ಶ್ರೀ ವ್ಯಾಸ ಮಹರ್ಷಿ ಗುರುಕುಲ ಆಶ್ರಯದಲ್ಲಿ ದಶಮಾನೋತ್ಸವ ವರ್ಷಾಚರಣೆ ಅಂಗವಾಗಿ ಹರಿದ್ರಾವತಿಯಲ್ಲಿ ಮಾ. 25ರಂದು ಉಚಿತ ನೇತ್ರ ಚಿಕಿತ್ಸಾ ಶಿಬಿರ

0
459

ಹೊಸನಗರ : ತಾಲ್ಲೂಕಿನ ಬಟ್ಟೆಮಲ್ಲಪ್ಪದ ಶ್ರೀ ವ್ಯಾಸ ಮಹರ್ಷಿ ಗುರುಕುಲದ ದಶಮಾನೋತ್ಸವ ವರ್ಷಾಚರಣೆ ಅಂಗವಾಗಿ ಮಾಚ್ 25ರಂದು ಉಚಿತ ನೇತ್ರ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಬ್ಯಾಣದ ಹೇಳಿದರು.

ಇಂದು ಶ್ರೀ ಸತ್ಯದೇವತಾ ಕಾಂಪ್ಲೆಕ್ಸ್ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ಗುರುಕುಲವು ಸತತ 7 ವರ್ಷಗಳಿಂದ ನೇತ್ರ ಶಿಬಿರವನ್ನು ಉಡುಪಿಯ ಪ್ರಸಾದ್ ನೇತ್ರಾಲಯದ ಸಹಯೋಗದಲ್ಲಿ ನಡೆಸಿಕೊಂಡು ಬರುತ್ತಿದ್ದು, ಈ ವರ್ಷವೂ ಹರಿದ್ರಾವತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾರ್ಚ್ 25 ರ ಗುರುವಾರ ಬೆಳಿಗ್ಗೆ 9ರಿಂದ ಮದ್ಯಾಹ್ನ 1ರವರೆಗೆ ತಪಾಸಣೆ, ಮರುದಿನ ಉಡುಪಿ ಪ್ರಸಾಧ್ ನೇತ್ರಾಲಯದಲ್ಲಿ ಶಸ್ತ್ರ ಚಿಕಿತ್ಸೆ ಶಿಬಿರ ನಡೆಯಲಿದೆ ಎಂದು ತಿಳಿಸಿದರು.

ಕಣ್ಣಿನ ಎಲ್ಲಾ ರೀತಿಯ ಸಮಸ್ಯೆ ಇರುವವರಿಗೂ ತಪಾಸಣೆ ನಡೆಸಲಾಗುತ್ತದೆ. ಆದರೆ, ಪೊರೆ ಬಂದವರಿಗೆ ಶಿಬಿರದಲ್ಲಿ ತಪಾಸಣೆ ನಡೆಸಿ ಉಡುಪಿ ಪ್ರಸಾದ್ ನೇತ್ರಾಲಯಕ್ಕೆ ಕರೆದೊಯ್ದು ಶಸ್ತ್ರ ಚಿಕಿತ್ಸೆ ನಡೆಸಿ, ಉಚಿತವಾಗಿ ಲೆನ್ಸ್ ಅಳವಡಿಸಲಗುತ್ತದೆ. ಶಿಬರದಲ್ಲಿ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಆದವರಿಗೆ ಸಾರಿಗೆ, ವಸತಿ, ಆಹಾರ ಎಲ್ಲವೂ ಉಚಿತವಾಗಿರಲಿದೆ. ತಾಲ್ಲೂಕಿನ ಬೇರೆ ಬೇರೆ ಭಾಗಗಳಿಂದ ಶಿಬಿರಕ್ಕೆ ಬರುವವರು ಇದ್ದಲ್ಲಿ, ಹತ್ತಕ್ಕಿಂತ ಹೆಚ್ಚಿನ ಶಿಬಿರಾರ್ಥಿಗಳು ಇದ್ದರೆ ಸಂಸ್ಥೆಯೇ ವಾಹನ ವ್ಯವಸ್ಥೆ ಕೂಡ ಕಲ್ಪಿಸಲಿದೆ. ಅರ್ಹ ಸಾರ್ವಜನಿಕರು ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಂಜುನಾಥ್ ಬ್ಯಾಣದ್ ಮನವಿ ಮಾಡಿದರು.

ಶ್ರೀ ಬಸವನ ಬ್ಯಾಣದ ಅಯ್ಯಪ್ಪ ಮೆಮೋರಿಯಲ್ ಟ್ರಸ್ಟ್ ಅಡಿಯಲ್ಲಿ ಗುರುಕುಲ ಸಂಸ್ಥೆ ಆರಂಭಗೊಂಡು ಹತ್ತು ವರ್ಷಗಳು ಪೂರ್ಣಗೊಂಡಿದ್ದು, ಕಳೆದ ವರ್ಷವೇ ದಶಮಾನೋತ್ಸ ಆಚರಿಸಬೇಕಿತ್ತು, ಆದರೆ ಕೋವಿಡ್ 19 ಸಮಸ್ಯೆಯಿಂದಾಗಿ ಇದು ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷ ಕೋವಿಡ್ 19 ನಿಬಂಧನೆಗಳಿಗೆ ಒಳಪಟ್ಟು ತಿಂಗಳಿಗೊಂದರಂತೆ ವರ್ಷವಿಡೀ ಹಲವು ಆರೋಗ್ಯ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಸಂಸ್ಥೆ ಆರಂಭಗೊಂಡಾಗಿನಿಂದಲೂ ವಿವಿಧ ಸಮಾಜ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಕಳೆದ ಏಳು ವರ್ಷಗಳಿಂದ ಪ್ರಸಾದ್ ನೇತ್ರಾಲಯ ಉಡುಪಿ, ಜಿಲ್ಲಾ, ತಾಲ್ಲೂಕು ಮತ್ತು ಸ್ಥಳೀಯ ಆರೋಗ್ಯ ಇಲಾಖೆ ಇವರ ಸಹಕಾರದಲ್ಲಿ ಪ್ರತಿ ವರ್ಷ ನೇತ್ರ ಶಿಬಿರ ನಡೆಸಿಕೊಂಡು ಬರುತ್ತಿದ್ದೇವೆ. ಬಟ್ಟೆಮಲ್ಲಪ್ಪವಷ್ಟೇ ಅಲ್ಲದೆ, ಹೊಸನಗರ ಮತ್ತು ನಗರಗಳಲ್ಲೂ ನೇತ್ರ ಶಿಬಿರವನ್ನು ನಮ್ಮ ಸಂಸ್ಥೆ ಪ್ರಾಯೋಜಿಸಿದೆ. ಇದಲ್ಲದೆ, ಡಾ. ಪತಂಜಲಿ ಹಾಗೂ ಆಯಷ್ ಇಲಾಖೆ ಇವರ ನೇತೃತ್ವದಲ್ಲಿ ಆರೋಗ್ಯ ಶಿಬಿರ, ಮಕ್ಕಳ ಮನೋವಿಕಾಶ ಕಾರ್ಯಕ್ರಮಗಳು, ಕಿಶೋರಿಯರಿಗೆ ಕಿವಿ ಮಾತು ಮತ್ತು ಆರೋಗ್ಯ, ಸ್ವಚ್ಚತೆಯ ಜಾಗೃತಿಗಾಗಿ ಬೀದಿ ನಾಟಕ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುತ್ತೇವೆ. ನಮ್ಮೊಂದಿಗೆ ಸ್ಥಳೀಯ ಸಂಘ ಸಂಸ್ಥೆಗಳು, ಸಾರ್ವಜನಿಕರು ಸಹಕಾರ ನೀಡಿದ್ದಾರೆ. ಈ ವರ್ಷ ಕೂಡ ಈ ನಿಟ್ಟಿನಲ್ಲಿ ತಿಂಗಳಿಗೊಂದು ಕಾರ್ಯಕ್ರಮ ನಡೆಯಲಿದೆ ಎಂದು ಮಂಜುನಾಥ್ ಬ್ಯಾಣದ್ ವಿವರಿಸಿದರು.

ನೇತ್ರ ಶಿಬಿರದಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಮನೆಯಲ್ಲಿ ತಿಳಿಸಿ, ವಿಳಾಸ, ದೂರವಾಣಿ ಸಂಖ್ಯೆ ತರಬೇಕು. ಹಾಗೂ ಆಧಾರ್, ರೇಷನ್ ಕಾರ್ಡ್ ಜೆರಾಕ್ಸ್ ಹಾಗೂ ಒಂದು ಪಾಸ್‌ಪೋರ್ಟ್ ಸೈಜ್ ಫೋಟೋ ಜೊತೆಯಲ್ಲಿ ತರಬೇಕು ಎಂದು ತಾಲ್ಲೂಕು ನೇತ್ರಾಧಿಕಾರಿ ಎ.ಎಂ ಕೃಷ್ಣರಾಜು ತಿಳಿಸಿದರು.

ಶಿಬಿರದಲ್ಲಿ ಯಾವುದೇ ರೀತಿಯ ಶುಲ್ಕವಾಗಲಿ, ಶಿಬಿರಾರ್ಥಿಯ ಜೊತೆಯಲ್ಲಿ ಸಹಾಯಕರೊಬ್ಬರು ಕಡ್ಡಾಯವಾಗಿ ಬರಬೇಕು ಎನ್ನುವ ಯಾವುದೇ ನಿರ್ಬಂಧ ಇರುವುದಿಲ್ಲ. ನಾವುಗಳೇ ಅವರ ಜವಾಬ್ದಾರಿ ನಿರ್ವಹಿಸಲಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿ ಬೇಕಾದವರು 9483439666, 9448721650 ಅಥವಾ 8861130989 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ಮನವಿ ಮಾಡಿದರು.

ಜಾಹಿರಾತು

LEAVE A REPLY

Please enter your comment!
Please enter your name here