ಸಂಕಷ್ಟದಲ್ಲಿರುವ ಮಕ್ಕಳು ಕಂಡಾಗ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ : ರೇಖಾ

0
222

ಶಿವಮೊಗ್ಗ: ಸಂಕಷ್ಟದಲ್ಲಿರುವ ಹಾಗೂ ಪೋಷಣೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳು ಕಂಡಾಗ ಉಚಿತ ಮತ್ತು ತುರ್ತು ಸೇವೆ ನೀಡುವ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಗೆ ಕರೆ ಮಾಡುವ ಮೂಲಕ ಸಹಾಯ ಮಾಡಬೇಕೆಂದು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಜಿ.ಎಂ.ರೇಖಾ ಸಾರ್ವಜನಿಕರಲ್ಲಿ ವಿನಂತಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ರೈಲ್ವೆ ಇಲಾಖೆ, ಮಕ್ಕಳ ಸಹಾಯವಾಣಿ ಶಿವಮೊಗ್ಗ ಇವರ ಸಹಯೋಗದೊಂದಿಗೆ ಇಂದು ನಗರದ ರೈಲ್ವೇ ನಿಲ್ದಾಣದಲ್ಲಿ ಮಕ್ಕಳ ಸಹಾಯವಾಣಿ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಮಕ್ಕಳ ಸಹಾಯವಾಣಿ ಮಳಿಗೆ ಮತ್ತು ಸುರಕ್ಷಿತ ಪ್ರಯಾಣ ಜಾಗೃತಿ ಅಭಿಯಾನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಮಗುವೊಂದು ಅಸೌಖ್ಯವಾಗಿದ್ದು ಒಂಟಿಯಾಗಿರುವುದು ಕಂಡಾಗ, ಶಾಲೆ ಬಿಟ್ಟ ಮಕ್ಕಳು, ದೌರ್ಜನ್ಯಕ್ಕೆ, ಹಿಂಸೆಗೆ ಒಳಗಾದ ಮಗು, ಬಾಲ ಕಾರ್ಮಿಕ ಮತ್ತು ವಿಕಲಾಂಗ ಮಗು, ನಿರ್ಗತಿಕ ಹಾಗೂ ಕಾಣೆಯಾದ, ಪೋಷಣೆ ಮತ್ತು ಸಂರಕ್ಷಣೆಯ ಅವಶ್ಯಕತೆ ಇರುವ ಮಕ್ಕಳು ಕಂಡಾಗ ಮಕ್ಕಳ ಸಹಾಯವಾಣಿ 1098 ಗೆ ಕರೆ ನೀಡಿ ಮಗುವಿಗೆ ಸಹಾಯ ಮಾಡಬಹುದು. ಇಂತಹ ಮಕ್ಕಳಿಗೆ ಸಹಾಯ ಒದಗಿಸುವುದು, ಪಾಲನೆ, ಪೋಷಣೆ ಮತ್ತು ಸುರಕ್ಷತೆ ಕಲ್ಪಿಸುವುದು ಮಕ್ಕಳ ಸಹಾಯವಾಣಿಯ ಉದ್ದೇಶವಾಗಿದೆ.

ರೈಲ್ವೆ ಸ್ಟೇಷನ್‍ನಲ್ಲಿ ಸಹ ಹಲವಾರು ಮಕ್ಕಳು ಎಲ್ಲಿಂದಲೋ ಬಂದಿರುತ್ತಾರೆ. ಕಾಣೆಯಾಗಿರುತ್ತಾರೆ, ಇವರನ್ನು ಗುರುತಿಸಿ ಸಹಾಯವಾಣಿಗೆ ಕರೆ ಮಾಡುವ ಮೂಲಕ ಅವರನ್ನು ಅವರ ಕುಟುಂಬಕ್ಕೆ ಸೇರ್ಪಡೆ ಮಾಡಬಹುದು. ರೈಲ್ವೇ ಇಲಾಖೆಯ ಸಿಬ್ಬಂದಿ ಸಹ ಇಂತಹ ಹಲವಾರು ಮಕ್ಕಳನ್ನು ಗುರುತಿಸಿ ಸಹಾಯ ಮಾಡಿ ಕುಟುಂಬಕ್ಕೆ ಸೇರ್ಪಡೆಗೊಳಿಸಿರುವುದು ಶ್ಲಾಘನೀಯ. ಸಾರ್ವಜನಿಕರೂ ಸಹ ತಮ್ಮ ಗಮನಕ್ಕೆ ಬಂದ ಸಂಕಷ್ಟದಲ್ಲಿರುವ ಮಕ್ಕಳು ಕಂಡಾಗ ಮಕ್ಕಳ ಸಹಾಯವಾಣಿ 1098 ಹಾಗೂ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸಹಾಯ ಒದಗಿಸಲು ಮಹಿಳೆಯರ ಸಹಾಯವಾಣಿ 181 ಕರೆ ಮಾಡಿ ತಿಳಿಸಬೇಕು. ಮಕ್ಕಳ ಕಲ್ಯಾಣ ಸಮಿತಿಯು ಮಕ್ಕಳಿಗೆ ಆಶ್ರಯ ಮತ್ತು ಮೂಲಭೂತ ಸೌಕರ್ಯ ಹಾಗೂ ಮಹಿಳೆಯರಿಗೆ ತಾತ್ಕಾಲಿಕ ಆಶ್ರಯ ಮತ್ತು ಕುಟುಂಬದೊಂದಿಗೆ ಸೇರ್ಪಡೆಗೊಳಿಸುವ ಕೆಲಸ ಮಾಡುತ್ತದೆ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಎಲ್ಲಡೆ ಮೂಡುವಂತಾಗಬೇಕೆಂದು ಆಶಿಸಿದರು.

