23.2 C
Shimoga
Sunday, November 27, 2022

ಸಕಲರಿಗೂ ಒಳಿತು ಬಯಸುವುದೇ ಧರ್ಮದ ಗುರಿ: ರಂಭಾಪುರಿ ಜಗದ್ಗುರುಗಳು


ಸಾಗರ : ಮತಗಳು ಹಲವಾದರೂ ಧರ್ಮ ಒಂದೇಯಾಗಿದೆ. ಹಲವು ಧರ್ಮ ಹಲವು ಆಚರಣೆಗಳಿದ್ದರೂ ಗುರಿ ಮಾತ್ರ ಮಾನವ ಕಲ್ಯಾಣವಾಗಿದೆ. ಸಕಲರಿಗೂ ಒಳಿತು ಬಯಸುವುದೇ ಧರ್ಮದ ಗುರಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ನಗರದ ಗಾಂಧಿ ಮೈದಾನದಲ್ಲಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.


ಯಾವಾಗಲೂ ನಾಶವಾಗದೇ ಇರುವುದಕ್ಕೆ ಧರ್ಮ ಎಂದು ಕರೆಯುತ್ತೇವೆ. ಧರ್ಮದ ಶಕ್ತಿಯನ್ನು ನಾಶಗೊಳಿಸುವುದು ಯಾರಿಂದಲೂ ಸಾಧ್ಯವಿಲ್ಲ. ನಾಶ ಮಾಡುವೆ ಅಂದವರೇ ಆ ಧರ್ಮದಿಂದ ನಾಶ ಹೊಂದುತ್ತಾರೆ. ಹಸಿದವನಿಗೆ ಅನ್ನ, ಬಾಯಾರಿದವಗೆ ನೀರು, ಕುರುಡನಿಗೆ ಕಣ್ಣು, ಪಕ್ಷಿಗೆ ರೆಕ್ಕೆ ಇದ್ದ ಹಾಗೆ ಧರ್ಮವಿದೆ. ಬದುಕು ಬದಲಾಗಬೇಕಾದರೆ ಬದುಕುವ ದಾರಿ ಸಹ ಬದಲಾಗಬೇಕಾಗುತ್ತದೆ. ಎಲ್ಲ ಧರ್ಮಗಳಲ್ಲಿ ಪರಮ ಸತ್ಯ ಅಡಗಿದೆ. ಅರಿತು ಆಚರಿಸಿದರೆ ಬದುಕು ಸಾರ್ಥಕಗೊಳ್ಳುತ್ತದೆ. ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರಾಗಲಿ ಬಸವಣ್ಣನವರಾಗಲಿ ವಿಶ್ವ ಬಂಧುತ್ವದ ಆದರ್ಶ ಮೌಲ್ಯಗಳನ್ನು ಬೋಧಿಸಿದ್ದಾರೆ ಎಂದರು.


ಸಮಾರಂಭ ಉದ್ಘಾಟಿಸಿದ ಶಾಸಕ ಹರತಾಳು ಹಾಲಪ್ಪ ಮಾತನಾಡಿ ಅಶಾಂತಿಯಿಂದ ತತ್ತರಿಸುತ್ತಿರುವ ಜೀವ ಜಗತ್ತಿಗೆ ಧರ್ಮವೊಂದೇ ದಿವ್ಯೌಷಧ. ಸಾತ್ವಿಕ ಸಮೃದ್ಧ ಸಮಾಜ ಕಟ್ಟಿ ಬೆಳೆಸುವ ಅವಶ್ಯಕತೆಯಿದೆ. ಶ್ರೀ ರಂಭಾಪುರಿ ಜಗದ್ಗುರುಗಳ ಧಾರ್ಮಿಕ ಚಿಂತನೆಗಳು ನಮ್ಮೆಲ್ಲರಿಗೂ ದಾರಿ ದೀಪವಾಗಿವೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಮಾನವ ಜನಾಂಗದ ಶ್ರೇಯಸ್ಸು ಧರ್ಮಾಚರಣೆಯಲ್ಲಿ ಅಡಗಿದೆ. ಆಧುನಿಕ ಯುಗದಲ್ಲಿ ಸ್ವಾರ್ಥ ಹೆಚ್ಚಾಗಿ ಎಲ್ಲೆಡೆ ಸಂಘರ್ಷ ಬೆಳೆಯುತ್ತಿರುವುದು ನೋವಿನ ಸಂಗತಿಯಾಗಿದೆ. ವೀರಶೈವ ಧರ್ಮ ಸಂಸ್ಕೃತಿಯಲ್ಲಿ ಸಕಲರಿಗೂ ಬಾಳಿ ಬದುಕಲು ಅವಕಾಶ ಕಲ್ಪಿಸಿದೆ ಎಂದರು.

