ಶ್ರೀಕ್ಷೇತ್ರ ಕಾರಣಗಿರಿಯಲ್ಲಿ ಮೇ 01ರಿಂದ 5ರವರೆಗೆ ಶ್ರೀ ಸಿದ್ಧಿವಿನಾಯಕ ದೇವರ ಮಹಾ ರಥೋತ್ಸವ ಕಾರ್ಯಕ್ರಮ

0
834

ಹೊಸನಗರ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 766 ಸಿ ಯಲ್ಲಿ ಇರುವ ಶ್ರೀಕ್ಷೇತ್ರ ಕಾರಣಗಿರಿ ಶ್ರೀಸಿದ್ಧಿವಿನಾಯಕ ದೇವರ ಮಹಾ ರಥೋತ್ಸವ ಕಾರ್ಯಕ್ರಮ ಶ್ರೀ ಶುಭಕೃತ್ ನಾಮ ಸಂವತ್ಸರದ ವೈಶಾಖ ಶುಕ್ಲ ಪಾಡ್ಯ ಮೇ ಒಂದರ ಭಾನುವಾರದಿಂದ ಮೇ 5ರ ಗುರುವಾರದವರೆಗೆ ವಿಜೃಂಭಣೆಯಿಂದ ನಡೆಯಲಿದೆ..

ಮೇ. ಒಂದರ ಭಾನುವಾರ ಬೆಳಗ್ಗೆ ಶ್ರೀ ಗಣೇಶ ಪೂಜಾ ಧ್ವಜಾರೋಹಣ ಸ್ವಸ್ತಿವಾಚನ ಯಾಕ್ರಿ ಬೇರಿತಾಡನ ವಾಸ್ತು ರಾಕ್ಷೋಘ್ನ, ಮೇ 2ರ ಸೋಮವಾರ ಅಗ್ನಿ ಜನನ ಅಧಿವಾಸ ಹೋಮಾದಿ ಕಾರ್ಯಕ್ರಮಗಳು, ಮೇ 3ರ ಮಂಗಳವಾರ ಅಷ್ಟೋತ್ತರ ಶತಾದಿಕ ಏಕಸದಸ್ಯ ನಾಳಿಕೇರ ಶ್ರೀ ಗಣಪತಿ ಹವನ ಮತ್ತು ರಜತ ರಥೋತ್ಸವ ರಾತ್ರಿ ರಂಗಪೂಜೆ, ಮೇ 4ರ ಬುಧವಾರ ಅಭಿಜಿನ್ ಮುಹೂರ್ತದಲ್ಲಿ ಶ್ರೀ ಮನ್ಮಹಾರಥೋತ್ಸವ ಹಾಗೂ ರಾತ್ರಿ ಭೂತಬಲಿ ಶಯನೋತ್ಸವ ಹಾಗೂ ಮೇ 5ರ ಗುರುವಾರ ಪ್ರಭೋಡೋತ್ಸವ ಪೂರ್ಣಾಹುತಿ ಮಹಾಪೂಜೆ ಪ್ರಾರ್ಥನಾ ಮಂತ್ರಾಕ್ಷತೆ ಪ್ರಸಾದ ವಿತರಣೆ ಕಾರ್ಯಕ್ರಮಗಳು ನಡೆಯಲಿದೆ.

ಸಕಲ ಜನರ ಕ್ಷೇಮಾರ್ಥವಾಗಿ ನಡೆಯಲಿರುವ ಈ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತ ವೃಂದದವರು ಆಗಮಿಸಿ ತಜ್ಜನ್ಯ ಶ್ರೇಯಾಭಾಗಿಗಳಾಗಬೇಕೆಂದು ವ್ಯವಸ್ಥಾಪನಾ ಸಮಿತಿಯ ಪರವಾಗಿ ಅಧ್ಯಕ್ಷರಾದ ಶ್ರೀ ಗುರುಶಕ್ತಿ ಪ್ರಭಾಕರ್ ರವರು ಕೋರಿದ್ದಾರೆ.

ಕ್ಷೇತ್ರದ ಹಿನ್ನೆಲೆ:

ಶ್ರೀಕ್ಷೇತ್ರ ಕಾರಣಗಿರಿಯ ಶ್ರೀ ಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನವು ಮಲೆನಾಡಿನ ಪ್ರಸಿದ್ಧ ಕಾರಣಿಕ ಸ್ಥಳಗಳಲ್ಲೊಂದಾಗಿದೆ. ಪುರಾತನ ಕಾಲದಲ್ಲಿ ಈ ದೇವಸ್ಥಾನದಲ್ಲಿ ಅಗಸ್ತ್ಯ ಮಹರ್ಷಿಗಳು ಶ್ರೀ ಸಿದ್ಧಿವಿನಾಯಕ ಸ್ವಾಮಿಯನ್ನು ಪೂಜಿಸುತ್ತಿರುವ ಬಗ್ಗೆ ಐತಿಹ್ಯಗಳಿವೆ.

