24.3 C
Shimoga
Friday, December 9, 2022

ಸತ್ಕಾರ್ಯಗಳಿಂದ ಶ್ರೇಯೋಭಿವೃದ್ಧಿ ಸಾಧ್ಯ ; ಶ್ರೀ ರಂಭಾಪುರಿ ಜಗದ್ಗುರುಗಳು


ಶಿಕಾರಿಪುರ : ಕಡೆನಂದಿಹಳ್ಳಿ ನವಂಬರ್ 10. ಸತ್ಕಾರ್ಯಗಳಿಂದ ಜೀವನದಲ್ಲಿ ಶ್ರೇಯೋಭಿವೃದ್ಧಿ ಸಾಧಿಸಲು ಸಾಧ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಶಿಕಾರಿಪುರ ತಾಲೂಕಿನ ಕಡೆನಂದಿಹಳ್ಳಿ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಕೈಕೊಂಡ ಜಪಯಜ್ಞ ಮಂಗಲ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.


ಬೆಳಕಿನಲ್ಲಿ ಬೆಳಕಿಗೆ ಬೆಲೆಯಿಲ್ಲದೇ ಇರಬಹುದು. ಆದರೆ ಕತ್ತಲೆಯಲ್ಲಿ ಕಿರು ದೀಪಕ್ಕೂ ದೊಡ್ಡದಾದ ಬೆಲೆಯಿದೆ. ಜಗದ ಕತ್ತಲೆ ಕಳೆಯಲು ಸೂರ್ಯ ಬೇಕು. ಜನರ ಭಾವನೆ ಬೆಳಗಲು ಗುರು ಬೇಕು. ಹುಟ್ಟು ಸಾವು ಮನುಷ್ಯನ ಕೈಯಲ್ಲಿ ಇಲ್ಲ. ಆದರೆ ಬದುಕು ನಮ್ಮ ಕೈಯಲ್ಲಿದೆ. ಮಲತ್ರಯಗಳನ್ನು ನಿರ್ಮೂಲನ ಮಾಡಿ ಶಿವಜ್ಞಾನದ ಬೆಳಕನ್ನು ಬೀರುವಾತನೇ ಶ್ರೀ ಗುರು. ಕರ್ಮ ಕತ್ತಲೆ ಕಳೆದು ಧರ್ಮ ಬೀಜ ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಶ್ರೀ ಗುರುವಿನ ಮಹಿಮೆ ಎಷ್ಟು ಕೊಂಡಾಡಿದರೂ ಕಡಿಮೆ. ಒಡೆದ ಮನಸ್ಸುಗಳನ್ನು ಬೆಸೆಯುವುದೇ ನಿಜವಾದ ಧರ್ಮದ ಧ್ಯೇಯವಾಗಿದೆ. ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವ ಸಿದ್ಧಾಂತಗಳು ಜೀವನ ವಿಕಾಸಕ್ಕೆ ದಾರಿ ದೀಪವಾಗಿವೆ. ಮನೋವಾಂಛಿತ ಫಲಸಿದ್ಧಿ ಮತ್ತು ಲೋಕ ಕಲ್ಯಾಣಕ್ಕಾಗಿ ಕಡೆನಂದಿಹಳ್ಳಿ ತಪೋ ಕ್ಷೇತ್ರದಲ್ಲಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಕೈಕೊಂಡು ಬಂದ ಕೋಟಿ ಶಿವಪಂಚಾಕ್ಷರಿ ಜಪಯಜ್ಞ, ಲಕ್ಷ ಶಿವಪಂಚಾಕ್ಷರಿ ಹೋಮ, ಸಹಸ್ರ ಬಿಲ್ವಾರ್ಚನೆ ಪೂಜೆ ಮತ್ತು ಪುರಾಣ ಪ್ರವಚನ ಇಂದು ಮಹಾಮಂಗಲಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಶ್ರೀಗಳವರ ಲೋಕಕಲ್ಯಾಣ ಸತ್ಕಾರ್ಯಗಳು ನಿರಂತರ ಜರುಗಲೆಂದು ಬಯಸಿ ರೇಷ್ಮೆ ಮಡಿ ಫಲ ಪುಷ್ಪವಿತ್ತು ಶುಭ ಹಾರೈಸಿದರು.