ಜಿಲ್ಲಾ ಬಿ.ಜೆ.ಪಿ.ಅಧ್ಯಕ್ಷ ಟಿ.ಡಿ.ಮೇಘರಾಜ ಮಾತನಾಡಿ, ಸ್ವಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆ ಬೆಳೆಸಿಕೊಳ್ಳಬೇಕೆಂದರು. ಸಮ್ಮುಖ ವಹಿಸಿದ ಮಳಲಿ ಸಂಸ್ಥಾನಮಠದ ಡಾ|| ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಜೀವನ ಅಸ್ಥಿರ. ಧರ್ಮವೊಂದೆ ನಿತ್ಯ ಶಾಶ್ವತ. ಪೂರ್ವಜರ ಆದರ್ಶ ದಾರಿಯಲ್ಲಿ ಬದುಕು ಕಟ್ಟಿಕೊಳ್ಳಬೇಕೆಂದರು.

ಗೊಗ್ಗಿಹಳ್ಳಿ ಸಂಗಮೇಶ್ವರ ಶಿವಾಚಾರ್ಯರು, ಕೋಣಂದೂರು ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು ಸಮಾರಂಭದಲ್ಲಿ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.


ನಗರಸಭಾಧ್ಯಕ್ಷೆ ಶ್ರೀಮತಿ ಮಧುರಾ ಶಿವಾನಂದ, ನ್ಯಾಯವಾದಿ ಕೆ.ಬಸಪ್ಪಗೌಡ್ರು ಕೆರೋಡಿ, ಶಿವಮೊಗ್ಗದ ರುದ್ರಮುನಿ ಸಜ್ಜನ ಜಂಬಿಗಿ ವೀರಭದ್ರಪ್ಪ, ಅನಿಲ ಬರದವಳ್ಳಿ, ಕೆ.ವಿ.ಪ್ರವೀಣಕುಮಾರ ಇನ್ನೂ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಸಾಗರ ತಾಲೂಕ ಘಟಕದ ಅಧ್ಯಕ್ಷ ಶೇಖರಪ್ಪಗೌಡ್ರು ಬೇಸೂರು ವಹಿಸಿದ್ದರು. ಸಮಾರಂಭಕ್ಕೂ ಮುನ್ನ ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಗಾಂಧಿ ಮೈದಾನದ ವರೆಗೆ ಶ್ರೀ ರಂಭಾಪುರಿ ಜಗದ್ಗುರುಗಳವರನ್ನು ಅಲಂಕೃತ ಸಾರೋಟ ಉತ್ಸವದೊಂದಿಗೆ ಬರಮಾಡಿಕೊಂಡರು. ಕುಂಭ ಹೊತ್ತ ಮಹಿಳೆಯರು, ಆರತಿ ಹಿಡಿದ ಮುತ್ತೈದೆಯರು, ವೀರಗಾಸೆ, ಭಜನಾ ಮೇಳಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.


ಬೆಳಿಗ್ಗೆ ವೀರಶೈವ ಕಲ್ಯಾಣ ಮಂಟಪದಲ್ಲಿ ಲೋಕ ಕಲ್ಯಾಣಕ್ಕಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!