ಶೇ.10 ರಷ್ಟು ಮುದ್ರಣ‌‌ ಬೆಲೆ ಏರಿಕೆ ಮಾಡುವುದು ಅನಿವಾರ್ಯ ಗ್ರಾಹಕರು ಸಹಕರಿಸುವಂತೆ ಮಲೆನಾಡು ಮುದ್ರಕರ‌‌ ಸಂಘದ ಅಧ್ಯಕ್ಷ ಎಂ.ಮಾಧವಚಾರ್ ಮನವಿ

0
338

ಶಿವಮೊಗ್ಗ :‌ ಮುದ್ರಣ ಸಾಮಗ್ರಿಗಳ ಬೆಲೆ ಏರಿಕೆಯಾಗಿರುವುದರಿಂದ ಅನಿವಾರ್ಯವಾಗಿ ಶೇ. 10 ರಷ್ಟು ಮುದ್ರಣದ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದ್ದು, ಗ್ರಾಹಕರು ಸಹಕರಿಸುವಂತೆ ಮಲೆನಾಡು ಮುದ್ರಕರ‌‌ ಸಂಘದ ಅಧ್ಯಕ್ಷ ಎಂ.ಮಾಧವಚಾರ್ ಮನವಿ ಮಾಡಿಕೊಂಡರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೊರೊನಾ ಸಂಕಷ್ಟಗಳು ಮರೆಯಾಗಿ ಮುದ್ರಣ ಕ್ಷೇತ್ರ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಪೆಟ್ರೋಲ್ ಉತ್ಪನ್ನಗಳು ಬೆಲೆ ಏರಿಕೆಯಾಗಿರುವ ಹಿನ್ನಲೆಯಲ್ಲಿ ಮುದ್ರಣ ಕಾಗದ ಹಾಗೂ ಮುದ್ರಣಕ್ಕೆ ಬಳಸುವ ಸಾಮಗ್ರಿಗಳ ಬೆಲೆಗಳು ಶೇ. 25 ರಿಂದ‌ 30 ರವರೆಗೆ ಏರಿಕೆಯಾಗಿರುವುದರಿಂದ ಮುದ್ರಕರು ಕಂಗಾಲಾಗಿದ್ದಾರೆ. ಹಾಗೂ ಬೆಲೆ ಏರಿಕೆಯಿಂಬ ಮಹಾಮಾರಿ ನಮ್ಮನ್ನು ಚಿಂತೆಗೀಡು ಮಾಡುತ್ತಿದೆ ಎಂದರು.

ಈ ಹಿಂದೆ ಪ್ರತಿ ಕೆ.ಜಿ.ಗೆ 40 ರಿಂದ 42 ರೂ ವರೆಗೆ ಸಿಗುತ್ತಿದ್ದ ಬಿಳಿ‌ ಕಾಗದ ಇಂದು 63 ರೂ ಆಗಿದೆ. ಇದೇ ರೀತಿ ಕೋಟೆಡ್ ಆರ್ಟ್ ಕಾಗದ 60 ರಿಂದ 85 ರೂ.ಗಳಿಗೆ ಪ್ರತಿ ಕೆ.ಜಿ.ಗೆ ಏರಿಕೆಯಾಗಿದೆ. ಇದು ಕೇವಲ ಉದಾಹರಣೆಯಾಗಿದ್ದು, ಎಲ್ಲಾ ರೀತಿಯ ಮುದ್ರಣ ಹಾಗೂ ಬೈಂಡಿಂಗ್ ಸಾಮಗ್ರಿಗಳು ಏಕಾಏಕಿ ಏರಿಕೆಯಾಗಿದೆ. ಈ ಕಾರಣದಿಂದಾಗಿ ಈವರೆಗೆ ನಾವು ನಮ್ಮ ಗ್ರಾಹಕರಿಗೆ ಒದಗಿಸುತ್ತಿದ್ದ ಸೇವೆಯ ದರಗಳಲ್ಲಿ ಶೇ. 10 ರಷ್ಟು ಏರಿಸುವುದು ಅನಿವಾರ್ಯವಾಗಿದೆ ಎಂದರು.

ಸಂಘವು ಎಲ್ಲಾ ಮುದ್ರಣಾಯಗಳಿಗೆ ಏಕ ರೂಪದ ದರಪಟ್ಟಿ ನಿಗದಿಪಡಿಸಿದೆ. ಸಂಘದಿಂದ ನೀಡಲಾಗಿರುವ ದರಪಟ್ಟಿಯನ್ನು ಅಳವಡಿಸಿಕೊಂಡು ಸಂಘದ ನಿಬಂಧನೆಗಳಿಗೆ ಬದ್ಧರಾಗಿ ಸಹಕರಿಸಬೇಕು ಹಾಗೂ ಗ್ರಾಹಕರು ಇಂದಿನ ಬೆಲೆ ಏರಿಕೆಯ ಅನಿವಾರ್ಯತೆ ಮನಗೊಂಡು ಸಹಕರಿಸುವಂತೆ ಮನವಿ ಮಾಡಿಕೊಂಡರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಮುದ್ರಣಕ್ಕೆ ಬಳಸುವ ಕಾಗದ ಹಾಗೂ ಕಚ್ಛಾ ಸಾಮಗ್ರಿಗಳನ್ನು ತಯಾರಿಸುವ ಕೈಗಾರಿಕೆಗಳ ದರ ನಿಯಂತ್ರಣ ಮಾಡಬೇಕು. ಹಾಗೂ ಅಕ್ರಮವಾಗಿ ಕಚ್ಚಾ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟು ಮುದ್ರಕರಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಮಹಾನಗರಗಳಲ್ಲಿನ ಡೀಲರ್‌ಗಳನ್ನು ನಿಯಂತ್ರಿಸಬೇಕು. ಕೊರೊನಾ ಸಂಕಷ್ಟದಿಂದ ಬಳಲುತ್ತಿರುವ ಮುದ್ರಕರಿಗೆ ವಿಶೇಷ ಸಬ್ಸಿಡಿ ರೂಪದಲ್ಲಿ ಸಾಲ ಘೋಷಿಸಬೇಕು ಮತ್ತು ಅಸಂಘಟಿತ ಮುದ್ರಣ ಕಾರ್ಮಿಕರ ಕ್ಷೇಮಕ್ಕಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಗಣೇಶ್ ಬಿಳಗಿ, ಪದಾಧಿಕಾರಿಗಳಾದ ಕೆ.ಟಿ.ಮೋಹನ್, ರಮೇಶ್, ಮಲ್ನಾಡ್ ರವಿ, ಪಾಪ್ಯುಲರ್ ರಾಜು, ಮಂಜುನಾಥ್, ಸಪ್ತಗಿರಿ ಗಿರೀಶ್, ಮುರುಳಿಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here