ಸಮಾರಂಭವನ್ನು ಉದ್ಘಾಟಿಸಿದ ರಾಜ್ಯ ಬಿ.ಜೆ.ಪಿ.ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರ ಸಂಪೂರ್ಣ ಕೃಪಾ ಕಟಾಕ್ಷ, ಶ್ರೀ ಮಳೆಮಲ್ಲೇಶ್ವರ ಸ್ವಾಮಿಯ ಆಶೀರ್ವಾದ ಹಾಗೂ ರೇವಣಸಿದ್ಧೇಶ್ವರ ಶಿವಾಚಾರ್ಯರ ತಪೋಬಲದಿಂದ ಪುಣ್ಯಾಶ್ರಮ ಅಭಿವೃದ್ಧಿ ಹೊಂದುತ್ತಿರುವುದು ಈ ಭಾಗದ ಜನತೆಯ ಸೌಭಾಗ್ಯವಾಗಿದೆ. ಇಲ್ಲಿಗೆ ಭೇಟಿ ನೀಡುವವರಿಗೆ ಆಧ್ಯಾತ್ಮದ ತಂಪು ದೊರೆಯುತ್ತಿದೆ. ಈ ಕ್ಷೇತ್ರ ಇನ್ನೂ ಬೆಳೆದು ಪ್ರವಾಸಿ ತಾಣವಾಗಬೇಕೆಂಬುದು ತಮ್ಮ ಸದಾಶಯವಾಗಿದೆ ಎಂದರು. ಶಿವಪಂಚಾಕ್ಷರಿ ಬರಹ ಪುಸ್ತಕವನ್ನು ಗುಡಗಿನಕೊಪ್ಪದ ಲಿಂಗಪ್ಪ ಶರಣರು ಬಿಡುಗಡೆ ಮಾಡಿದರು. ನೇತೃತ್ವ ವಹಿಸಿದ ದುಗ್ಲಿ-ಕಡೆನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಭಕ್ತರ ಕಲ್ಯಾಣಕ್ಕಾಗಿ 108 ದಿನಗಳಿಂದ ನಡೆದು ಬಂದ ಎಲ್ಲ ಹೋಮ ಹವನಗಳು ಇಂದು ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಮಂಗಲಗೊಂಡಿರುವುದು ಸಂತೋಷ ತಂದಿದೆ. ಈ ಎಲ್ಲ ಕಾರ್ಯಗಳಲ್ಲಿ ಭಕ್ತರು ನೀಡಿರುವ ಸಹಕಾರ ತೋರಿಸಿರುವ ಪ್ರೇಮ ಮರೆಯುವಂತಿಲ್ಲ. ಪುರೋಹಿತ ವರ್ಗದವರ ಸಹಕಾರವೂ ದೊಡ್ಡದಾಗಿದೆ ಎಂದರು.

ಸಿಂಧನೂರು-ಕನ್ನೂರಿನ ಸೋಮನಾಥ ಶಿವಾಚಾರ್ಯರು, ಕಾರ್ಜುವಳ್ಳಿ ಸದಾಶಿವ ಶಿವಾಚಾರ್ಯರು, ಚನ್ನಗಿರಿ ಕೇದಾರ ಶಿವಶಾಂತವೀರ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ರಾಣೆಬೆನ್ನೂರಿನ ಶಿವಯೋಗಿ ಶಿವಾಚಾರ್ಯರು ಉಪಸ್ಥಿತರಿದ್ದು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು.


ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಕೆ.ರೇವಣಪ್ಪ ಕೊಳಗಿ, ಡಿಸಿಸಿ ಬ್ಯಾಂಕ ಅಧ್ಯಕ್ಷ ಚನ್ನವೀರಪ್ಪ, ಅ.ಭಾ.ವೀರಶೈವ-ಲಿಂಗಾಯತ ಮಹಾಸಭಾ ಶಿಕಾರಿಪುರ ತಾಲೂಕ ಅಧ್ಯಕ್ಷ ಎನ್.ವಿ.ಈರೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ರೋಣದ ಶೇಖರಯ್ಯ ಶಾಸ್ತ್ರಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು.

ಅ.ಕ.ವೀ.ಪುರೋಹಿತ ಮಹಾಸಭಾ ಅಧ್ಯಕ್ಷ ವೇ.ಚನ್ನೇಶ ಶಾಸ್ತ್ರಿಗಳು ಸ್ವಾಗತಿಸಿದರು.

ಗದಗಿನ ವೀರೇಶ ಕಿತ್ತೂರ ಇವರಿಂದ ಸಂಗೀತ. ಶಿವಮೊಗ್ಗದ ಶಾಂತಾ ಆನಂದ, ಕಡೇನಂದಿಹಳ್ಳಿ ಶಿಕ್ಷಕ ನಾಗರಾಜ ಹುಲ್ಲಿನಕೊಪ್ಪ ಇವರಿಂದ ನಿರೂಪಣೆ ಜರುಗಿತು. ಮಹಾತಪಸ್ವಿ ಶ್ರೀಮದುಜ್ಜಯಿನಿ ಜಗದ್ಗುರು ಲಿಂ.ಶ್ರೀ ಸಿದ್ಧಲಿಂಗ ಭಗವತ್ಪಾದರ ಪುರಾಣ ಪ್ರವಚನವನ್ನು ವೇ. ಶೇಖರಯ್ಯ ಶಾಸ್ತ್ರಿಗಳು ಮಂಗಲಗೊಳಿಸಿದರು.

ಇದಕ್ಕೂ ಮುನ್ನ ಸಹಸ್ರ ಲಿಂಗಾರ್ಚನೆ ವಿಶೇಷ ಪೂಜೆ ನಡೆದ ನಂತರ ಶ್ರೀ ರಂಭಾಪುರಿ ಜಗದ್ಗುರುಗಳಿಂದ ಹೋಮದ ಪೂರ್ಣಾಹುತಿ ಮಹಾಮಂಗಳಾರತಿ ನಡೆಯಿತು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!