ಶೃಂಗೇರಿ: ಸದ್ಭಕ್ತರಿಂದ ಸಂಭ್ರಮದಿಂದ ಮಹಾಶಿವರಾತ್ರಿ ಆಚರಣೆ

0
304

ಶೃಂಗೇರಿ: ತಾಲ್ಲೂಕಿನಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಸದ್ಭಕ್ತರು ಸಂಭ್ರಮದಿಂದ ಆಚರಿಸಿದರು.

ಮನೆಯಲ್ಲಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿ ಪಟ್ಟಣದ ಶ್ರೀಮಲಹಾನಿಕರೇಶ್ವರ, ಕಿಗ್ಗಾ ಶ್ರೀಋಷ್ಯಶೃಂಗೇಶ್ವರ, ಶ್ರೀವಿದ್ಯಾಶಂಕರ ಮುಂತಾದ ದೇವಾಲಯವನ್ನು ದರ್ಶಿಸಿದರು.

ತಾಲೂಕಿನ ಉಳ್ಳುವಳ್ಳಿ ಶ್ರೀವಡ್ಡಮಲ್ಲೇಶ್ವರ ಸ್ವಾಮಿ, ಮಳವಳ್ಳಿಯ ಗಂಗಾಧರೇಶ್ವರ, ಹೊಂಬಾಗಿ ಬ್ರಹ್ಮಲಿಂಗೇಶ್ವರ, ನೆಮ್ಮಾರ್ ಸವೇಶ್ವರ, ಹೆಚ್ಗುಂದ ಶ್ರೀಮಲ್ಲಿಕಾರ್ಜುನ, ಹರಾವರಿ ಮಲ್ಲಿಕಾರ್ಜುನ, ಸಣ್ಣಾನೆಗುಂದ ಶ್ರೀಭವಾನಿಶಂಕರ ಮುಂತಾದ ದೇವಾಲಯಗಳಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿತು.

ಶ್ರೀಮಠದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಉಭಯಶ್ರೀಗಳಾದ ಜಗದ್ಗುರು ಶ್ರೀಭಾರತೀ ತೀರ್ಥರು ಹಾಗೂ ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಅವರು ಅಧಿಷ್ಠಾನದ ಪೂರ್ವಾಚಾರ್ಯರ ದರ್ಶನ ಪಡೆದರು. ಬಳಿಕ ಶಿವಪಂಚಾಕ್ಷರೀ ಹೋಮದ ಪೂರ್ಣಾಹುತಿಯಲ್ಲಿ ಭಾಗಿಯಾದರು.

ಶ್ರೀಮಠದ ಶ್ರೀವಿದ್ಯಾಶಂಕರದೇವಾಲಯ, ಶ್ರೀಜನಾರ್ಧನಸ್ವಾಮಿ, ಶ್ರೀ ಸುಬ್ರಮಣ್ಯ, ಶ್ರೀ ಶಾರದಾಪರಮೇಶ್ವರಿ, ಶ್ರೀಆದಿಶಂಕರಾಚಾರ್ಯ ದೇವಾಲಯಗಳ ದರ್ಶನ ಪಡೆದರು. ಪಟ್ಟಣದ ಮಧ್ಯಭಾಗದಲ್ಲಿರುವ ಶ್ರೀಮಲಹಾನಿಕರೇಶ್ವರ ದೇವಾಲಯಕ್ಕೆ ರಾಜಬೀದಿಯ ಮೂಲಕ ವೇದ ಹಾಗೂ ವಾದ್ಯಪೋಷದ ಜೊತೆಗೆ ಯತಿವರ್ಯರು ಚಿತ್ತೈಸಿದರು.

ಮಧ್ಯಾಹ್ನ 12ಗಂಟೆ ಹಿರಿಯಶ್ರೀಗಳು ಶ್ರೀ ಸ್ತಂಭಗಣಪತಿ, ಶ್ರೀಭವಾನಿ ಅಮ್ಮನವರಿಗೆ ಪೂಜೆ ಸಲ್ಲಿಸಿದ ಬಳಿಕ ಶ್ರೀಮಲಹಾನಿಕರೇಶ್ವರ ಸ್ವಾಮಿಗೆ ವಿಶೇಷಪೂಜೆ ಸಲ್ಲಿಸಿದರು. ರುದ್ರಾಭಿಷೇಕ, ಫಲಪಂಚಾಮೃತ ಹಾಗೂ ಎಳನೀರು, ಕಬ್ಬಿನಹಾಲು ಮುಂತಾದ ಅಭಿಷೇಕಗಳನ್ನು ನೆರವೇರಿಸಿದರು. ಕಿರಿಯಶ್ರೀಗಳು ಪೂಜೆಯಲ್ಲಿ ಭಾಗಿಯಾದರು.

ಶ್ರೀಮಠದ ನರಸಿಂಹವನದ ಗುರುನಿವಾಸದಲ್ಲಿ ಶ್ರೀಚಂದ್ರಮೌಳೀಶ್ವರ ಸ್ವಾಮಿಗೆ ನಾಲ್ಕು ಯಾಮಗಳಲ್ಲಿ ಉಭಯಶ್ರೀಗಳು ಪೂಜೆ ನೆರವೇರಿಸಿದರು. ಪ್ರತಿಯಾಮದಲ್ಲಿ ಏಕಾದಶವ್ರತ ರುದ್ರಾಭಿಷೇಕ, ಫಲಪಂಚಾಮೃತ ಅಭಿಷೇಕ ಹಾಗೂ ಋತ್ವಿಜರಿಂದ ರುದ್ರಪಠಣ ನೆರವೇರಿತು.

ಜಾಹಿರಾತು

LEAVE A REPLY

Please enter your comment!
Please enter your name here