ಹೊಸನಗರ: ಪರಿಸರ ಸಂರಕ್ಷಣೆ, ಸ್ವಚ್ಛತೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ತ್ಯಾಜ್ಯ ನಿರ್ವಹಣೆ ಮಾಡದಿದ್ದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದೆ ಇದು ಆರೋಗ್ಯಕ್ಕೆ ಮಾರಕವಾಗಲಿದೆ ಆದುದರಿಂದ ಶುದ್ಧ ಭೂಮಿ, ಶುದ್ಧ ನೀರು, ಶುದ್ಧ ಗಾಳಿಗಾಗಿ ನಮ್ಮ ಪರಿಸರವನ್ನು ರಕ್ಷಿಸುವ ಕಾರ್ಯ ನಿರಂತರವಾಗಿ ಇರಬೇಕೆಂದು ಹೊಸನಗರ ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ವ್ಯವಹಾರ ನ್ಯಾಯಾಧೀಶೆ ಪುಷ್ಪಲತಾ ಕೆ. ಇಂದಿಲ್ಲಿ ಕರೆ ನೀಡಿದರು.
ಅವರು ಇಂದು ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯದ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ, ಪರಿಸರ ಸಂರಕ್ಷಣೆ ಮಾಡದಿದ್ದರೆ ಜಾಗತಿಕ ತಾಪಮಾನದ ಮೇಲೆ ದುಷ್ಪರಿಣಾಮ ಉಂಟಾಗಿ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ. ಆದುದರಿಂದ ನಮ್ಮ ಸುಂದರ ಬದುಕಿಗಾಗಿ ನಿಸರ್ಗದ ಜೊತೆಗೆ ಸಮರಸ ಹೊಂದಬೇಕೆಂದರು.
ಬಾಲ್ಯದಿಂದಲೇ ಮಕ್ಕಳಿಗೆ ತ್ಯಾಜ್ಯ ವಿಲೇವಾರಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮನೆಯಿಂದಲೇ ಪ್ರಾರಂಭವಾಗಬೇಕು ಎಂದರು.
ನಾವು ಆಚರಿಸುವ ಹುಟ್ಟುಹಬ್ಬ, ವಿವಾಹ ಇನ್ನಿತರ ಯಾವುದೇ ಶುಭ ಸಮಾರಂಭಗಳಲ್ಲಿ ಉಡುಗೊರೆಯಾಗಿ ಗಿಡಗಳನ್ನು ನೀಡಿ ಅವುಗಳ ರಕ್ಷಣೆ ಬಗ್ಗೆ ತಿಳಿಹೇಳುವ ಕಾರ್ಯ ನಡೆಯಬೇಕೆಂದರು.
ಈ ಸಂದರ್ಭದಲ್ಲಿ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಕೆ ರವಿಕುಮಾರ್, ವಲಯಾರಣ್ಯಾಧಿಕಾರಿ ಎಂ. ರಾಘವೇಂದ್ರ, ಎಸ್.ವಿ ಪಾಟೀಲ್, ಯುವರಾಜ್, ಕೃಷ್ಣಮೂರ್ತಿ, ಸುರೇಶ್, ಜಗದೀಶ್ ನ್ಯಾಯಾಲಯದ ಸಿಬ್ಬಂದಿಗಳಾದ ಶಿರಸ್ತೇದಾರ್ ರಮೇಶ್, ಮಂಜುನಾಥ್, ರೇಖಾ, ಸುನಿಲ್, ಶರಣ್, ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು.