ಷೋಡಶ ಸಂಸ್ಕಾರದಲ್ಲಿ ಉಪನಯನ ಸಂಸ್ಕಾರವೂ ಒಂದು ; ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮಿ

0
163

ಶೃಂಗೇರಿ: ಷೋಡಶ ಸಂಸ್ಕಾರದಲ್ಲಿ ಉಪನಯನ ಸಂಸ್ಕಾರವೂ ಒಂದಾಗಿದೆ. ಉಪನೀತರಾದ ವಟುಗಳು ತ್ರಿಕಾಲ ಸಂಧ್ಯಾವಂದನೆ ಮಾಡಬೇಕು ಎಂದು ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಶ್ರೀ ಶಿವಸುಜ್ಞಾನ ತೀರ್ಥಮಹಾಸ್ವಾಮಿ ಹೇಳಿದರು.

ಪಟ್ಟಣದ ಹೊರವಲಯದ ಉಳವಳ್ಳಿಯ ವಿಶ್ವಕರ್ಮ ಸಮುದಾಯಭವನದಲ್ಲಿ ಏರ್ಪಡಿಸಿದ್ದ ಶೃಂಗೇರಿ ಕ್ಷೇತ್ರ ವಿಶ್ವಕರ್ಮ ಸೇವಾ ಸಂಘದ ಧಾರ್ಮಿಕ ಸಭೆ, ಸಾಮೂಹಿಕ ಉಪನಯನ, ಧಾರ್ಮಿಕ ಪುಸ್ತಕ ಬಿಡುಗಡೆ, ಕ್ಷೇತ್ರ ಮಟ್ಟದ ಸೇವಾ ಸಂಘದ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಇಂದಿನ ಆಧುನಿಕ ಜಗತ್ತಿನಲ್ಲಿ ಸಂಸ್ಕಾರ ಮರೆಯಾಗುತ್ತದೆ. ಮೊದಲು ಪೋಷಕರು ನಿತ್ಯ ವಿಧಿಗಳನ್ನು ತಪ್ಪದೇ ಅನುಷ್ಠಾನ ಮಾಡಬೇಕು. ತಮ್ಮ ಮಕ್ಕಳಿಗೂ ಪ್ರತಿ ದಿನವೂ ಗಾಯತ್ರಿ ಉಪಾಸನೆ ಮಾಡಬೇಕು. ನಮ್ಮ ಸಮಾಜದ ಸೇವೆ ಸಮುದಾಯದಲ್ಲಿ ಅತ್ಯಂತ ಹೆಚ್ಚಿನ ಸೇವೆ ನೀಡುತ್ತಿದೆ. ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದರೂ ಸಂಘಟನೆಯ ಕೊರತೆಯಿಂದ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ದೊರಕುತ್ತಿಲ್ಲ ಎಂದರು.

ಕಾಶಿ ಮಠ ಸಾವಿತ್ರಿ ಪೀಠದ ಶ್ರೀ ಶಂಕರಾತ್ಮಾನಂದ ಸರಸ್ವತಿ ಮಹಾಸ್ವಾಮೀಜಿ ಮಾತನಾಡಿ, ಶ್ರೀ ಆದಿ ಶಂಕರರು ಅದ್ವೈತ ತತ್ವವನ್ನು ನಮಗೆ ಬೋಧಿಸಿದ್ದಾರೆ. ನಮ್ಮೊಳಗೆ ದೇವರಿದ್ದಾರೆ. ಶಂಕರರ ತತ್ವಗಳು ಇಂದಿಗೂ ಪ್ರಸ್ತುತವಾಗಿದೆ. ಜಗತ್ತಿನಲ್ಲಿ ಏಕೈಕ ಪರಮಾತ್ಮನೆಂದರೆ ವಿಶ್ವಕರ್ಮ. ವೇದ ಎಂದರೆ ದೊಡ್ಡ ವೃಕ್ಷವಿದ್ದಂತೆ. ಮರದ ಬೇರು, ರೆಂಬೆ, ಎಲೆಯು ಸುಭದ್ರವಾಗಿ ನಿಲ್ಲಬೇಕಾದರೆ ಪ್ರತಿಯೊಬ್ಬರೂ ಧರ್ಮಾಚರಣೆ ಮಾಡಬೇಕು. ಒಂದೇ ಭಾವನೆಯಿಂದ ಸಮಾಜವನ್ನು ಒಗ್ಗೂಡಿಸಿ, ಸಮುದಾಯವನ್ನು ಒಟ್ಟುಗೂಡಿಸಬೇಕು ಎಂದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಉಭಯ ಜಗದ್ಗುರುಗಳನ್ನು ಮುಖ್ಯ ರಸ್ತೆಯಿಂದ ಪೂರ್ಣಕುಂಭ ಸ್ವಾಗತ, ಚಂಡೆ ವಾದನ, ನೂರಾರು ಮಹಿಳೆಯರು ಕಲಶ ಹಿಡಿದು ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ತಾಲೂಕು ಅಧ್ಯಕ್ಷ ವೆಂಕಪ್ಪಚಾರ್ಯ ದಂಪತಿಗಳು ಶ್ರೀಗಳಿಗೆ ಆರತಿ ಬೆಳಗಿದರು. ವೇದಿಕೆಯಲ್ಲಿ ಶ್ರೀಗಳಿಗೆ ಪಾದಪೂಜೆ ಸಲ್ಲಿಸಲಾಯಿತು. ಸಮುದಾಯಭವನದಲ್ಲಿ 70 ವಟುಗಳಿಗೆ ಬ್ರಹ್ಮೋಪದೇಶ ನೀಡಲಾಯಿತು. ಕೊಪ್ಪದ ಕೃಷ್ಣಮೂರ್ತಿ ಪುರೋಹಿತ ಮತ್ತು ವೇಣೂರಿನ ಪ್ರಕಾಶ್ ಶರ್ಮ ಧಾರ್ಮಿಕ ವಿಧಿ ವಿಧಾನದ ನೇತೃತ್ವ ವಹಿಸಿದರು. ವಟುಗಳಿಗೆ ಹಾಗೂ ಭಕ್ತಾದಿಗಳಿಗೆ ಶ್ರೀಗಳು ಫಲ ಮಂತ್ರಾಕ್ಷತೆ ವಿತರಿಸಿದರು.

ಎ. ಎಸ್. ಕೃಷ್ಣಯ್ಯಚಾರ್ಯ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಉಮೇಶ್ ಆಚಾರ್ಯ, ಮಹೇಶ್ ಆಚಾರ್ಯ, ಕಿಶೋರ್ ಪೇಜಾವರ್, ನವೀನ್‍ಕುಮಾರ ಆಚಾರ್ಯ, ಸುಬ್ರಮಣ್ಯ ಆಚಾರ್ಯ, ರಾಜೇಶ್ ಆಚಾರ್ಯ, ಶಾರದಾ, ಸುಜಾತ, ಲಲಿತರಾಮಚಂದ್ರಚಾರ್ಯ, ಕೆ. ಆರ್. ಭಾಸ್ಕರಚಾರ್ಯ ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here