ರಾಮಾಯಣ ಕಾಲದಲ್ಲಿ ಶ್ರೀರಾಮನು ಸೀತೆಯನ್ನು ಕರೆತರಲು ಲಕ್ಷ್ಮಣನ ಜೊತೆ ಲಂಕೆಗೆ ಹೊರಟ ಸಂದರ್ಭದಲ್ಲಿ ಈ ಪ್ರದೇಶ ಬಂದಿದ್ದರೆನ್ನಲಾಗಿದೆ. ಆಗ ಅಗಸ್ತ್ಯ ಮಹರ್ಷಿಗಳ ದರ್ಶನ ಪಡೆದು ಗಣಪತಿಯನ್ನು ಪೂಜಿಸಿ ಲಂಕೆಯಿಂದ ವಾಪಸ್ ಬರುವಾಗ ಮತ್ತೆ ಬಂದು ಹೋಗುವಂತೆ ಅಗಸ್ತ್ಯ ಮಹರ್ಷಿಗಳು ಸೂಚಿಸಿದ್ದಾರಂತೆ. ಆದರೆ ಪುಷ್ಪಕ ವಿಮಾನದಲ್ಲಿ ಸೀತೆಯನ್ನು ಲಂಕೆಯಿಂದ ಕರೆತರುವ ಧಾವಂತದಲ್ಲಿ ಶ್ರೀರಾಮನಿಗೆ ಮಹರ್ಷಿಗಳು ಹೇಳಿದ ಮಾತು ನೆನಪಾಗದೆ ಮುಂದೆ ಪ್ರಯಾಣ ಬೆಳೆಸಿದಾಗ ಬೆಟ್ಟವೊಂದು ಶ್ರೀರಾಮನ ಪುಷ್ಪಕ ವಿಮಾನಕ್ಕೆ ತಡೆ ಉಂಟಾದ ಕಾರಣ ಶ್ರೀರಾಮನು ಕಿಂ ಕಾರಣಂ ಗಿರಿ ಎಂದು ಪ್ರಶ್ನಿಸಿ ಲಂಕೆಗೆ ಹೋಗುವಾಗವಿಲ್ಲದ ಬೆಟ್ಟ ಈಗ ಉದ್ಭವವಾಗಿದೆ ಎಂದು ಲಕ್ಷ್ಮಣನಲ್ಲಿ ತಿಳಿಸಿದಾಗ ಆಗ ಲಕ್ಷ್ಮಣ ಮಹರ್ಷಿಗಳು ಹೇಳಿದ ಮಾತನ್ನು ಶ್ರೀರಾಮನಿಗೆ ನೆನಪಿಸಿದಾಗ ಶ್ರೀರಾಮನು ಪುನಃ ಇಲ್ಲಿಗೆ ಬಂದು ಅಗಸ್ತ್ಯ ಮಹರ್ಷಿಗಳ ಸಮ್ಮುಖದಲ್ಲಿ ಶ್ರೀ ಗಣಪತಿಗೆ ಪೂಜೆ ಸಲ್ಲಿಸಿ ರಾಮಚಂದ್ರಪುರಕ್ಕೆ ತೆರಳಿದ ಬಗ್ಗೆ ಐತಿಹ್ಯಗಳಿವೆ. ಶ್ರೀರಾಮನ ಬಾಯಿಂದ ಉದ್ಭವಿಸಿದ ಕಿಂ ಕಾರಣಂ ಗಿರಿ ವಾಕ್ಯವೇ ಮುಂದೆ ಕಾರಣಗಿರಿ ಎಂಬುದಾಗಿ ಪ್ರತೀತಿಯಾಗಿದೆ ಎನ್ನಲಾಗಿದೆ.

ಶ್ರೀರಾಮಚಂದ್ರಾಪುರ ಮಠದಲ್ಲಿ ಶ್ರೀರಾಮನವಮಿ ಎಂದು ರಥೋತ್ಸವ ನಡೆಯುವ ಹಿಂದಿನ ದಿನ ಶ್ರೀರಾಮದೇವರ ಉತ್ಸವವು ಕಾರಣಗಿರಿ ಸಿದ್ಧಿವಿನಾಯಕ ಸ್ವಾಮಿ ಸನ್ನಿಧಿಗೆ ಬಂದು ಶ್ರೀ ಗಣಪತಿಗೆ ಪೂಜೆ ಸಲ್ಲಿಸುವ ಧಾರ್ಮಿಕ ಕಾರ್ಯ ಈಗಲೂ ನಡೆಯುತ್ತಿದೆ.

ಅಗಸ್ತ್ಯ ಮಹರ್ಷಿಗಳು ಪೂಜಿಸಲುಪಟ್ಟಿರುವ ಕಾರಣಗಿರಿಯ (ಕಾರಗಡಿ) ಶ್ರೀ ಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನ ಕಾರಣಿಕ ಕ್ಷೇತ್ರವಾಗಿದೆ. ರಾಜ್ಯಾದ್ಯಂತ ಅಲ್ಲದೆ ಪರ ರಾಜ್ಯಗಳಿಂದಲೂ ಭಕ್ತ ವೃಂದದವರು ಆಗಮಿಸಿ ಈ ದೇವಸ್ಥಾನಕ್ಕೆ ಭೇಟಿ ನೀಡಿ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here