ಸಹಾಯಕ ಉಪ ನಿರೀಕ್ಷಕಿ ಲಕ್ಷ್ಮೀ ಪಾಟಿಲ್ ಮಾತನಾಡಿ, ಪ್ರಯಾಣಿಕರ ಸುರಕ್ಷತೆಯೇ ನಮ್ಮ ಆದ್ಯ ಗಮನವಾಗಿದ್ದು, ಮಹಿಳೆ ಮತ್ತು ಮಕ್ಕಳ ಸುರಕ್ಷತೆಗಾಗಿ ಅನೇಕ ಪರಿಹಾರೋಪಾಯಗಳಿದ್ದು ಇದರ ಸದ್ಬಳಕೆ ಆಗಬೇಕು. ರೈಲ್ವೆ ಪ್ರಯಾಣ ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ಆರ್‍ಡಿಎಫ್ (ರೈಲ್ವೆ ಪ್ರೊಟೆಕ್ಷನ್ ಫೋರ್ಸ್) ಸಹಾಯವಾಣಿ 139 ಇದ್ದು, ಕಳೆದು ಹೋದ ಮಕ್ಕಳು, ಬೆಲೆಬಾಳುವ ವಸ್ತುಗಳು ಮತ್ತು ದೌರ್ಜನ್ಯಕ್ಕೊಳಗಾದ ಮಹಿಳೆಯರು ಹೀಗೆ ಸುರಕ್ಷತೆಗೆ ಸಂಬಂಧಿಸಿದಂತೆ ಸಹಾಯ ಒದಗಿಸಲಾಗುತ್ತಿದ್ದು, ಮಕ್ಕಳ ಕಲ್ಯಾಣ ಸಮಿತಿಯವರು ಸಹ ನಮ್ಮೊಂದಿಗೆ ಉತ್ತಮವಾಗಿ ಸ್ಪಂದಿಸುತ್ತಾರೆ ಎಂದು ತಿಳಿಸಿದರು.

ಉಪ ನಿರೀಕ್ಷಕ ಸಂತೋಷ್ ಗಾಂವ್ಕರ್ ಮಾತನಾಡಿ, ರೈಲ್ವೆ ಪ್ರಯಾಣದ ವೇಳೆ ಮಕ್ಕಳ ಕುರಿತು ಎಚ್ಚರಿಕೆ ವಹಿಸಬೇಕು. ಬೆಲೆ ಬಾಳು ವಸ್ತುಗಳು, ದಾಖಲೆಗಳ ಬಗ್ಗೆ ಜಾಗರೂಕರಾಗಿರಬೇಕು. ನಿಮ್ಮ ಸೇವೆಗಾಗಿ ಆರ್‍ ಪಿಎಫ್(ರೈಲ್ವೆ ಪ್ರೊಟೆಕ್ಷನ್ ಪೋರ್ಸ್)ವಿಭಾಗ ಇರುತ್ತದೆ. ಆರ್‍ಪಿಎಫ್ ಸಹಾಯವಾಣಿ ಸಂಖ್ಯೆ 139 ಗೆ ಕರೆ ನೀಡಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಅಥವಾ ಇನ್ನಾವುದೇ ರೀತಿಯ ತೊಂದರೆಯಾದಲ್ಲಿ ಕರೆ ಮಾಡಿ ಸಹಾಯ ಪಡೆಯಬಹುದಾದರೂ ಮಕ್ಕಳು, ಮಹಿಳೆಯರು, ಬೆಲೆ ಬಾಳುವ ವಸ್ತುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಮುಖ್ಯ ಎಂದ ಅವರು ರೈಲ್ವೆ ಹಳಿಗಳ ಬಳಿ ಜಾನುವಾರುಗಳನ್ನು ಹಾಗೂ ಅಸ್ವಸ್ಥರನ್ನು ಬಿಡಬಾರದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಸಹಾಯವಾಣಿ-1098 ನಿರ್ದೇಶಕ ಡಾ.ಫಾ.ಅಬ್ರಹಾಂ, ಮಕ್ಕಳು ಮತ್ತು ಮಹಿಳೆಯರ ಸಹಾಯಕ್ಕಾಗಿರುವ ಸಹಾಯವಾಣಿಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಪ್ರಯಾಣಿಕರಿಗೆ ಮಕ್ಕಳ ಸಹಾಯವಾಣಿ, ಸುರಕ್ಷಿತ ಪ್ರಯಾಣ ಹಾಗೂ ಜಾನುವಾರು ರಕ್ಷಣೆ ಮತ್ತು ಅಸ್ವಾಭಾವಿಕ ಸಾವು ತಡೆ ಕುರಿತಾದ ಕರಪತ್ರಗಳನ್ನು ಹಂಚಲಾಯಿತು.

ಕಾರ್ಯಕ್ರಮಕ್ಕೆ ರೈಲ್ವೇ ಸ್ಟೇಷನ್ ಮುಖ್ಯ ಅಧೀಕ್ಷಕರಾದ ಪ್ರಸನ್ನ ಚಾಲನೆ ನೀಡಿದರು. ಆರ್‍ಪಿಎಫ್ ನಿರೀಕ್ಷಕ ಕುಬೇರಪ್ಪ, ಆರ್‍ಪಿಎಸ್‍ಐ ಇಂದಿರಾ, ಉಪ ಅಧೀಕ್ಷಕ ಮೋಹನ್, ಮಕ್ಕಳ ಸಹಾಯವಾಣಿ ಸಂಯೋಜಕ ಪ್ರಮೋದ್, ರೈಲ್ವೆ ಇಲಾಖೆ ಹಾಗೂ ಇತರೆ ಸಿಬ್ಬಂದಿಗಳು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here