಾನಿಗೀಡಾಗಿದ್ದರೆ, ಸಂಬಂಧಪಟ್ಟ ಇಲಾಖೆಯು ಈ ಬಗ್ಗೆ ಶೀಘ್ರಗತಿಯಲ್ಲಿ ಮಾಹಿತಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಿಳಿಸಿದರು. ಮಳೆಯಿಂದ ಮೂಲಸೌಕರ್ಯಗಳು ಹಾನಿಯಾದ ಸಂದರ್ಭದಲ್ಲಿ ಇಲಾಖಾಧಿಕಾರಿಗಳು ವಿಳಂಬಿಸದೆ, ಮುಂದಿನ ಕ್ರಮಗಳನ್ನು ನಡೆಸಬೇಕು ಎಂದರು.

ಮಾನವ ಜೀವಹಾನಿಯಾದ ಪ್ರಕರಣಗಳಲ್ಲಿ ಅವರ ಕುಟುಂಬಕ್ಕೆ ಪರಿಹಾರ ವಿತರಣೆಯನ್ನು ಅತಿ ಶೀಘ್ರದಲ್ಲಿ ಮಂಜೂರು ಮಾಡಿ ವಿತರಿಸಬೇಕು. ಈ ಬಗ್ಗೆ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ಗಳು ಸ್ವತಃ ಮುತುವರ್ಜಿ ವಹಿಸಬೇಕು ಎಂದು ಸಿ.ಶಿಖಾ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಮಾತನಾಡಿ, ಜಿಲ್ಲೆಯಲ್ಲಿ 2021ರ ಜೂನ್ 1ರಿಂದ ನವೆಂಬರ್ 25ರವರೆಗೆ 11442 ಹೆಕ್ಟೇರ್ ತೋಟಗಾರಿಕೆ ಹಾಗೂ 19040 ಹೆಕ್ಟೇರ್ ಕೃಷಿ ಬೆಳೆ ಹಾನಿಗೀಡಾಗಿದೆ. ವಿಮಾ ಸಂಸ್ಥೆಯಿಂದ ಪರಿಹಾರ ನೀಡಲು ಈಗಾಗಲೇ ಸಂಬಂಧಪಟ್ಟ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕೃಷಿಕರು, ಬೆಳೆಗಾರರೊಂದಿಗೆ ನಿಕಟ ಸಮನ್ವಯದಿಂದ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಎಚ್., ಅಪರ ಜಿಲ್ಲಾಧಿಕಾರಿ ಬಿ.ಆರ್. ರೂಪಾ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here