ಹೊಸನಗರ : ವಿದ್ಯಾರ್ಥಿಗಳು ಶ್ರದ್ಧೆ-ಭಕ್ತಿಯಿಂದ ಅಭ್ಯಾಸಿಸಿ ಶಿಕ್ಷಣ ಪಡೆದು ಉತ್ತಮ ನಾಗರಿಕನಾಗಿ ಬಾಳುವ ಗುರಿ ಹೊಂದುವಂತೆ ವಿದ್ಯಾರ್ಥಿಗಳಿಗೆ ಪಟ್ಟಣದ ಮಲೆನಾಡು ಪ್ರೌಢಶಾಲೆ ಎಸ್ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಂಗಾಧರ್, ಉಪಾಧ್ಯಕ್ಷ ರಾಜೇಶ್, ಸದಸ್ಯರಾದ ಮಂಜಪ್ಪ ಹೆಬ್ಬಿಗೆ, ಉಮೇಶ್ ಮುಖ್ಯೋಪಾಧ್ಯಾಯ ಸುಧಾಕರ್ ಮೊದಲಾದವರು ಶಾಲಾವರಣದಲ್ಲಿಂದು ಶಾರದಾ ಪೂಜೆ ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡಿಕೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಳೆದೆರಡು ವರ್ಷಗಳಿಂದ ಪರೀಕ್ಷಾ ಪೂರ್ವ ಸಿದ್ಧತೆ ಮಾಡಿಕೊಂಡ ವೇಳೆಯಲ್ಲಿ ಮಹಾಮಾರಿ ಕೊರೊನಾ ವಕ್ಕರಿಸಿದ ಕಾರಣ ಪರೀಕ್ಷೆ ಇಲ್ಲದೆಯೇ ಶೈಕ್ಷಣಿಕ ವರ್ಷ ಕೊನೆಗೊಂಡಿತು.
ಈ ಬಾರಿ ಪರೀಕ್ಷೆಗೆ ಪೂರ್ವ ಸಿದ್ಧತೆ ನಡೆಸಲಾಗಿದ್ದು ವಿದ್ಯಾರ್ಥಿಗಳಿಗೆ ಹಗಲು ಮತ್ತು ರಾತ್ರಿ ವೇಳೆ ಪಾಠ ಪ್ರವಚನ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಸಹ ತಮಗೆ ಸ್ಪಂದಿಸುತ್ತಿದ್ದ ಕಾರಣ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಇರುವುದಾಗಿ ತಿಳಿಸಿ, ಪ್ರೀತಿ ವಿಶ್ವಾಸಗಳೊಂದಿಗೆ ಅಧ್ಯಯನ ನಡೆಸಿ ಶ್ರದ್ಧೆಯಿಂದ ಓದಿ ಗುರಿ ತಲುಪಬೇಕೆಂದು ಆಶಿಸಿದರು.
